ಧಾರವಾಡ:
ಸಮಕಾಲಿನ ರಂಗಭೂಮಿಯಲ್ಲಿ ಅಸ್ಮಿತೆಯಾಗಿ ಕಾಡಿದ ಶಾಂತಕವಿ ಬಾಳಾಚಾರ್ಯರು ರಂಗಭೂಮಿಯ ಮಡಿವಂತಿಕೆಯನ್ನು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿ ನಿರೂಪಿಸಿದವರು. ಇಡೀ ಭಾರತದ ರಂಗಭೂಮಿಯ ಮೇಲೆ ಪಾರ್ಸಿ ನಾಟಕಗಳ ಪ್ರಭಾವ ಹೆಚ್ಚಿಗೆ ಇದ್ದ ಸಮಯದಲ್ಲೂ ಕನ್ನಡ ನಾಟಕಗಳ ಅಸ್ಮಿತೆ ಉಳಿಸಿಕೊಂಡವರಲ್ಲಿ ಸಕ್ಕರಿ ಬಾಳಾಚಾರ್ಯರು ಮುಂಚೂಣಿಯಲ್ಲಿದ್ದಾರೆ ಎಂದು ನಾಟಕಕಾರ ಡಿ.ಎಸ್. ಚೌಗಲೆ ಹೇಳಿದರು.ಕರ್ನಾಟಕ ಮಹಾವಿದ್ಯಾಲಯದ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಧಾರವಾಡ ಆಶ್ರಯದಲ್ಲಿ ನಡೆದ ಕನ್ನಡದ ಆದ್ಯ ನಾಟಕಕಾರ ಸಕ್ಕರಿ ಬಾಳಾಚಾರ್ಯ ನೆನಪಿನ ರಂಗೋತ್ಸವದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ನಟ ಪಾರಂಪರೆಯಲ್ಲಿ ಪ್ರಯೋಗಶೀಲ ನಾಟಕಗಳು ಕಡಿಮೆ ಇದ್ದು, ರಂಗಭೂಮಿಯ ನಾಟಕಗಳಲ್ಲಿ ಅವುಗಳ ಅಸ್ಮಿತೆಯ ಇನ್ನೂ ಜೀವಂತವಾಗಿದೆ. ಭಾಷಾ ಅಸ್ಮಿತೆಯ ಮೂಲಕ ಕನ್ನಡ ಭಾಷಾ ಪರಂಪರೆ ಹೆಚ್ಚಿಗೆಯಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ಬಾಳಾಚಾರ್ಯರು ಕನ್ನಡ ರಂಗಭೂಮಿಯ ಮನಸ್ಸುಗಳನ್ನು ಕಟ್ಟುವಲ್ಲಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.ಧಾರವಾಡದ ರಂಗಭೂಮಿ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, ಜೀವನದುದ್ದಕ್ಕೂ ಅಕ್ಷರ ಅರಿತುಕೊಳ್ಳದೆ, ಕೇವಲ ರಂಗಭೂಮಿಯ ಮೂಲಕ ಜೀವನ ಕಟ್ಟಿಕೊಂಡ ನಾನು ಇಂದು ಧಾರವಾಡದ ರಂಗಾಯಣದ ಜವಾಬ್ದಾರಿ ಹೊತ್ತು ನಿಂತಿದ್ದೇನೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಸಕ್ಕರಿ, ನಾಟಕ ನಿರ್ದೇಶಕ ಪ್ರಕಾಶ ಗರುಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು. ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಮಹಾದೇವ ಪರಿಚಯಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು. ಅನಿತಾ ಹನುಮೇಶ ವಂದಿಸಿದರು.
ರಂಗೋತ್ಸವದ ಅಂಗವಾಗಿ ಮೊದಲ ದಿನದ ಗೊಂಬೆಮನೆ ತಂಡದಿಂದ ಪ್ರಕಾಶ ಗರುಡ ರಚಿಸಿ ನಿರ್ದೇಶಿಸಿದ ಶಾಂತಕವಿಗಳ ವಿಶ್ರಾಂತಿ " ನಾಟಕ ಪ್ರದರ್ಶಿಸಲಾಯಿತು.