ಸಾಹಿತ್ಯ ಸಮ್ಮೇಳನ ಸ್ವಾಭಿಮಾನದ ಪ್ರತೀಕ: ಶಾಸಕ ದೊಡ್ಡನಗೌಡ ಪಾಟೀಲ

KannadaprabhaNewsNetwork | Published : Jan 4, 2025 12:34 AM

ಸಾರಾಂಶ

ಕುಷ್ಟಗಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.

ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಭಿಮಾನದ ಪ್ರತೀಕವಾಗಿದ್ದು, ನಮ್ಮನ್ನು ನಾವು ತೊಡಗಿಸಿಕೊಂಡು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಸಮ್ಮೇಳನ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕುಷ್ಟಗಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

ಸಮ್ಮೇಳನದ ಕಾರ್ಯಗಳು ತ್ವರಿತಗತಿಯಲ್ಲಿ ನಡೆದಿರುವುದು ಸಂತಸದ ಸಂಗತಿಯಾಗಿದ್ದು, ಹೂಲಗೇರಾ ಗ್ರಾಮಸ್ಥರ ಜೊತೆಗೆ ತಾಲೂಕಿನ ಪ್ರತಿಯೊಬ್ಬರೂ ಕಾರ್ಯಕ್ರಮವನ್ನು ಯಶಸ್ವಿ ಮಾಡುವಲ್ಲಿ ಶ್ರಮಿಸಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉತ್ತಮ ಕಾರ್ಯಕ್ರಮಗಳು ಜರುಗುತ್ತಿವೆ. ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಕುಷ್ಟಗಿಯಷ್ಟು ಸಮ್ಮೇಳನಗಳು ನಡೆದಿಲ್ಲ. ಕ್ರೀಯಾಶೀಲವಾಗಿ ಕಾರ್ಯಕ್ರಮ ಮಾಡುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಜೊತೆಗೆ ತಾಲೂಕಿನ ಎಲ್ಲರೂ ಕೈಜೋಡಿಸುವ ಮೂಲಕ ಹೂಲಗೇರಾದಲ್ಲಿ ನಡೆಯುವ ಸಮ್ಮೇಳನ ಯಶಸ್ವಿ ಮಾಡೋಣ ಎಂದರು.

ಜಿಪಂ ಮಾಜಿ ಸದಸ್ಯ ಪ್ರಕಾಶ ರಾಠೋಡ ಹಾಗೂ ತಾಪಂ ಮಾಜಿ ಸದಸ್ಯ ಸುರೇಶ ಕುಂಟನಗೌಡರ ಮಾತನಾಡಿ, ಕುಷ್ಟಗಿ ತಾಲೂಕು ಸಮ್ಮೇಳನ ಹೂಲಗೇರಾದಲ್ಲಿ ನಡೆಯುತ್ತಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆ ತರುವ ಸಂಗತಿ ಎಂದರು.

ಲಾಂಛನದ ವಿಶೇಷತೆ

13ನೇ ಸಮ್ಮೇಳನದ ಲಾಂಛನದಲ್ಲಿ ಕಬ್ಬರಗಿ ಜಲಪಾತ, ಗುಂಡುಮಲ್ಲೇಶ್ವರ ದೇವಸ್ಥಾನ, ಚಂದಾಲಿಂಗೇಶ್ವರ ದೇವಸ್ಥಾನ, ದಾದೇಪೀರ ದರ್ಗಾ, ಹೂಲಗೇರಾ ಬಾವಿ, ಹೂಲಗೇರಿ ಸೋಮೇಶ್ವರ ದೇವಸ್ಥಾನ, ಸಂಗಮೇಶ್ವರ ದೇವಸ್ಥಾನ ಹಾಗೂ ಸ್ಮಾರಕಗಳು ಮತ್ತು ದೇವಾಲಯಗಳನ್ನು ಬಳಸಿಕೊಳ್ಳಲಾಗಿದ್ದು, ಲಾಂಛನ ಸುಂದರವಾಗಿ ಮೂಡಿಬಂದಿದೆ.

ಕೇಂದ್ರ ಕಸಾಪ ಪ್ರತಿನಿಧಿ ನಬೀಸಾಬ ಕುಷ್ಟಗಿ, ರವೀಂದ್ರ ಬಾಕಳೆ, ನಟರಾಜ ಸೋನಾರ ಮಾತನಾಡಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಹನುಮೇಶ ಗುಮಗೇರಿ, ಚಂದಪ್ಪ ಹಕ್ಕಿ, ಅಬ್ದುಲ್ ಕರೀಂ ವಂಟೆಳಿ, ಶರಣಪ್ಪ ವಡಗೇರಿ, ಶ್ರೀನಿವಾಸ ಜಹಗಿರದಾರ, ಮುತ್ತಣ್ಣ ಕರಡಿ, ಚಂದ್ರಶೇಖರ ಗೌಡರ, ಚಂದಪ್ಪ ಗುಡಿಮನಿ, ಮುತ್ತಣ್ಣ ಚವ್ಹಾಣ, ಆನಂದ, ಪರಶುರಾಮ, ಅಬ್ದುಲ್ ರಜಾಕ ಟೇಲರ್, ನಜೀರಸಾಬ ಮೂಲಿಮನಿ , ಬಸವರಾಜ ಉಪಲದಿನ್ನಿ, ರವೀಂದ್ರ ಬಳಿಗಾರ, ನಿಂಗಪ್ಪ ಸಜ್ಜನ, ಶಿವಾನಂದ ಹಿರೇಮಠ, ಮಂಜುನಾಥ ಗುಳೇದಗುಡ್ಡ, ಶೈಲಜಾ ಬಾಗಲಿ, ಮಯೂರಿ ಮಾಟಲದಿನ್ನಿ, ಲಲಿತಮ್ಮ ಹಿರೇಮಠ, ಶೇಖರ ಹೊರಪ್ಯಾಟಿ, ಶ್ರೀನಿವಾಸ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.

Share this article