ನಿರ್ಲಕ್ಷ್ಯಕ್ಕೆ ನಲುಗುತ್ತಿರುವ ಸಕಲೇಶಪುರ ಪುರಭವನ!

KannadaprabhaNewsNetwork |  
Published : Aug 29, 2024, 12:53 AM IST
28ಎಚ್ಎಸ್ಎನ್3ಎ : ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ದುಸ್ಥಿತಿ. | Kannada Prabha

ಸಾರಾಂಶ

ಮೂಲರೂಪಕ್ಕೆ ಧಕ್ಕೆ ಬರಬಾರದು ಎಂಬ ದಾನಿಗಳ ಪಟ್ಟು, ಕಟ್ಟಡ ನಿರ್ವಹಣೆಯಲ್ಲಿ ಪುರಸಭೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಿಲುಕಿ ಐತಿಹಾಸಿಕ ಹಿನ್ನೆಲೆಯ ಸಕಲೇಶಪುರದ ಪುರಭವನ ನಲುಗುತ್ತಿದೆ.

ನಿರ್ವಹಣೆಯಿಲ್ಲದೆ ಶಿಥಿಲಗೊಂಡು ಸೋರುತ್ತಿರುವ ಇಡೀ ಕಟ್ಟಡ । ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ದುರಸ್ತಿಗೆ ದಾನಿಗಳ ಒತ್ತಾಯ

ಶ್ರೀವಿದ್ಯಾಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮೂಲರೂಪಕ್ಕೆ ಧಕ್ಕೆ ಬರಬಾರದು ಎಂಬ ದಾನಿಗಳ ಪಟ್ಟು, ಕಟ್ಟಡ ನಿರ್ವಹಣೆಯಲ್ಲಿ ಪುರಸಭೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಿಲುಕಿ ಐತಿಹಾಸಿಕ ಹಿನ್ನೆಲೆಯ ಪುರಭವನ ನಲುಗುತ್ತಿದೆ.

ಒಡೆದ ಕಿಟಕಿಗಳು, ಮುರಿದ ಬಾಗಿಲುಗಳು, ಮಳೆ ನೀರಿನಿಂದ ಸೋರುತ್ತಿರುವ ಮೇಲ್ಛಾವಣಿ, ಕಚೇರಿ ಒಳಗೆ ಛತ್ರಿ ಹಿಡಿದು ತಿರುಗುವ ದೃಶ್ಯ ಸದ್ಯ ಪುರಭವನದಲ್ಲಿ ಕಂಡು ಬರುತ್ತಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಕೆಲಸಕ್ಕಾಗಿ ಬರುವ ನಾಗರಿಕರು ಕಚೇರಿಯಿಂದ ಹೊರ ಬರುವವರೆಗೆ ಜೀವಭಯದಲ್ಲೇ ಇರಬೇಕಾಗಿದೆ. ಮಳೆಗಾಲದಲ್ಲಿ ಇಡೀ ಕಟ್ಟಡ ಭಾರಿ ಪ್ರಮಾಣದಲ್ಲಿ ಸೋರುತ್ತಿದ್ದು ಯಾವ ಕ್ಷಣದಲ್ಲಿ ಬೇಕಿದ್ದರೂ ಮೇಲ್ಛಾವಣಿ ಕುಸಿದು ಅನಾಹುತ ಸಂಭವಿಸಬಹುದು. ಪುರಸಭೆ ಪುರಪಿತೃಗಳು ಕುಳಿತುಕೊಳ್ಳುವ ಕೊಠಡಿಯಲ್ಲಿ ಮಳೆಯಾದರೆ ಅಡಿಗಳಷ್ಟು ನೀರು ನಿಲ್ಲುವುದು ಇಲ್ಲಿ ಸಾಮಾನ್ಯವಾಗಿದೆ. ೨೦೧೪ ಹಾಗೂ ೨೦೨೩ ರಲ್ಲಿ ಸುಮಾರು ೨೫ ಲಕ್ಷ ರು. ವೆಚ್ಚ ಮಾಡಿ ಪುರಪಿತೃಗಳು ಕುಳಿತುಕೊಳ್ಳುವ ಕೊಠಡಿಯನ್ನು ನವೀಕರಿಸಲಾಗಿದೆ. ಮೇಲ್ಛಾವಣಿ ದುರಸ್ತಿ ಮಾಡದೆ ಕೊಠಡಿ ನವೀಕರಿಸಿರುವುದರಿಂದ ಹಿಂಭಾಗ ಬಿಟ್ಟು ಕೊಠಡಿಗೆ ಸೀರೆ ಉಡಿಸಿದಂತಾಗಿದೆ.

ಸಿಬ್ಬಂದಿ ಕುಳಿತುಕೊಳ್ಳುವ ಕೊಠಡಿಗಳಲ್ಲಿ ಮೇಲ್ಛಾವಣಿ ಕುಸಿಯುವ ಹಂತ ತಲುಪಿದ್ದು ದೇವರ ಮೇಲೆ ಭಾರ ಹಾಕಿ ಸಿಬ್ಬಂದಿ ಕೆಲಸ ಮಾಡಬೇಕಿದೆ. ಪುರಭವನದ ಮುಂಭಾಗದ ಪ್ರಾಂಗಣ ಕುಸಿಯುವ ಹಂತ ತಲುಪಿದ್ದರಿಂದ ೨೦೧ರಲ್ಲಿ ೧೫ ಲಕ್ಷ ರು. ವೆಚ್ಚಮಾಡಿ ನವೀಕರಿಸಲಾಗಿದ್ದರೂ ಮತ್ತೆ ಪ್ರಾಂಗಣ ಮತ್ತೆ ಭಾರಿ ಪ್ರಮಾಣದಲ್ಲಿ ಸೊರುತ್ತಿದೆ. ಸಾಕಷ್ಟು ಕಡತಗಳು ಅತಿ ಶೀತದಿಂದ ನಶಿಸಲಾರಂಭಿಸಿವೆ. ಆದರೂ ಕಡತಗಳ ರಕ್ಷಣೆಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಪುರಭವನದ ಹಿನ್ನಲೆ:

ಹಾಡ್ಯ ಬಲವಂತಪ್ಪ ಎಂಬುವವರು ಅವರ ತಂದೆ ಹಾಡ್ಯ ಸುಬ್ಬೆಗೌಡರ ನೆನಪಿನಾರ್ಥ ೧೯೫೪ ರಲ್ಲಿ ಸುಮಾರು ೧.೭೫ ಲಕ್ಷ ರು. ವೆಚ್ಚ ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಪುರಭವನವನ್ನು ಉಪ ವಿಭಾಗಾಧಿಕಾರಿಗಳು ಅಧ್ಯಕ್ಷರಾಗಿದ್ದ ಸಮಿತಿ ೧೯೭೫ರ ವರಗೆ ನಿರ್ವಹಿಸುತ್ತಿತ್ತು. ಪಟ್ಟಣದಲ್ಲಿ ಕಲ್ಯಾಣ ಮಂಟಪಗಳ ಸ್ಥಾಪನೆಗೂ ಮುನ್ನ ಪುರಭವನದಲ್ಲಿ ೨೦೧೦ರ ವರಗೆ ಮದುವೆ, ಸಭೆ, ಸಮಾರಂಭಗಳು ನಡೆಯುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುವೆಗಳಿಗೆ ಅವಕಾಶವಿಲ್ಲದಾಗಿದೆ.

ಅತಿಕ್ರಮಣ:

ಇಂದು ಆರೋಗ್ಯ ನಿರೀಕ್ಷಕರಿರುವ ಕಟ್ಟಡ ಅಂದು ಪುರಸಭೆ ಕಾರ್ಯಾಲಯವಾಗಿತ್ತು. ಇಂದಿಗೂ ಮುಖ್ಯಾಧಿಕಾರಿ ಕಾರ್ಯಾಲಯದ ನಾಮಫಲಕ ಕಟ್ಟಡದಲ್ಲಿ ರಾರಾಜಿಸುತ್ತಿದೆ. ಆದರೆ, ೧೯೮೦ರ ದಶಕದಲ್ಲಿ ಪುರಸಭೆ ಕಾರ್ಯಾಲಯದ ನವೀಕರಣದ ಉದ್ದೇಶದಿಂದ ಪುರಭವನಕ್ಕೆ ಪುರಸಭೆ ಆಡಳಿತ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಅಂದಿನಿಂದ ಇಂದಿನವರಗೂ ಪುರಸಭೆ ಕಚೇರಿ ಅನಧಿಕೃತವಾಗಿ ಪುರಭವನದಲ್ಲೆ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಕಚೇರಿ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿ ಎಂದು ಹಾಡ್ಯ ಸುಬ್ಬೆಗೌಡರ ವಂಶಸ್ಥರ ಹೇಳಿಕೆ ಸಂಚಲನ ಸೃಷ್ಟಿಸಿತ್ತು.

ಬೆಂಗಳೂರು ಪುರಭವನದ ಮಾದರಿ:

ಹಾಡ್ಯ ಬಲವಂತಗೌಡರಿಗೆ ಪುರಭವನ ನಿರ್ಮಾಣ ಮಾಡಲು ಬೆಂಗಳೂರಿನ ಕೆ.ಪಿ.ಪುಟ್ಟಣ್ಣಚೆಟ್ಟಿ ಪುರಭವನ ಸ್ಫೂರ್ತಿಯಾಗಿತ್ತು ಎನ್ನಲಾಗಿದೆ. ಬೆಂಗಳೂರಿನ ಪುರಭವನವನ್ನು ೧೯೩೪ ರಲ್ಲಿ ಎತ್ತರದ ಪ್ರದೇಶದಲ್ಲಿ ೨೦ ಕಂಬಗಳ ಮೂಲಕ ವಿಶೇಷ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಪುಟ್ಟಣಚೆಟ್ಟಿ ಪುರಭವನದ ಮಾದರಿಯಲ್ಲೆ ಎತ್ತರದ ಪ್ರದೇಶದಲ್ಲಿ ಹಾಡ್ಯ ಸುಬ್ಬೆಗೌಡರ ಪುರಭವನವನ್ನು ೧೯೫೪ ರಲ್ಲಿ ನಿರ್ಮಿಸಿದೆ. ಪುರಭವನದಲ್ಲಿ ನಿಂತರೆ ಹೇಮಾವತಿ ನದಿವರೆಗಿನ ಸುಮಾರು ಒಂದು ಕಿ.ಮೀ. ದೂರದ ಪಟ್ಟಣ ಗೋಚರಿಸುತ್ತದೆ.

ಕಟ್ಟಡ ನಿರ್ಮಾಣ ಯತ್ನ:

ಒಂದೂವರೆ ದಶಕದ ಹಿಂದೆ ಪುರಸಭೆ ಆಡಳಿತ ಪುರಭವನಕ್ಕೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿ ಒಂದು ಹಂತದ ಕಟ್ಟಡ ನಿರ್ಮಿಸಿದೆ. ಆದರೆ, ಕಟ್ಟಡ ಪೂರ್ಣಗೊಳ್ಳದ ಕಾರಣ ನಿರ್ಮಿಸಲಾಗಿರುವ ಕಟ್ಟಡವನ್ನು ದುರಸ್ತಿ ವಾಹನಗಳ ನಿಲುಗಡೆಗೆ ಬಳಸಲಾಗುತ್ತಿದೆ.

ಬೇಸಿಗೆಯಲ್ಲಿ ಮಳೆ ನೀರು ಸೊರುವಿಕೆಗೆ ತಡೆಯಲು ಕ್ರಮ ಕೈಗೊಳ್ಳಬೇಕು ದುಸ್ಥಿತಿಗೆ ಈಡಾಗಿರುವ ಕಟ್ಟಡವನ್ನು ನವೀಕರಿಸಬೇಕು. ಇದಕ್ಕಾಗಿ ಹೋರಾಟ ಮಾಡಲೂ ಸಿದ್ದ.

ಮಂಜುನಾಥ್. ಹಾಡ್ಯ ಸುಬ್ಬೆಗೌಡರ ವಂಶಸ್ಥ

ಕಟ್ಟಡ ಮಳೆ ನೀರಿನಿಂದ ಸೊರುತ್ತಿರುವದನ್ನು ತಡೆಯಲು ಕಟ್ಟಡದ ಮೇಲೆ ಶೀಟ್‌ಗಳನ್ನು ಆಳವಡಿಸಬೇಕಿದೆ. ಆದರೆ, ಕಟ್ಟಡದ ಮೂಲರೂಪಕ್ಕೆ ಧಕ್ಕೆ ಬರಲಿದೆ ಎಂದು ಶೀಟ್ ಆಳವಡಿಕೆಗೆ ಹಾಡ್ಯ ಸುಬ್ಬೆಗೌಡರ ವಂಶಸ್ಥರು ಅಡ್ಡಿಪಡಿಸುತ್ತಿದ್ದಾರೆ.

ನಟರಾಜ್, ಮುಖ್ಯಾಧಿಕಾರಿ, ಪುರಸಭೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ