ಐದು ತಿಂಗಳಾದರೂ ಬಾರದ ವೇತನ: ಶಿಕ್ಷಕರ ಪರದಾಟ

KannadaprabhaNewsNetwork |  
Published : Mar 17, 2024, 01:45 AM IST
ಶಿಕ್ಷಕರ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶಿಭಾ ಜೇಲಿಯನ್ ಅವರು ಆಗಮಿಸಿ ಶಿಕ್ಷಕರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಶಹಾಪುರ ನಗರದಲ್ಲಿ ಶಿಕ್ಷಕರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಶಿಕ್ಷಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಿತು. ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶಿಭಾ ಜೇಲಿಯನ್ ಅವರು ಆಗಮಿಸಿ ಶಿಕ್ಷಕರ ಸಮಸ್ಯೆ ಆಲಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಬಾಕಿ ವೇತನಕ್ಕಾಗಿ ಆಗ್ರಹಿಸಿ, ತಾಲೂಕಿನ ಸರ್ವ ಶಿಕ್ಷಣ ಅಭಿಯಾನ ಯೋಜನೆ (ಎಸ್‌ಎಸ್‌ಎ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 150ಕ್ಕೂ ಹೆಚ್ಚು ಶಾಲಾ ಶಿಕ್ಷಕರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ವೇತನ ಪಾವತಿಗೆ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು. ಶಿಕ್ಷಕರ ನ್ಯಾಯಯುತ ಈ ಹೋರಾಟಕ್ಕೆಶಿಕ್ಷಕರ ನೌಕರರ ಸಂಘ, ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲಿಸಿತ್ತು.

ತಾಲೂಕಿನಲ್ಲಿ ಸಿಆರ್‌ಪಿ, ಬಿಆರ್‌ಪಿ ಹಾಗೂ ಬಿಆರ್‌ಸಿ ಸೇರಿ 150 ಜನ ಎಸ್‌ಎಸ್‌ಎ ಶಿಕ್ಷಕರಿಗೆ ಐದು ತಿಂಗಳಿನಿಂದ ಸಂಬಳ ಇಲ್ಲದಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಮನೆ ಬಾಡಿಗೆ ನೀಡಲಾಗದೆ, ಕುಟುಂಬದ ದೈನಂದಿನ ಖರ್ಚಿಗೆ ಹಣ ಇಲ್ಲದೇ ಗೋಳಾಡುತ್ತಿರುವುದಾಗಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನೀವು ಧರಣಿ ನಡೆಸಿದರೆ ನಡತೆ ನಿಯಮಗಳ ಅಡಿಯಲ್ಲಿ ನಿಮ್ಮ ಮೇಲೆ ಶಿಸ್ತುಕ್ರಮ ಜರಗಿಸುತ್ತೇನೆ ಎನ್ನುವ ಮೂಲಕ ಶಿಕ್ಷಕರಿಗೆ ಇನ್ನಷ್ಟು ನೋವುಂಟು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಉಪನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎರಡು ತಿಂಗಳ ಹೇಗೋ ಜೀವನ ಕಾಲ ಕಳೆದಿದ್ದೇವೆ. ಮೂರು ತಿಂಗಳಿಂದ ತಂದ ಸಂತಿ ಉದ್ರಿ ಇನ್ನೂ ಕೊಟ್ಟಿಲ್ರಿ. 5 ತಿಂಗಳಿಂದ ಪಗಾರೇ ಆಗಿಲ್ಲ. ಮಾಸ್ತರ್ ಅದೀರಿ ಕೈತುಂಬ ಪಗಾರಾ ಬರತೈತಿ. ಉದ್ರಿ ಮಾಡತೀರಿ ಎಂದು ಅಂಗಡಿಯವರು ಹೀಯಾಳಿಸುತ್ತಾರೆ, ಈ ತಿಂಗಳ ಉದ್ರಿ ಕೊಡಂಗಿಲ್ಲ ಅಂತಾರ್ರೀ. ಮನೆಯಲ್ಲಿ ಮಕ್ಕಳಿಗೆ ಹುಷಾರಿಲ್ಲ. ತೋರಸಾಕ ರೊಕ್ಕಾ ಇಲ್ಲ. ಹೆಂಗಾರ ಮಾಡಿ ಸಂಬಳ ಕೊಡಸಿರಿ ಇಲ್ಲ, ವಿಷ ಕೊಡಿ ಅದನ್ನಾದರೂ ನೆಮ್ಮದಿಯಿಂದ ಕುಡಿದು ಸಾಯುತ್ತೇವೆ ಎಂದು ಶಿಕ್ಷಕಿಯೊಬ್ಬರು ಧರಣಿಯಲ್ಲಿ ಕಣ್ಣೀರು ಹಾಕಿದ ಘಟನೆ ನಡೆಯಿತು.

ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಇವರ ಬೇಜವಾಬ್ದಾರಿತನದಿಂದ ಶಿಕ್ಷಕರಿಗೆ ಐದು ತಿಂಗಳಿಂದ ಸಂಬಳ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕೇರ್ ತೆಗೆದುಕೊಂಡಿಲ್ಲ. ಏನು ಮಾಡಿಕೊಂತಿರೋ ಮಾಡಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆಂದು ಆರೋಪಿಸಿದರು.

ಸಚಿವ ದರ್ಶನಾಪೂರ ಅವರಿಗೆ ಮನವಿ:

ಪ್ರಾಥಮಿಕ ಶಿಕ್ಷಕರ ಸಂಘದ ನಿಯೋಗವು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಎಸ್‌ಎಸ್‌ಎ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ 5 ತಿಂಗಳಿಂದ ಸಂಬಳವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಧರಣಿಗೆ ಮುಂದಾಗಿದ್ದೇವೆ. ಉಪನಿರ್ದೇಶಕರು ಕರ್ನಾಟಕ ನಾಗರಿಕ ಸೇವಾ ನಿಯಮದ ಪ್ರಕಾರ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿಕ್ಷಕರು ತಿಳಿಸಿದಾಗ, ಸಚಿವರು ಕೂಡಲೇ ಇಲಾಖೆ ಉಪನಿರ್ದೇಶಕರಿಗೆ ಫೋನ್ ಮೂಲಕ ಸಂಪರ್ಕಿಸಿ ಕೂಡಲೇ ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಅವರ ಸಮಸ್ಯೆಗೆ ಸ್ಪಂದಿಸುವಂತೆ ಖಡಕ್ ಸೂಚನೆ ನೀಡಿದಾಗ, ಉಪನಿರ್ದೇಶಕರು ಆಗಮಿಸಿದ್ದಾರೆ ಎಂದು ಶಿಕ್ಷಕರೊಬ್ಬರು ಮಾಹಿತಿ ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಶೀಬಾ ಜಲಿಯನ್ ಶಿಕ್ಷಕರಿಗೆ ಮನವಿ ಮಾಡಿದಾಗ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಯಾಳಗಿ, ಕಾರ್ಯದರ್ಶಿ ಲಕ್ಷ್ಮಣ ಲಾಳ ಸೇರಿ, ಉಪಾಧ್ಯಕ್ಷ ನಿಂಗಪ್ಪ ಅಂಗಡಿ, ಖಜಾಂಚಿ ಚಂದಪ್ಪ, ರಾಜ್ ಶೇಖರ, ಮಶಾಕ್ ಸಾಬ್, ಬನಶಂಕರ, ಪ್ರಕಾಶ, ಶಾಂತಗೌಡ, ರಮೇಶ್, ರಾಮನಗೌಡ, ಬಸಮ್ಮ, ಶಾಂತಮ್ಮ, ಜ್ಯೋತಿ, ಭುವನೇಶ್ವರಿ, ರಜಿಯಾ ಸುಲ್ತಾನ, ಪ್ರಸನ್ನ ಧರ್ಮರಾಜ ಸೇರಿ ಅನೇಕರು ಇದ್ದರು.

ಐದು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರು ಪರದಾಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಸಲ ತಂದರು ಯಾವುದೇ ಪ್ರಯೋಜನವಾಗಿಲ್ಲ. ಧರಣಿ ನಡೆಸಿದರೆ ಅಧಿಕಾರಿಗಳು ಬೆದರಿಕೆ ಹಾಕುವುದು ಸರಿಯಲ್ಲ. ನಾವು ಯಾವುದೇ ಬೆದರಿಕೆಗೂ ಹೆದರುವುದಿಲ್ಲ. ಎರಡು ಮೂರು ದಿನದಲ್ಲಿ ಸಂಬಳವಾಗದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.

ರಾಯಪ್ಪಗೌಡ ಹುಡೇದ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.

ಎಸ್ಎಸ್ಎ ಯೋಜನೆ ಅಡಿಯಲ್ಲಿ 150 ಜನ ಶಿಕ್ಷಕರಿಗೆ 3 ತಿಂಗಳಿಂದ ಸಂಬಳವಿಲ್ಲದಿರುವುದು. ನನ್ನ ಗಮನಕ್ಕೆ ಬಂದಿದೆ. ಶಿಕ್ಷಕರ ಸಂಘದವರು ಮನವಿ ಮಾಡಿಕೊಂಡಿದ್ದು ಶಿಕ್ಷಣ ಸಚಿವರಿಗೆ ಮತ್ತು ಆಯುಕ್ತರನ್ನು ಸಂಪರ್ಕಿಸಿ ಆದಷ್ಟು ಬೇಗ ವೇತನ ನೀಡುವ ವ್ಯವಸ್ಥೆ ಮಾಡುತ್ತೇನೆ.

ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.

ತಾಂತ್ರಿಕ ದೋಷದಿಂದ ಶಿಕ್ಷಕರಿಗೆ ಸಂಬಳ ವಿಳಂಬವಾಗಿದೆ. ರಾಜ್ಯದ ಒಂಬತ್ತು ಜಿಲ್ಲೆ 12 ತಾಲೂಕುಗಳಲ್ಲಿ ಇದೇ ಸಮಸ್ಯೆಯಾಗಿದೆ ಎರಡು ಮೂರು ದಿನದಲ್ಲಿ ಸಂಬಳವಾಗುತ್ತದೆ. ಶಿಕ್ಷಕರು ಚಿಂತಿಸುವ ಅಗತ್ಯವಿಲ್ಲ.

ಮಂಜುನಾಥ, ಉಪನಿರ್ದೇಶಕರು , ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!