ಅಂಕೋಲಾ:
ಹಿರಿಯ ಸಾಹಿತಿ, ಚಿಂತಕ, ರಂಗಕರ್ಮಿ ವಿಷ್ಣು ನಾಯ್ಕ ಅವರು ‘ನೆರೆ ಮನೆಯಲ್ಲಿ ಹಸಿದವರು ಇರುವಾಗ ನಾನು ಉಣ್ಣಲಾರೆ’ ಎಂಬ ಧ್ಯೇಯವನ್ನಿಟ್ಟುಕೊಂಡು ಸಾರ್ಥಕ ಬದುಕು ನಡೆಸಿದ್ದಲ್ಲದೇ ಅಂಕೋಲೆಯ ಸಾಹಿತ್ಯ ಕ್ಷೇತ್ರವನ್ನು ಅಂಬರಕ್ಕೇರಿಸಿದವರು ಎಂದು ಕವಿ, ಬರಹಗಾರ ಶಾಂತಾರಾಮ ನಾಯಕ ಹಿಚ್ಕಡ ಹೇಳಿದರು.ಅವರು ಇಲ್ಲಿಮ ಕರ್ನಾಟಕ ಸಂಘದ ಕನ್ನಡ ಭವನದಲ್ಲಿ ಆಯೋಜಿಸಿದ್ದ ವಿಷ್ಣು ನಾಯ್ಕ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ವಿಷ್ಣು ನಾಯ್ಕ ಅವರು ಕರ್ನಾಟಕ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.ಅಧ್ಯಕ್ಷತೆ ವಹಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ, ವಿಷ್ಣು ನಾಯ್ಕ ಅವರು ಅಂಕೋಲೆಗೆ ಚಿನ್ನದ ಕವಚ ಇದ್ದಂತೆ. ಅವರಿಂದ ಅಂಕೋಲೆಯ ಹೆಸರು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣರಾಗಿದ್ದಾರೆ. ಅವರ ಹೆಸರಿನಲ್ಲಿ ವರ್ಷಕ್ಕೊಮ್ಮೆ ಕಾರ್ಯಕ್ರಮ ನಡೆಯಬೇಕು ಎಂದು ಅಭಿಪ್ರಾಯ ತಿಳಿಸಿದರು.ಹಿರಿಯ ಚಿಂತಕ ಕಾಳಪ್ಪ ಎನ್. ನಾಯಕ ಮಾತನಾಡಿ, ಕರ್ನಾಟಕ ಸಂಘಕ್ಕೆ ಕಟ್ಟಡ ನಿರ್ಮಾಣವಾಗುವಲ್ಲಿ ವಿಷ್ಣು ನಾಯ್ಕ ಅವರ ಕಾರ್ಯ ದೊಡ್ಡದಿದೆ. ಅವರ ಸಾಹಿತ್ಯ ಮತ್ತು ಸಂಘಟನೆ ಕಾರ್ಯ ಎಲ್ಲರಿಗಿಂತ ಹಿರಿದಾದು ಎಂದರು. ಸಾಹಿತಿ, ಕವಿ ವಿಠ್ಠಲ ಗಾಂವಕರ, ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಕವಿ ನಾಗೇಂದ್ರ ನಾಯಕ ತೊರ್ಕೆ, ನಿವೃತ್ತ ಅಧ್ಯಾಪಕ ಶ್ರೀಧರ ನಾಯಕ, ಮುಖ್ಯಾಧ್ಯಾಪಕ ಪ್ರಭಾಕರ ಬಂಟ, ಕರ್ನಾಟಕ ಸಂಘದ ಕಾರ್ಯದರ್ಶಿ ಮಹೇಶ ಬಿ. ನಾಯಕ, ಶಿಕ್ಷಕ ರಾಜೇಶ ನಾಯಕ, ನಿವೃತ್ತ ಅಧ್ಯಾಪಕ ಎಸ್.ಆರ್. ನಾಯಕ, ಸಂಗಾತಿ ರಂಗಭೂಮಿಯ ಅಧ್ಯಕ್ಷ ಕೆ. ರಮೇಶ ಮಾತನಾಡಿದರು. ವಿಷ್ಣು ನಾಯ್ಕ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂತಾಪ ಸಲ್ಲಿಸಲಾಯಿತು.ರಸ್ತೆಗೆ ಹೆಸರಿಡಿವಿಷ್ಣು ನಾಯ್ಕ ಅವರನ್ನು ಸದಾ ನೆನಪಿಸುವ ಬೇರೆ ಬೇರೆ ಕಾರ್ಯಕ್ರಮಗಳ ಜೊತೆಗೆ ಕೆ.ಸಿ. ರಸ್ತೆ ಅರಳಿ ಕಟ್ಟೆಯಿಂದ ಬಾಳೆಗುಳಿ ಪೋಸ್ಟ್ ವರೆಗಿನ ರಸ್ತೆಗೆ ವಿಷ್ಣು ನಾಯ್ಕರ ಹೆಸರಿಟ್ಟು ಸ್ಮರಿಸಬೇಕು. ಈ ಬಗ್ಗೆ ಪುರಸಭೆ ಮುತುವರ್ಜಿವಹಿಸುವುದು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಠರಾಯಿಸಲಾಯಿತು.