ಸೈಪುದ್ದಿನ್ ಕೊಲೆ ಪ್ರಕರಣದ 6 ಮಂದಿ ಆರೋಪಿಗಳನ್ನು ಮಾಫಿಯಾ ಅಥವಾ ಗ್ಯಾಂಗ್ ಎಂದು ಪರಿಗಣಿಸಿ, ಅವರ ಮೇಲೆ ಇದೀಗ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ) ಕಾಯ್ದೆಯನ್ನು ಅಳವಡಿಸಲಾಗಿದೆ
ಉಡುಪಿ: ಕಳೆದ ಸೆ. 27ರಂದು ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದಲ್ಲಿ ಬಸ್ ಉದ್ಯಮಿ ಸೈಪುದ್ದಿನ್ ಕೊಲೆ ಪ್ರಕರಣದ 6 ಮಂದಿ ಆರೋಪಿಗಳನ್ನು ಮಾಫಿಯಾ ಅಥವಾ ಗ್ಯಾಂಗ್ ಎಂದು ಪರಿಗಣಿಸಿ, ಅವರ ಮೇಲೆ ಇದೀಗ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ) ಕಾಯ್ದೆಯನ್ನು ಅಳವಡಿಸಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಅಂದು ಫೈಜಲ್ ಖಾನ್ (27) ಎಂಬಾತ ಮಣಿಪಾಲದಲ್ಲಿರುವ ಸೈಯಿಪುದ್ದಿನ್ ಮನೆಗೆ ಬಂದು ಬಸ್ ವ್ಯವಹಾರ ಕುರಿತು ಮಾತನಾಡಲು ಮಂಗಳೂರಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ, ದಾರಿ ಮಧ್ಯೆ ಮಲ್ಪೆಯಲ್ಲಿ ಮೊಹಮ್ಮದ್ ಶರೀಫ್ (37) ಮತ್ತು ಅಬ್ದುಲ್ ಶುಕುರ್ (43) ಅವರು ಸೇರಿಕೊಂಡ, ಅಲ್ಲಿಂದ ಕೊಡವೂರು ಗ್ರಾಮದಲ್ಲಿರುವ ಸೈಫುದ್ದೀನ್‌ನ ಇನ್ನೊಂದು ಮನೆಗೆ ಕರೆದುಕೊಂಡಿ ಹೋಗಿ ಮೂವರು ಆರೋಪಿಗಳು ಮಚ್ಚಿನಿಂದ ಆತನ ತಲೆ ಮತ್ತು ಬೆನ್ನಿಗೆ ಕಡಿದು ಕೊಲೆ ಮಾಡಿ, ಪರಾರಿಯಾಗಿದ್ದರು.ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ, ಮರುದಿನನೇ ಫೈಸಲ್ ಖಾನ್, ಶರೀಫ್ ಮತ್ತು ಅಬ್ದುಲ್ ಶುಕುರ್ ಅವರನ್ನು ಬಂಧಿಸಿದ್ದರು. ನಂತರ ಕೊಲೆಗೆ ಒಳಸಂಚು ರೂಪಿಸಿದ್ದ ರಿಧಾ ಶಭನಾ (27) ಎಂಬಾಕೆ ಮತ್ತು ಆಯುಧಗಳನ್ನು ಒದಗಿಸಿದ್ದ ಮಾಲಿ ಮೊಹಮ್ಮದ್ ಸಿಯಾನ್ (31) ಅವರನ್ನು ಬಂಧಿಸಲಾಗಿದೆ. ಆದರೆ ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.ಆರೋಪಿಗಳು ಸಂಘಟಿತರಾಗಿ ಈ ಅಪರಾಧ ಪ್ರಕರಣವನ್ನು ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದ್ದು, ಅದರಂತೆ ಅವರ ಮೇಲೆ ಕೋಕ ಕಾಯ್ದೆಯನ್ನು ಹೇರಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.ಏನಿದು ಕೋಕಾ ಕಾಯ್ದೆ 2000 ?
ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆ 2000ರಲ್ಲಿ ಕರ್ನಾಟಕದಲ್ಲಿ ಅಪರಾಧಿ ಕೃತ್ಯದಲ್ಲಿ ತೊಡಗಿರುವ ಗ್ಯಾಂಗ್ ಅಥವಾ ಮಾಫಿಯಾವನ್ನು ಬಗ್ಗುಬಡಿಯಲು ಜಾರಿಗೆ ತರಲಾಗಿರುವ ವಿಶೇಷ ಕಾಯ್ದೆ ಇದು. ಈ ಕಾಯ್ದೆಯಡಿ ಆರೋಪಿಗಳಿಗೆ ವರ್ಷಾನುಗಟ್ಟಲೇ ಜಾಮೀನು ಸಿಗುವುದು ಕಷ್ಟಕರವಾಗಿರುತ್ತದೆ. ಈ ಕಾಯ್ದೆಯಡಿ ಆರೋಪಿಗಳ ಆಸ್ತಿ, ಸಂಪತ್ತನ್ನು ಮುಟ್ಟುಗೋಲು ಹಾಕಲು ಅವಕಾಶವಿದೆ, ಅಪರಾಧ ಸಾಬೀತಾದರೇ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ. ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.