ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷ ಜೆಡಿಎಸ್‌ ಪ್ರತಿಭಟನೆ

KannadaprabhaNewsNetwork |  
Published : Apr 13, 2025, 02:01 AM ISTUpdated : Apr 13, 2025, 11:36 AM IST
JDS protest 2 | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷ ಜೆಡಿಎಸ್‌ ಪ್ರತಿಭಟನೆ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿತು.

 ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷ ಜೆಡಿಎಸ್‌ ಪ್ರತಿಭಟನೆ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿತು.

ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಯುವಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಸಂಸದ ಮಲ್ಲೇಶ್ ಬಾಬು, ಶಾಸಕರಾದ ಶಾರದಾ ಪೂರ್ಯನಾಯಕ್‌, ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಶಾಸಕರು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಾಕಪ್ಪಾ ಸಾಕು ಕಾಂಗ್ರೆಸ್‌ ಸರ್ಕಾರ’ ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರದ ಸರಣಿ ದರ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸೇರಿ ಪಕ್ಷದ ಮುಖಂಡರು ವಿಧಾನಸೌಧ ಚಲೋ ನಡೆಸಲು ಮುಂದಾದ ವೇಳೆ ಪೊಲೀಸರು ತಡೆದು ಬಂಧಿಸಿ, ಬಿಡುಗಡೆಗೊಳಿಸಿದರು.

ಸರ್ಕಾರವು ಐದು ಗ್ಯಾರಂಟಿ ಕೊಟ್ಟಿದೆಯಾದರೂ ಅದನ್ನು ಪಡೆದ ಪಾಪಕ್ಕೆ ಜನ ದಿನನಿತ್ಯ ಬೆಲೆ ಏರಿಕೆ ಬರೆಗೆ ತುತ್ತಾಗುತ್ತಿದ್ದಾರೆ. ದಿನಕ್ಕೊಂದು ದರ ಏರಿಕೆ ಮಾಡುತ್ತಿದ್ದಾರೆ. ಕೊಟ್ಟಿದ್ದು ಅಲ್ಪ, ಜನರ ಮೇಲೆ ಬೆಟ್ಟದಷ್ಟು ಹೇರಿಕೆ ಮಾಡಲಾಗಿದೆ. ಜನ ಸರ್ಕಾರದ ವಿರುದ್ಧ ದಂಗೆ ಏಳದೆ ಬೇರೆ ದಾರಿ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಈ ವೇಳೆ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕಾಂಗ್ರೆಸ್ ಮತ ಹಾಕಿಸಿಕೊಳ್ಳಲು ಮಾತ್ರವೇ ಗ್ಯಾರಂಟಿಗಳನ್ನು ನೀಡುತ್ತಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದೆ. ಟ್ರಾನ್ಸ್ ಫಾರ್ಮರ್ ಹಾಕಿಸಿಕೊಳ್ಳಲು ರೈತರು 2 ರಿಂದ 3 ಲಕ್ಷ ರು. ಹಣ ವೆಚ್ಚ ಮಾಡಬೇಕು. ಹಣ ಕ್ರೋಢೀಕರಣ ಮಾಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯುವವರೆಗೆ ಹೋರಾಟ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಕಾಂಗ್ರೆಸ್‌ನವರು ಗ್ಯಾರಂಟಿ ಭಾಗ್ಯಗಳನ್ನು ಚುನಾವಣೆಗೆ ಸೀಮಿತವಾಗಿಟ್ಟಿದ್ದಾರೆ. ದಿನನಿತ್ಯ ದರ ಏರಿಕೆ ಮಾಡುತ್ತಿದ್ದು, ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿಶೇಷ ಅನುದಾನಕ್ಕೆ ಶಾಸಕರು ಮನವಿ ಮಾಡಿದ್ದರೂ ನೀಡುತ್ತಿಲ್ಲ. ಭ್ರಷ್ಟಾಚಾರದಲ್ಲಿ ರಾಜ್ಯ ಮೊದಲ ಸ್ಥಾನ ಇದೆ ಎಂಬುದಾಗಿ ಕಾಂಗ್ರೆಸ್ ಶಾಸಕರೇ ಹೇಳಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಜನರ ಬಳಿ ಹೋಗದಂತೆ ಸರ್ಕಾರ ಮಾಡಿದ್ದು, ಬೆಲೆ ಏರಿಕೆ ವಿರುದ್ಧ ರಾಜ್ಯದ ಜನತೆ ಹೋರಾಟ ಮಾಡಬೇಕು ಎಂದರು.

ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಬಡವರ, ದಲಿತರ ಹಣ ಬಳಕೆ ಮಾಡಲಾಗುತ್ತಿದೆ. ಈ ಹಣ ಕೊಡಲು ಇವರೇ ಬೇಕಾ? ಯಾವುದೇ ಮೂಲ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ನಿಗಮಗಳಲ್ಲಿ ಕೋಟ್ಯಂತರ ರು. ಹಗರಣವಾಗಿದೆ. ಬೆಂಗಳೂರು ನಗರ ಗಾರ್ಬೇಜ್ ಸಿಟಿಯಾಗಿದ್ದು, ವಿದೇಶಿಗರು ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ನಿಖಿಲ್‌ರನ್ನು ರಾಜ್ಯಾಧ್ಯಕ್ಷರಾಗಿ ಘೋಷಣೆಗೆ ಎಚ್‌ಡಿಕೆಗೆ ಚೀಟಿ!

ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರೊಬ್ಬರು ಒತ್ತಾಯಿಸಿದ ಪ್ರಸಂಗ ನಡೆಯಿತು.

ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರೊಬ್ಬರು ಚೀಟಿವೊಂದರಲ್ಲಿ ಬರೆದು ಕಳುಹಿಸಿ ನಿಖಿಲ್‌ ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದರು.ಇದನ್ನು ಗಮನಿಸಿದ ಕುಮಾರಸ್ವಾಮಿ, ಆ ಕೆಲಸಕ್ಕಾಗಿ ಬಂದಿಲ್ಲ ಎಂದಷ್ಟೇ ಹೇಳಿ ಮಾತು ಮುಂದುವರಿಸಿದರು.

ಟಿವಿಯಲ್ಲಿ ವೀಕ್ಷಣೆ: ಈ ನಡುವೆ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಜೆಡಿಎಸ್‌ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದರು. ಕೇಂದ್ರ ಸಚಿವರಾಗಿರುವ ತಮ್ಮ ಮಗ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಇತರೆ ಮುಖಂಡರ ಭಾಷಣವನ್ನುವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!