- ಉಡುಪಿ ನಂತರ ಕನಕದಾಸರು ತಿರುಪತಿಗೆ ಪ್ರಯಾಣಿಸುವಾಗ ಕಡೂರಿನಲ್ಲಿ ತಂಗಿದ್ದು ನಮ್ಮ ಸೌಭಾಗ್ಯ.
ಕನ್ನಡಪ್ರಭ ವಾರ್ತೆ ಕಡೂರುಸಂತರು, ದಾರ್ಶನಿಕರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸದೆ, ವಿಶ್ವ ಮಾನವರಂತೆ ಕಾಣಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕು ಪಂಚಾಯತಿಯಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಕಡೂರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಕನಕದಾಸರ 538 ನೇ ಜಯಂತಿ ಆಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು 15 ನೇ ಶತಮಾನದಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಜಾತಿ ತಾರತಮ್ಯ ನಿವಾರಣೆಗೆ ಹೋರಾಡಿದರು. ಉಡುಪಿ ನಂತರ ಕನಕದಾಸರು ತಿರುಪತಿಗೆ ಪ್ರಯಾಣಿಸುವಾಗ ಕಡೂರಿನಲ್ಲಿ ತಂಗಿದ್ದು ನಮ್ಮ ಸೌಭಾಗ್ಯ.ಅವರು ಕೀರ್ತನೆಯ ಮೂಲಕ ಜನಮಾನಸದಲ್ಲಿದ್ದು, ಅಂಬೇಡ್ಕರ್ ಕನಕದಾಸರ ಆಶಯದಂತೆ ಸಂವಿಧಾನ ರೂಪಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ಆಡಳಿತ ಸಮಾಜಮುಖಿಯಾಗಿರಲು ಅವರು ಅನುಸರಿಸುವ ದಾರ್ಶನಿಕರ ಮಾರ್ಗದರ್ಶನ ಕಾರಣ ಎಂದರು.
ಕಳೆದೆರಡು ವರ್ಷಗಳಿಂದ ಕನಕ ಜಯಂತಿಗೆ ಸಚಿವರನ್ನು ಕರೆದು ಆಚರಿಸಲಾಗಿದೆ. ಈ ವರ್ಷ ಕನಕದಾಸರ ಜಯಂತಿ ಸಾರ್ವಜನಿಕವಾಗಿ ಅದ್ಧೂರಿಯಾಗಿ ಆಚರಿಸಲಾಗುವುದು ಇದಕ್ಕೆ ಸಮಾಜದ ಬೆಂಬಲ ಇದೆ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಕನಕದಾಸರು ಒಂದೇ ಸಮಾಜಕ್ಕೆ ಸೀಮಿತರಲ್ಲ, ಅವರು ಬಸವಣ್ಣ, ಅಂಬೇಡ್ಕರ್ ಅಂತೆ ಸಮಾಜದ ಒಳಿತಿನ ಮತ್ತು ಸಾಮಾಜಿಕ ನ್ಯಾಯ ನೀಡಲು ಶ್ರಮಿಸಿದವರು. ತಮ್ಮ ಕೀರ್ತನೆ ಮೂಲಕ ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯನಾಗಿ ದೇವರ ಸಾನ್ನಿಧ್ಯ ಹೊಂದಬಹುದು ಎಂದು ಸಾರಿದವರು.
ಕಡೂರಿನ ಕನಕರಾಯನ ಗುಡ್ಡದಲ್ಲಿ ತಂಗಿ ಭಗವಂತನನ್ನೇ ತಾವಿರುವಲ್ಲಿಗೆ ಕರೆಸಿಕೊಂಡ ಮಹಾನ್ ದಾರ್ಶನಿಕರು. ಕನಕದಾಸರು ಹೇಳುವಂತೆ ಮನದಲ್ಲಿ ಕಪಟವಿಟ್ಟುಕೊಂಡು ಎಷ್ಟು ಜಪ ಮಾಡಿದರೇನು ಫಲ ? ಎಂಬುದು ರಾಜಕೀಯ ವ್ಯಕ್ತಿಗಳಿಗೆ ಸೂಕ್ತವಾಗಿದೆ. ತಮಗೆ ದೊರೆತ ಅಧಿಕಾರ ಸಮಾಜದ ಒಳಿತಿಗೆ ಉಪಯೋಗಿಸುವ, ನುಡಿದಂತೆ ನಡೆಯುವ ದೀಕ್ಷೆ ಪಡೆದಾಗ ಕನಕದಾಸರು ತೋರಿದ ದಾರಿಯಲ್ಲಿ ನಡೆಯೋಣ ಎಂದರು.ಕ್ಷೇತ್ರ ಶಿಕ್ಷಾಣಾಧಿಕಾರಿ ಎಂ.ಎಚ್. ತಿಮ್ಮಯ್ಯ ಉಪನ್ಯಾಸ ನೀಡಿ ಕುರುಬ ಎಂಬ ಪದದ ಅರ್ಥ ಹಳತು, ಹಳೆಯದು ಎಂದಿದೆ, ಕ್ರಿಸ್ತ ಪೂರ್ವದಲ್ಲಿ ಚಂದ್ರ ಗುಪ್ತ ಮೌರ್ಯ ಭವ್ಯ ಭಾರತದ ಕನಸನ್ನು ನನಸಾಗಿಸಿದವರು. ಇತಿಹಾಸದ ಹಲವು ರಾಜರು ದೇಶದ ಚುಕ್ಕಾಣಿ ಹಿಡಿದು ಎಲ್ಲ ರೀತಿಯ ಅಭಿವೃದ್ಧಿ ಮಾಡಿದರು. ಇಂತಹ ವೀರ ಪರಂಪರೆ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯಿಂದ ಮುಂದುವರಿಸಿದವರು ಕನಕದಾಸರು ಎಂಬ ಸಂದೇಶ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ ಕನಕದಾಸರ ಮುಂಡಿಗೆಗಳನ್ನು ಉಲ್ಲೇಖಿಸಿ ಸಮಾಜ ದಲ್ಲಿ ಜನರ ನಡತೆ ಹೇಗಿರಬೇಕು ಎಂದು ತಿಳಿಯುವ ಅವಶ್ಯಕತೆ ಏಕಿದೆ ಎನ್ನುವ ಅಂಶ ವಿವರಿಸಿದರು. ಕನಕದಾಸರು ತಮ್ಮ ಸಣ್ಣ ಸಣ್ಣ ಕೀರ್ತನೆಗಳಲ್ಲಿ ರಾಮಾಯಣ, ಮಹಾಭಾರತ, ಪುರಾಣ ಹೇಳಿದರು. ಅವರ ಕೀರ್ತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂದಿನ ದಿನದಲ್ಲಿ ಎಲ್ಲ ಸಮುದಾಯದವರೂ ಒಂದಾಗಿ ಬೆಳೆಯುವ ಚಿಂತನೆ ನಡೆಸೋಣ ಆಗ ಮಾತ್ರ ಕ್ಷೇತ್ರ, ರಾಜ್ಯ, ದೇಶದ ಸಮಗ್ರ ಏಳಿಗೆ ಸಾಧ್ಯ ಎಂದರು.ತಹಸೀಲ್ದಾರ ಸಿ.ಎಸ್.ಪೂರ್ಣಿಮ, ಇಒ ಪ್ರವೀಣ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಭೋಗಪ್ಪ, ತೋಟದ ಮನೆ ಮೋಹನ್ ಕುಮಾರ್, ಗುಮಮ್ಮನಹಳ್ಳಿ ಅಶೋಕ್, ಪಂಚನಹಳ್ಳಿ ಪ್ರಸನ್ನ, ಮರುಗುದ್ದಿ ಕೆ.ಎಚ್.ಶಂಕರ್, ಕೆ.ಎಚ್.ಎ.ಪ್ರಸನ್ನ, ಕೆ.ಜಿ.ಶ್ರೀನಿವಾಸಮೂರ್ತಿ, ನಂಜುಂಡಸ್ವಾಮಿ, ಮರುಗುದ್ದಿ ಮನು ಹಾಗೂ ಕುರುಬ ಸಮಾಜದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
8ಕೆಕೆಡಿಯು1ಕಡೂರಲ್ಲಿ ನಡೆದ 538ನೇ ಕನಕದಾಸ ಜಯಂತಿಯಲ್ಲಿ ಶಾಸಕ ಕೆ.ಎಸ್.ಆನಂದ್ ಪುಷ್ಪಾರ್ಚನೆ ಮಾಡಿದರು. ಭಂಡಾರಿ ಶ್ರಿನಿವಾಸ್, ಶರತ್‍ಕೃಷ್ಣಮೂರ್ತಿ, ತಹಸೀಲ್ದಾರ್ ಪೂರ್ಣಿಮಾ, ಇಒ ಪ್ರವೀಣ್ ಮತ್ತಿತರರು ಇದ್ದರು.