ಸೈದಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರದಂತೆ, ಯಾದಗಿರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ತಿರಸ್ಕೃತ ವಿವಾದ ಮಧ್ಯೆ, ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಸೋಮವಾರ (ಅ.27) ಸ್ವಯಂ ಸೇವಕರ ಪಥಸಂಚಲನ ಯಾವುದೇ ಅಡೆತಡೆಯಿಲ್ಲದೆ, ಶಾಂತಿಯಿಂದ ಯಶಸ್ವಿಯಾಗಿ ನಡೆಯಿತು.
ಹಾಗೆ ನೋಡಿದರೆ, ಸಚಿವ ಪ್ರಿಯಾಂಕ್ ಖರ್ಗೆ ಪತ್ರದಿಂದ ಮುನ್ನೆಲೆಗೆ ಬಂದ ಆರೆಸ್ಸೆಸ್ ವಿವಾದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಕ್ಷೇತ್ರ ವ್ಯಾಪ್ತಿಗೊಳಪಡುವ ಗುರುಮಠಕಲ್‌ನಲ್ಲಿ ಪಥಸಂಚಲನ ಮನವಿಗೆ ಆಡಳಿತ ತಿರಸ್ಕರಿಸಿದಾಗ, ಗುರುಮಠಕಲ್ ಮತಕ್ಷೇತ್ರದ ಸೈದಾಪುರದಲ್ಲೂ ಪಥಸಂಚಲನ ನಡೆಯಲಿಕ್ಕಿಲ್ಲ ಎಂಬ ಲೆಕ್ಕಾಚಾರಗಳನ್ನು ಹುಸಿ ಮಾಡುವ ಮೂಲಕ, ಪಥಸಂಚಲನದಲ್ಲಿ ಸ್ವಯಂ ಸೇವಕರಲ್ಲಿ ಉತ್ಸಾಹ ಇಮ್ಮಡಿಸಿದ್ದುದು ಕಂಡುಬಂತು.ಜಿಲ್ಲಾಡಳಿತದಿಂದ ಅನುಮತಿ ಪಡೆದು, ಸರಕಾರದ ನಿಯಮ ಪಾಲಿಸಿಕೊಂಡು ಶಾಂತಿಯುತವಾಗಿ ಆಂಭವಾದ ಪಥಸಂಚಲನ, ಪಟ್ಟಣದ ಮಹಾವೀರ್ ಶಾಲೆಯಿಂದ ಅಂಬಿಗರ ಚೌಡಯ್ಯ, ಹೇಮ್ಮರೆಡ್ಡಿ ಮಲ್ಲಮ್ಮ, ಕನಕದಾಸ, ಡಾ.ಬಾಬು ಜಗಜೀವನರಾಮ್, ಡಾ.ಅಂಬೇಡ್ಕರ್, ರೈಲು ನಿಲ್ದಾಣ, ಬಸವೇಶ್ವರ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಮಾರ್ಗದಲ್ಲಿ ಸಂಚರಿಸಿತು. ಮಕ್ಕಳು ಸೇರಿದಂತೆ ಯುವಕರು, ಹಿರಿಯ ನಾಗರಿಕರು ಗಣವೇಷಧಾರಿಗಳಾಗಿ ಪರೇಡ್‌ನಲ್ಲಿ ಗಮನ ಸೆಳೆದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
* ಗಣವೇಷಧಾರಿಗಳ ಮೇಲೆ ಜನರ ಪುಷ್ಪ ಅರ್ಪಣೆ :ಪಟ್ಟಣದ ಬಹುತೇಕ ವ್ಯಾಪಾರಸ್ಥರು, ಜನರು ತಮ್ಮ ಅಂಗಡಿಗಳ ಮುಂದೆ ನಿಂತು, ಆರ್‌ಎಸ್‌ಎಸ್ ಸ್ವಯಂ ಸೇವಕರು ಆಗಮಿಸುತ್ತಿದಂತೆಯೇ ಅವರಿಗೆ, ಪುಷ್ಪ ಮಳೆಗೈದರು. ಇತ್ತ ಮಹಿಳೆಯರು ರಸ್ತೆ ಉದ್ದಗಲಕ್ಕೂ ಚಿತ್ತಚಿತ್ತಾರದ ರಂಗೋಲಿ ಚಿತ್ತಾರ ಬಿಡಿಸಿ ಭಾರತ ಮಾತೆ ಸೇರಿದಂತೆ ದೇಶಭಕ್ತರ ಭಾವಚಿತ್ರವಿಟ್ಟ ಸ್ವಯಂ ಸೇವಕರಿಗೆ ಅದ್ಧೂರಿ ಸ್ವಾಗತ ಕೋರಿದರು.