ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಹಲವು ಸಾಹಿತಿಗಳು ಮತ್ತು ಜನಪದರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದೇ ರೀತಿ ತನ್ನೂರಿನ ಹಿರಿಮೆ ಗರಿಮೆ ಅರಿತು ಸಂಗ್ರಹಿಸಿ ಆ ಮೂಲಕ ನಾಡಿನ ಶ್ರೇಷ್ಠತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಾಲೂಕಿನ ಕೆಂಬಾರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ. ತಿಮ್ಮರಾಯಿಗೌಡ ಹೇಳಿದರು.87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ತಾಲೂಕಿನ ಬಿ.ಜಿ. ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನವೆಂಬರ್ ನಿತ್ಯೋತ್ಸವದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ನಾಗಮಂಗಲ ಸಾಹಿತಿಗಳ ಕೊಡುಗೆ ವಿಷಯ ಕುರಿತು ಮಾತನಾಡಿದರು.
ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಂ. ಶ್ರೀಕಂಠಯ್ಯ ಅವರು ಹೆಚ್ಚು ಕನ್ನಡ ಬಳಸುವ ಮಂಡ್ಯ ಜಿಲ್ಲೆಯ ಬೆಳ್ಳೂರಿನವರು. ನವೋದಯ ಸಾಹಿತ್ಯಕ್ಕೆ ಮುನ್ನುಡಿ ಬರೆದವರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ವೇಳೆ ಕನ್ನಡ ಎಂಎ ತರಗತಿ ಆರಂಭ ಮತ್ತು ಪ್ರಥಮ ಬಾರಿಗೆ ತಮ್ಮ ಸ್ವಂತ ಹಣದಿಂದ ಅಚ್ಚುಕೂಟ ಪ್ರಾರಂಭಿಸಿದವರು ಎಂದರು.ತಾಲೂಕಿನ ಹಂದೇನಹಳ್ಳಿಯ ಕೆಂಪಣ್ಣಗೌಡ ಮೂಡಲಪಾಯ ಯಕ್ಷಗಾನದ ಮೊದಲಿಗರು, ಹ.ಕ. ರಾಜೇಗೌಡ, ಬಿಂಡಿಗನವಿಲೆ ವೆಂಕಟಚಾರ್ಯ, ಬಿ.ಸಿ. ರಾಮಚಂದ್ರಶರ್ಮ, ನಾಗತಿಹಳ್ಳಿ ಚಂದ್ರಶೇಖರ, ಕ.ರಾ. ಕೃ?ಸ್ವಾಮಿ, ಹೆಚ್.ಎಲ್. ನಾಗೇಗೌಡ, ಜಿ.ಶಂ. ಪರಮಶಿವಯ್ಯ, ಡಾ. ರಾಜಾರಾಮಣ್ಣ, ಗರುಡಾಚಾರ್, ಎಂ ಶಂಕರಲಿಂಗೇಗೌಡರಂತಹ ಎಲ್ಲ ದಾರ್ಶನಿಕರು ಹಾಗೂ ಅಮ್ಮ ಹೇಳಿದ ಎಂಟು ಸುಳ್ಳುಗಳು ಕರ್ತೃ ಎಂ. ಆರ್. ಮಣಿಕಾಂತ್ ಸೇರಿದಂತೆ ತಾಲೂಕಿನ ಅನೇಕ ಮಹನೀಯರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಡಾ. ಎ.ಟಿ. ಶಿವರಾಮು ಮಾತನಾಡಿ, ನಿತ್ಯ ವ್ಯವಹಾರಕ್ಕಾಗಿ ಯಾವ ಭಾಷೆಯನ್ನಾದರೂ ಕಲಿಯಿರಿ. ಆದರೆ, ಮಾತೃಭಾಷೆ ಕನ್ನಡವೇ ಹೃದಯದ ಭಾಷೆಯಾಗಬೇಕು. ರಾಷ್ಟ್ರೀಯ ಶಿಕ್ಷಣ ದಿನವಾದ ಇಂದು ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂತಹ ವಿಶಿಷ್ಠ ಕಾರ್ಯಕ್ರಮ ಸಾಕಾರಗೊಂಡಿರುವುದೇ ವಿಶೇಷವಾಗಿದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್. ಚಂದ್ರಶೇಖರ್ ಮಾತನಾಡಿ, ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಿನಾದ್ಯಂತ ನವೆಂಬರ್ ನಿತ್ಯೋತ್ಸವ ನ. ೧ರಂದು ತಾಲೂಕಿನ ಹೊನ್ನಾವರದಲ್ಲಿ ಉದ್ಘಾಟನೆಗೊಂಡು ನ.೩೦ರಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ ಸಮಾರೋಪ ಗೊಳ್ಳುತ್ತಿದೆ ಎಂದು ತಿಳಿಸಿದರು.
ಈ ವೇಳೆ ಸೈಕಲ್ ಜಾಥಾ, ರಸಪ್ರಶ್ನೆ, ಉಪನ್ಯಾಸಗಳು ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿವೆ. ಲೋಕಪಾವನಿ, ವೀರ ವೈಷವಿ, ಕೇತಕ, ದಾಯ ಮತ್ತು ಜಾಗೀರ್ ಎಂಬ ಐದು ನದಿಗಳ ಉಗಮ ಸ್ಥಾನದ ತಿಳಿವು ಮತ್ತು ನಾಗಮಂಗಲದ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ನಿತ್ಯೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಮಾಡೆಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ, ಬಿಇಡಿ ಕಾಲೇಜು ಪ್ರಾಧ್ಯಾಪಕ ಎ.ಸಿ. ದೇವಾನಂದ್, ಎ.ಎಚ್. ಗೋಪಾಲ್, ವಿ.ಲೋಕೇಶ್, ಎನ್.ಎಸ್.ಸೌಮ್ಯ, ರಾಜಶೇಖರ್‌ಮೂರ್ತಿ ಸೇರಿದಂತೆ ಹಲವರು ಇದ್ದರು.