ಬೀದಿಬದಿ ವ್ಯಾಪಾರಿಗಳಿಂದ ಜೋಪಡಿಮಯವಾದ ಸಕಲೇಶಪುರ

KannadaprabhaNewsNetwork |  
Published : Mar 03, 2024, 01:30 AM IST
2ಎಚ್ಎಸ್ಎನ್8 : ಸಕಲೇಶಪುರ ಪಟ್ಟಣದ ಸೌಂದರ್ಯಕ್ಕೂ ಕುಂದು ತರುತ್ತಿರುವ ಬೀದಿಬದಿಯ ಜೋಪಡಿಗಳು. | Kannada Prabha

ಸಾರಾಂಶ

೨೦೧೯ ರಲ್ಲಿ ರಾಜ್ಯ ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಕಾನೂನು ಜಾರಿಗೊಂಡ ನಂತರ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರ ನಡೆಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪಟ್ಟಣದ ಆಯಾಕಟ್ಟಿನ ಪ್ರದೇಶದಲ್ಲಿರುವ ಬೀದಿಬದಿಯ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟಿನವರಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದ್ದಾರೆ. ಪರಿಣಾಮ ಬೀದಿಬದಿ ವ್ಯಾಪಾರಸ್ಥರ ಸ್ವೇಚಾಚಾರದಿಂದಾಗಿ ಎಲ್ಲೆಡೆ ಬೀದಿಬದಿ ಅಂಗಡಿಗಳು ತಲೆ ಎತ್ತುತ್ತಿವೆ.

ಬಾಡಿಗೆಯೂ ಇಲ್ಲ, ತೆರಿಗೆಯೂ ಇಲ್ಲ. ಬಂಪರ್‌ ವ್ಯಾಪಾರ । ಅಂಗಡಿ ಮಳಿಗೆಗಳಿಗೆ ಹೋಗಲು ಒಲ್ಲೆ ಎನ್ನುತ್ತಾರೆ ।

ಸುಂದರ ನಗರ ಸಕಲೇಶಪುರ ಪಟ್ಟಣದ ಸೌಂದರ್ಯಕ್ಕೆ ಕಪ್ಪುಚುಕ್ಕೆ

ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬೀದಿಬದಿ ವ್ಯಾಪಾರವನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ವ್ಯಾಪಾರಿಗಳಿಂದಾಗಿ ಇಡೀ ಪಟ್ಟಣ ಜೋಪಡಿಗಳಿಂದ ತುಂಬಿತುಳುಕುತ್ತಿದೆ.

ಬೀದಿಬದಿ ವ್ಯಾಪಾರದ ತಾತ್ಪರ್ಯ ಅರಿಯದ ಅಧಿಕಾರಿಗಳು ಹಾಗೂ ವ್ಯಾಪಾರಿಗಳಿಂದಾಗಿ ಬೀದಿಬದಿ ವ್ಯಾಪಾರದ ದುರ್ಬಳಕೆಯಾಗುತ್ತಿರುವ ಪರಿಣಾಮ ಪಟ್ಟಣದ ರಸ್ತೆ ಬದಿಯೆಲ್ಲ ಬೀದಿಬದಿಯ ವ್ಯಾಪಾರಿಗಳಿಂದ ತುಂಬಿಹೋಗಿದೆ.

ಲಕ್ಷಾಂತರ ರು. ತೆರಿಗೆ ಸಂಗ್ರಹವಾಗುವ ಆಯಕಟ್ಟಿನ ಪ್ರದೇಶದಲ್ಲಿ ಯಾವುದೇ ಬಾಡಿಗೆ,ತೆರಿಗೆ ನೀಡದೇ ಹಲವು ವರ್ಷಗಳಿಂದ ಬೀದಿಬದಿಯ ವ್ಯಾಪಾರವನ್ನೇ ಬದುಕಾಗಿಸಿಕೊಂಡಿರುವ ಹಲವರು, ಬಂಗಲೆಯಂತಹ ಮನೆಗಳಲ್ಲಿ ವಾಸಿಸುತ್ತ, ಅದ್ಧೂರಿ ಕಾರುಗಳಲ್ಲಿ ಓಡಾಡುತ್ತಾ, ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದರೂ ಬೀದಿಬದಿ ವ್ಯಾಪಾರವನ್ನು ಬಿಡಲೊಪ್ಪದಾಗಿದ್ದಾರೆ. ಪರಿಣಾಮ ಪಟ್ಟಣದ ಆಯಕಟ್ಟಿನ ಜಾಗದಲ್ಲಿ ಒಮ್ಮೆ ಬೀದಿಬದಿಯಲ್ಲಿ ಅಂಗಡಿ ಹಾಕಿ ಕುಳಿತರೆ ತಲಾತಲಾಂತರದವರೆಗೂ ಅವರು ಆ ಜಾಗ ಬಿಟ್ಟು ಕದಲಾರರು ಹಾಗೂ ಕದಲಿಸುವ ದೈರ್ಯ ಸಹ ಯಾವ ಅಧಿಕಾರಿಗೂ ಇಲ್ಲ.

ಹೆಚ್ಚಿನ ವ್ಯಾಪಾರ:

೨೦೧೯ ರಲ್ಲಿ ರಾಜ್ಯ ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಕಾನೂನು ಜಾರಿಗೊಂಡ ನಂತರ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರ ನಡೆಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಪಟ್ಟಣದ ಆಯಾಕಟ್ಟಿನ ಪ್ರದೇಶದಲ್ಲಿರುವ ಬೀದಿಬದಿಯ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟಿನವರಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದ್ದಾರೆ. ಪರಿಣಾಮ ಬೀದಿಬದಿ ವ್ಯಾಪಾರಸ್ಥರ ಸ್ವೇಚಾಚಾರದಿಂದಾಗಿ ಎಲ್ಲೆಡೆ ಬೀದಿಬದಿ ಅಂಗಡಿಗಳು ತಲೆ ಎತ್ತುತ್ತಿವೆ. ಪರಿಣಾಮ ಕೊಟ್ಯಾಂತರ ರು. ವೆಚ್ಚ ಮಾಡಿ ನಿರ್ಮಿಸಲಾಗಿರುವ ಸಾಕಷ್ಟು ಅಂಗಡಿ,ಮುಂಗಟ್ಟಿನ ಮಳಿಗೆಗಳು ಖಾಲಿ ಬೀಳುತ್ತಿವೆ. ಇದು ಉದ್ಯಮಿಗಳ ಪಾಲಿಗೆ ಕೆಟ್ಟ ಬೆಳವಣಿಗೆಯಾಗಿದ್ದು, ಕಟ್ಟಡದ ಮಾಲೀಕರು ಈ ಬೆಳವಣಿಗೆಯಿಂದ ಕಂಗಲಾಗಿದ್ದಾರೆ.

ಬೀದಿಬದಿ ವ್ಯಾಪಾರವೆಂದರೇನು?

ಆರ್ಥಿಕ ಸಾಮರ್ಥ್ಯಹೀನ ವ್ಯಕ್ತಿಯೊಬ್ಬರು ತನ್ನ ನೈಪುಣ್ಯ ಹಾಗೂ ಶ್ರಮದ ಮೂಲಕ ಒಂದು ನಿಗಧಿತ ಸ್ಥಳದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡಿ ತೆರಳುವುದು ಬೀದಿ ಬದಿ ವ್ಯಾಪಾರ. ಇಲ್ಲಿ ಸ್ವಂತ ಕಟ್ಟಡವನ್ನಾಗಲಿ ಅಥವಾ ತನ್ನ ಪಾರುಪತ್ಯ ಸ್ಥಾಪಿಸುವಂತ ಯಾವುದೇ ವಸ್ತುಗಳನ್ನು ತಾನು ವ್ಯಾಪಾರ ಮಾಡುತಿರುವ ಸ್ಥಳದಲ್ಲಿ ಬೀಡುವಂತಿಲ್ಲ. ಅಲ್ಲದೆ ಬೀದಿಬದಿ ವ್ಯಾಪಾರ ನಡೆಸುತ್ತಿರುವ ವ್ಯಕ್ತಿ ಆರ್ಥಿಕ ಚೈತನ್ಯ ಹೊಂದಿದ ನಂತರ ಬೀದಿಬದಿಯಿಂದ ತನ್ನ ವ್ಯಾಪಾರವನ್ನು ಕಟ್ಟಡಗಳಿಗೆ ಸ್ಥಳಾಂತರಿಸಿಕೊಳ್ಳಬೇಕು. ಆರ್ಥಿಕ ಚೈತನ್ಯ ಹೊಂದಿದ್ದ ವ್ಯಕ್ತಿ ಬೀದಿಬದಿ ವ್ಯಾಪಾರ ನಡೆಸುವಂತಿಲ್ಲ. ಆದರೆ, ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಈ ಯಾವುದೇ ಮಾನದಂಡ ಅನ್ವಯವಾಗುವುದಿಲ್ಲ. ಒಂದು ವೇಳೆ ಈ ಮಾನದಂಡ ಅನ್ವಯವಾದರೆ ಯಾವುದೇ ವ್ಯಕ್ತಿಯೂ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಆರ್ಹರಾಗುವುದಿಲ್ಲ. ಸಾಕಷ್ಟು ಬೀದಿಬದಿ ವ್ಯಾಪಾರಿಗಳು ಆರ್ಥಿಕ ಚೈತನ್ಯ ಹೊಂದಿದ್ದರೂ ಮಳಿಗೆಗಳಲ್ಲಿ ಬಾಡಿಗೆ ಕಟ್ಟಿ ವ್ಯಾಪಾರ ನಡೆಸಲು ಸಿದ್ಧರಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಅಂಗಡಿಗಳಿಗಿಂತ ಬೀದಿಬದಿ ಅಂಗಡಿಗಳೇ ಹೆಚ್ಚಾಗಿವೆ. ದರದಲ್ಲೂ ಮುಂದು:

ಸಾಮಾನ್ಯವಾಗಿ ಬೀದಿಬದಿ ವ್ಯಾಪಾರಿಗಳ ಬಳಿ ಸಿಗುವ ವಸ್ತುಗಳ ಬೆಲೆ ಕಡಿಮೆ ಇರಲಿದೆ ಎಂಬುದು ಸಾಮಾನ್ಯರ ಮನೋಭಾವ. ಆದರೆ, ಪಟ್ಟಣದ ಬೀದಿಬದಿ ವ್ಯಾಪಾರಿಗಳ ಬಳಿ ಇದು ತದ್ವಿರುದ್ದ, ಒಂದು ವೇಳೆ ಅಂಗಡಿಯಲ್ಲಿ ವಸ್ತುಗಳು ಕಡಿಮೆ ದರದಲ್ಲಿ ದೊರೆತರೂ ಬೀದಿಬದಿಯಲ್ಲಿ ಇವುಗಳ ಬೆಲೆ ದುಬಾರಿಯಾಗಿರುತ್ತವೆ.ಯಾರಿಗೂ ಕೇರ್ ಇಲ್ಲ:

ಮೊದಮೊದಲು ಅಧಿಕಾರಿಗಳಿಗೆ ಗೌರವ ನೀಡುತ್ತ ಅವರ ಕೃಪಾಕಟಾಕ್ಷದಿಂದ ವ್ಯಾಪಾರ ನಡೆಸುತ್ತಿದ್ದ ಹಲವು ಬೀದಿಬದಿ ವ್ಯಾಪಾರಿಗಳು ಈಗ ಅಧಿಕಾರಿಗಳನ್ನು ಕೇರ್ ಮಾಡುತ್ತಿಲ್ಲ. ಸಾರ್ವಜನಿಕರ ದೂರಿನ ಅನ್ವಯ ಅಧಿಕಾರಿಗಳು ಅಂಗಡಿಗಳ ತೆರವಿಗೆ ಮುಂದಾದರೆ ನ್ಯಾಯಲಯದಿಂದ ತಡೆಯಾಜ್ಞೆ ತರುವ ಮೂಲಕ ವ್ಯಾಪಾರ ವಹಿವಾಟನ್ನು ಏಗ್ಗಿಲ್ಲದೆ ನಡೆಸುತ್ತಿದ್ದಾರೆ. ಇದಲ್ಲದೆ ಅಂಗಡಿಗಳ ತೆರವಿಗೆ ಮುಂದಾದ ಪುರಸಭೆ ಮುಖ್ಯಾಧಿಕಾರಿಯ ವಿರುದ್ದವೇ ೧೨ ಬೀದಿಬದಿವ್ಯಾಪಾರಿಗಳು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಇದ್ದ ಎರಡು ಬೀದಿಬದಿಯ ಅಂಗಡಿಗಳ ತೆರವಿಗೆ ಉಪವಿಭಾಗಾಧಿಕಾರಿಯೇ ಸಾಕಷ್ಟು ಶ್ರಮಪಡಬೇಕಾಗಿದ್ದು ಇಲ್ಲಿನ ಧಾರುಣ ಪರಿಸ್ಥಿತಿಯನ್ನು ಎತ್ತಿಹಿಡಿಯುತ್ತಿದೆ. ---------------ಬಾಕ್ಸ್.....

ಪಟ್ಟಣವೆಲ್ಲಾ ಜೋಪಡಿ, ಗುಡಿಸಿಲುಮಯ

ವ್ಯಾಪಾರಕ್ಕೆ ತಂದ ವಸ್ತುಗಳನ್ನಲ್ಲದೇ, ಮನೆಯಲ್ಲಿರುವ ವಸ್ತುಗಳೂ ಸೇರಿದಂತೆ ಬೇಕು ಹಾಗೂ ಬೇಡದ ವಸ್ತುಗಳನ್ನೆಲ್ಲ ತಂದು ವ್ಯಾಪಾರದ ಸ್ಥಳದಲ್ಲಿ ಹಾಕಿಕೊಳ್ಳುತಿರುವುದರಿಂದ ವ್ಯಾಪಾರದ ಸ್ಥಳ ಕೊಳೆಗೇರಿಯಂತೆ ಬಾಸವಾಗುತ್ತಿದೆ. ಒಂದು ಕಾಲದ ಸುಂದರ ಸಕಲೇಶಪುರ ಇಂದು ಗುಡಿಸಲುಗಳ ಸಾಮ್ರಾಜ್ಯವಾಗಿ ಪರಿವರ್ತನೆಗೊಂಡಿದೆ.------------------ಬಾಕ್ಸ್.....

ನಿಶ್ಯಕ್ತ ಪುರಸಭೆ:ಪುರಸಭೆಯ ಮುಖ್ಯದ್ವಾರದವರೆಗೂ ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕಿದರೂ ತೆರವುಗೊಳಿಸಲಾಗಲಿ, ಅವರಿಗೊಂದು ಮಾನದಂಡ ವಿಧಿಸುವುದಕ್ಕಾಗಲಿ ಪುರಸಭೆ ಶಕ್ತವಾಗಿಲ್ಲ. ಮಲಮೂತ್ರ ಹರಿಯುವ ಪ್ರದೇಶ ಸೇರಿದಂತೆ ಎಲ್ಲೆಂದರಲ್ಲಿ ತಿನ್ನುವ,ಪೂಜಿಸುವ ವಸ್ತುಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರೂ ಇವುಗಳನ್ನು ಕೇಳುವ ದೈರ್ಯ ಯಾವುದೇ ಅಧಿಕಾರಿಗೂ ಇಲ್ಲ. ವ್ಯಾಪಾರಿಗಳ ಮಧ್ಯದ ಪೈಪೋಟಿಯಿಂದ ಹೆದ್ದಾರಿಯ ಪಾದಚಾರಿ ರಸ್ತೆಯಲ್ಲಿ ಜನರು ಸಂಚರಿಸುವುದೆ ಅಸಾಧ್ಯ. ಇನ್ನು ಪ್ರತಿಯೊಂದು ಅಂಗಡಿಮುಂಗಟ್ಟಿನ ಮುಂದೆ ಒಬ್ಬೊಬ್ಬ ಬೀದಿಬದಿ ವ್ಯಾಪಾರಿಗೆ ಅಂಗಡಿ ಹಾಕಿಕೊಳ್ಳಲು ವರ್ತಕರು ಅವಕಾಶ ಮಾಡಿಕೊಡುವ ಮೂಲಕ ಅಂಗಡಿ ಮಾಲೀಕರು ಜನರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. ---------------

ಕೋಟ್.....

ಪಟ್ಟಣದಲ್ಲಿ ಸಾಕಷ್ಟು ಬೀದಿಬದಿಯ ಅಂಗಡಿಗಳಿದ್ದು ತೆರವುಗೊಳಿಸಲು ಮುಂದಾದರೆ ನ್ಯಾಯಾಲಯದ ಮೊರೆಹೋಗುತ್ತಾರೆ. ಇದರಿಂದಾಗಿ ನಾವು ಹತಾಶರಾಗಿದ್ದೇವೆ.

ರಮೇಶ್. ಮುಖ್ಯಾಧಿಕಾರಿ. ಪುರಸಭೆ.

--------------ಕೋಟ್.....

ಬೀದಿಬದಿ ವ್ಯಾಪಾರಿಗಳಿಗಾಗಿ ಒಂದು ಮಾನದಂಡ ರಚಿಸುವ ಅಗತ್ಯವಿದೆ. ಇಲ್ಲದಿದ್ದರೆ ಇಡಿ ಊರು ಬೀದಿಬದಿ ವ್ಯಾಪಾರಿಗಳಿಂದ ತುಂಭಿತುಳಕಲಿದೆ.

ನಾಯರಣ ಆಳ್ವ. ಹೋರಾಟಗಾರ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...