ಅವಧಿ ಮುಗಿದ ಸಿದ್ಧ ಆಹಾರ ಮಾರಾಟ-ಮುಖ್ಯಾಧಿಕಾರಿ ಪರಿಶೀಲನೆ

KannadaprabhaNewsNetwork | Published : Apr 7, 2024 1:57 AM

ಸಾರಾಂಶ

ಆಹಾರ ಪದಾರ್ಥ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಿನಿಸಿನ ಗುಣಮಟ್ಟ

ಕನ್ನಡಪ್ರಭ ವಾರ್ತೆ ಕುಮಟಾ

ಬಳಕೆಯ ಅವಧಿ ಮೀರಿದ್ದರೂ ಸಿದ್ಧ ತಿಂಡಿ ತಿನಿಸು ಹಾಗೂ ಇತರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರ ದೂರನ್ನು ಆಧರಿಸಿ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಮುಖ್ಯ ಬಸ್ ನಿಲ್ದಾಣದ ಅಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಶುಕ್ರವಾರ ರಾತ್ರಿ ಪರಿಶೀಲಿಸಿದರು.

ಬಸ್ ನಿಲ್ದಾಣದೊಳಗಿದ್ದ ಅಂಗಡಿಗಳಲ್ಲಿ ಮಾರಾಟಕ್ಕಿದ್ದ ತಿನಿಸಿನ ಗುಣಮಟ್ಟದ ಬಗ್ಗೆ ಗ್ರಾಹಕರೊಬ್ಬರು ಪ್ರಶ್ನಿಸಿದಾಗ ಅಂಗಡಿಕಾರ ನಿರ್ಲಕ್ಷಿಸಿದ್ದರಿಂದ ಅವರು ಪುರಸಭೆಗೆ ದೂರಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಅಂಗಡಿಯಲ್ಲಿದ್ದ ತಿಂಡಿ-ತಿನಿಸುಗಳನ್ನು ಖುದ್ದು ಪರಿಶೀಲಿಸಿದರು.

ಅಲ್ಲಿನ ಅಂಗಡಿಗಳಲ್ಲಿ ಮಾರಾಟಕ್ಕಿದ್ದ ಅನೇಕ ಸಿದ್ಧ ತಿಂಡಿ ತಿನಿಸುಗಳು ಅವಧಿ ಮುಗಿದಿರುವುದು ಮತ್ತು ಕಳಪೆ ಗುಣಮಟ್ಟದ ತಿಂಡಿ ತಿನಿಸುಗಳು ಕಂಡುಬಂತು. ಈ ವೇಳೆ ಸಿಕ್ಕ ಅವಧಿ ಮೀರಿದ ತಿಂಡಿ ತಿನಿಸುಗಳನ್ನು, ಸರಿಯಾದ ಮಾಹಿತಿ ದಾಖಲಿಸದ ತಿಂಡಿ ಪೊಟ್ಟಣಗಳನ್ನು ಅಲ್ಲಿದ್ದ ಎಲ್ಲ ಅಂಗಡಿಗಳಿಂದ ಸಾಧ್ಯವಾದಷ್ಟು ವಶಪಡಿಸಿಕೊಳ್ಳಲಾಯಿತು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ಬಳಕೆಯೂ ಕಂಡುಬಂದಿದ್ದು ಅಂಗಡಿಕಾರರನ್ನು ಮುಖ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ವಶಪಡಿಸಿಕೊಂಡ ತಿಂಡಿ-ತಿನಿಸು ಆಹಾರ ಪೊಟ್ಟಣಗಳ ಮಾದರಿಯನ್ನು ಆಹಾರ ಸುರಕ್ಷತೆ ಇಲಾಖೆಗೆ ಪರಿಶೀಲನೆಗೆ ಕಳುಹಿಸಲಾಗುವುದು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಸ್ ನಿಲ್ದಾಣದ ಅಂಗಡಿಗಳಲ್ಲಿ ಅಸುರಕ್ಷಿತ ಆಹಾರ ಮಾರಾಟವಾಗುತ್ತಿರುವ ಕುರಿತು ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗಳಿಗೂ ಸೂಚನೆ ನೀಡುತ್ತೇವೆ. ಈ ಹಿಂದೆ ಇಲ್ಲಿ ತಂಬಾಕು ಉತ್ಪನ್ನ ಮಾರಾಟದ ಬಗ್ಗೆಯೂ ಸೂಚನೆ, ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿತ್ತು. ಅಂತಹ ಪ್ರಕ್ರಿಯೆಗಳು ಮತ್ತೆ ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆರೋಗ್ಯ ಅಧಿಕಾರಿಗಳ ಜೊತೆಗೆ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈ ರೀತಿಯ ವ್ಯವಹಾರಗಳು ಮುಂದೆ ನಡೆದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿ ಎಂ.ಎಸ್. ನಾಯ್ಕ, ಗ್ಲಾಡ್ಸನ್ ಇನ್ನಿತರರು ಇದ್ದರು.

Share this article