ವಿಜೃಂಭಣೆಯಿಂದ ನಡೆದ ಸಕಲೇಶ್ವರಸ್ವಾಮಿ ರಥೋತ್ಸವ

KannadaprabhaNewsNetwork |  
Published : Feb 26, 2024, 01:37 AM IST
25ಎಚ್ಎಸ್ಎನ್21 : ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಆದ್ದೂರಿಯಾಗಿ ನಡೆಯಿತು. | Kannada Prabha

ಸಾರಾಂಶ

ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಶಾಸಕ ಸಿಮೆಂಟ್‌ ಮಂಜು ರಥೋತ್ಸವಕ್ಕೆ ಚಾಲನೆ । ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಶನಿವಾರ ಜರುಗಿದ ಬ್ರಹ್ಮರಥೋತ್ಸವ ಬಳಿಕ ಭಾನುವಾರ ಪೂಜಾಕಾರ್ಯಗಳ ನಂತರ ವಿದ್ಯುಕ್ತವಾಗಿ ಶಾಸಕ ಸಿಮೆಂಟ್ ಮಂಜು ಬೆಳಿಗ್ಗೆ ೧೧ಕ್ಕೆ ದಿವ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ೧೨.೩೦ಕ್ಕೆ ಮುಖ್ಯ ರಸ್ತೆಗೆ ಸಾಗಿಬಂದ ರಥಕ್ಕೆ ಪಟ್ಟಣದ ಮುಖ್ಯ ಬೀದಿಯಲ್ಲಿ ರಂಗೋಲಿ ಹಾಕಿ ಆರತಿ ಎತ್ತುವ ಮೂಲಕ ರಥವನ್ನು ಸ್ವಾಗತಿಸಲಾಯಿತು. ಮಧ್ಯಾಹ್ನ ೨.೩೦ ರವರಗೆ ನೂರಾರು ಭಕ್ತಾದಿಗಳು ಪಟ್ಟಣದ ಪುರಸಭೆ ಕಚೇರಿವರಗೆ ಎಳೆದು ತಂದ ತೇರನ್ನು ಸಾವಿರಾರು ಜನರು ವೀಕ್ಷಿಸಿ ಕಣ್ತುಂಬಿಸಿಕೊಂಡರು. ತೇರಿನ ಮೇಲೆ ಬಾಳೆಹಣ್ಣು ಎಸೆಯುವುದು, ರಥದ ಮುಂದೆ ಈಡುಗಾಯಿ ಒಡೆಯುವುದು ಸಾಮಾನ್ಯವಾಗಿತ್ತು. ರಥೋತ್ಸವದ ವೇಳೆಯ ಡೊಳ್ಳು ಕುಣಿತಕ್ಕೆ ಯುವಕ ಹಾಗೂ ಯುವತಿಯರು ಕುಣಿದು ಕುಪ್ಪಳಿಸಿದರು.

ಅನ್ನ ಸಂತರ್ಪಣೆ:

ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಸಭೆ ಮುಂಭಾಗದವರಗೆ ಐಸ್‌ಕ್ರಿಮ್‌ನಿಂದ ಹಿಡಿದು ಅನ್ನ ಸಾಂಬರ್‌ ವರಗೆ ಆರ್‌ಎಸ್‌ಎಸ್, ಬಜರಂಗದಳ ಸಂಘಟನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ವಿವಿಧ ಖಾದ್ಯಗಳನ್ನು ಭಕ್ತಾದಿಗಳಿಗೆ ಹಂಚುವ ಮೂಲಕ ಸಕಲೇಶ್ವರಸ್ವಾಮಿ ದೇವರ ಕೃಪೆಗೆ ಪಾತ್ರರಾದರು.

ಅನ್ನಸಂತರ್ಪಣೆ ಅಸ್ತವ್ಯಸ್ತ:

ಪಟ್ಟಣದಲ್ಲಿ ಹತ್ತಾರು ಸಂಘಟನೆಗಳು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದರಾದರೂ ನಿರ್ವಹಣೆ ಕೊರತೆಯಿಂದಾಗಿ ಪ್ರಸಾದವನ್ನು ಅರ್ಧ ತಿಂದು ಬಿಸಾಡುವುದು ಸಾಮಾನ್ಯವಾಗಿತ್ತು. ಕಸದ ಬುಟ್ಟಿ ಇಲ್ಲದೆ ಪಟ್ಟಣದ ಮುಖ್ಯರಸ್ತೆ ತಿಂದುಳಿದ ಪ್ರಸಾದ ಹಾಗೂ ತಟ್ಟೆ, ಲೋಟಗಳಿಂದ ತುಂಬಿ ತುಳಕಿತ್ತು.

ಭಾರಿ ಜನಸ್ತೋಮ:

ಸಾಮಾನ್ಯವಾಗಿ ಸಕಲೇಶ್ವಸ್ವಾಮಿ ಜಾತ್ರಮಹೋತ್ಸವ ಪ್ರತಿವರ್ಷ ಗುರುವಾರ ನಡೆಯುವುದು ವಾಡಿಕೆ. ಗುರುವಾರ ವಾರದ ಸಂತೆಯಾದ್ದರಿಂದ ಹೆಚ್ಚಿನ ಜನ ಸೇರುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಭಾನುವಾರ ರಥೋತ್ಸವ ಜರುಗಿದ್ದು ಪ್ರತಿವರ್ಷಕ್ಕಿಂತ ಹೆಚ್ಚಿನ ಜನದಟ್ಟಣೆ ನೆರೆದಿದ್ದು ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ಪುರಸಭೆ ಮುಂಭಾಗ ಭಜನೆ ಏರ್ಪಡಿಸಲಾಗಿತ್ತು.

ಜಾತ್ರೆಗೂ ಇಲ್ಲ ಬೈಪಾಸ್ ಸೇವೆ:

ಸಕಲೇಶ್ವರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವದ ಮುನ್ನ ಎರಡು ದಿನಗಳಿಂದ ಬೈಪಾಸ್ ಸಂಚಾರಕ್ಕೆ ವಾಹನಗಳನ್ನು ಮುಕ್ತಗೊಳಿಸಲಾಗುವುದು ಎಂದು ಸ್ಥಳೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಬೈಪಾಸ್‌ನಲ್ಲಿ ಹಾದು ಹೋಗುವ ೨೨೦ ವಿದ್ಯುತ್ ಕೆವಿ ಲೈನ್ ಬದಲಾವಣೆ ವರೆಗೆ ಬೈಪಾಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿರುವುದರಿಂದ ಕಂಗೆಟ್ಟ ಜನಪ್ರತಿನಿಧಿಗಳು ನಿರಂತರ ಪ್ರಯತ್ನದ ನಂತರ ರಥೋತ್ಸವದ ವೇಳೆ ಬೈಪಾಸ್‌ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ಯಶಸ್ವಿಯಾದರು. ಇದರಿಂದ ರಾಷ್ಟ್ರೀಯ ಹೆದ್ದಾರಿ ೭೫ ರ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಲಘುವಾಹನ ಸವಾರರು ಸಂತಸಕ್ಕೆ ಕಾರಣವಾದರೆ ಭಾರಿ ವಾಹನಗಳು ಮುಂಜಾನೆಯಿಂದ ಸಂಜೆ ವರಗೆ ಪಟ್ಟಣದ ಎರಡು ಬದಿಯಲ್ಲಿ ಕಾಯುವಂತಾಗಿತ್ತು.

ವಸ್ತುಪ್ರದರ್ಶನ ಬೇರೆಡೆ:

ಸಕಲೇಶ್ವರಸ್ವಾಮಿ ರಥೋತ್ಸವದ ನಂತರ ೧೦ ದಿನಗಳ ಕಾಲ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಯುವುದು ವಾಡಿಕೆ. ಸಕಲೇಶ್ವರಸ್ವಾಮಿ ಜಾತ್ರೆ ಆರಂಭವಾದ ೬೫ ವರ್ಷಗಳವರಗೆ ಸುಬಾಷ್ ಮೈದಾನದ ಸಮೀಪದ ಹಳೇ ಸಂತೆ ಮೈದಾನದಲ್ಲಿ ವಸ್ತುಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ವಸ್ತುಪ್ರದರ್ಶನ ನಡೆಯುತ್ತಿದ್ದ ಸ್ಥಳದ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು ಸ್ಥಳ ಖಾಸಗಿ ವ್ಯಕ್ತಿಗೆ ಸೇರಿದೆ ಎಂಬ ತೀರ್ಪಿನ ಹಿನ್ನೆಲೆ ಈ ಬಾರಿ ಪಟ್ಟಣದ ಹೃದಯಭಾಗದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಟಾಟಾ ಲೇಔಟ್‌ನಲ್ಲಿ ಜಾತ್ರೆ ವಸ್ತುಪ್ರದರ್ಶನ ನಡೆಸಲು ಸಿದ್ದತೆ ನಡೆಸಲಾಗಿದ್ದು ಹೆದ್ದಾರಿಯ ಒಂದು ಕಿ.ಮೀಗೂ ಅಧಿಕ ದೂರದವರಗೆ ವಿದ್ಯುತ್ ದೀಪದಿಂದ ಸಿಂಗರಿಸಲಾಗಿದೆ.ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಆದ್ಧೂರಿಯಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ