ಕಾರವಾರ:
ಎಸ್ಸಿ-ಎಸ್ಟಿಗೆ ಪಿಟಿಸಿಎಲ್ ಕಾಯ್ದೆ ಅಡಿ ಮಂಜೂರಾದ ಜಮೀನನ್ನು ಕಾನೂನು ಉಲ್ಲಂಘಿಸಿ ಖರೀದಿಸಿದವರಿಂದ ಮೂಲ ಮಂಜೂರುದಾರರ ವಾರಸುದಾರರಿಗೆ ಮರುಸ್ಥಾಪಿಸುವ ಮೂಲಕ ಪೂರ್ವಜರ ತಪ್ಪಿನಿಂದ ಭೂಮಿ ಕಳೆದುಕೊಂಡಿದ್ದ 3 ಕುಟುಂಬಕ್ಕೆ 20.44 ಎಕರೆ ಜಮೀನನ್ನು ಕಬ್ಜಾ ಕೊಡಿಸುವ ಮೂಲಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಶಾಶ್ವತ ಸೌಲಭ್ಯ ಒದಗಿಸಿದ್ದಾರೆ.ಬನವಾಸಿ ಹೋಬಳಿಯ ಕುಪ್ಪಗಡ್ಡೆ ಗ್ರಾಮದ ಬಸವರಾಜ ನಾಗಪ್ಪ ಭೋವಿವಡ್ಡರ ಅವರ ಪೂರ್ವಜರು ಗ್ರಾಮದ ಸರ್ವೇ ನಂ. 94ರಲ್ಲಿ ಮಾರಾಟ ಮಾಡಿದ್ದ 7 ಎಕರೆ 11 ಗುಂಟೆ ಜಮೀನನ್ನು ಮೂಲ ವಾರಿಸುದಾರರಿಗೆ ಮರು ಸ್ಥಾಪಿಸಲು ಖುದ್ದು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಜಮೀನಿನ ಅಳತೆ ಮಾಡಿಸಿ ಕಬ್ಜಾ ಆದೇಶ ಪತ್ರ ವಿತರಿಸಿದರು.1966ರಲ್ಲಿ ಈ ಜಮೀನನ್ನು ಪೂರ್ವಜರು ಮಾರಾಟ ಮಾಡಿದ್ದು ಅದನ್ನು ಈ ವರೆಗೆ ಮೂವರು ಖರೀದಿಸಿದ್ದರು. ಈ ಜಮೀನಿನ ಕುರಿತಂತೆ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ಮೂಲ ಮಂಜೂರಿಯ ವಾರಿಸುದಾರರ ಹೆಸರಿಗೆ ಮರುಸ್ಥಾಪಿಸಿ ಆದೇಶಿಸಿದರು.ಕಾನೂನು ಪ್ರಕಾರ ಈ ಜಮೀನು ನಿಮಗೆ ಸೇರಬೇಕಾದದ್ದು, ಸರ್ಕಾರ ನಿಮ್ಮ ಅಭಿವೃದ್ಧಿ ಗೆ ನೀಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಸೂಚಿಸಿದ ಜಿಲ್ಲಾಧಿಕಾರಿಗಳು,ಇದರಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.ಜಮೀನಿನ ಕಬ್ಜಾ ಪಡೆದ ಬಸವರಾಜ ನಾಗಪ್ಪ ಭೋವಿವಡ್ಡರ ಮತ್ತು ಅನುಸೂಯಾ ದಂಪತಿ, ನಮ್ಮ ಜಮೀನನ್ನು ನಮಗೆ ಕೊಡಿಸಿದ ಜಿಲ್ಲಾಧಿಕಾರಿಗೆ ವಂದಿಸಿದರು.ಮುಂಡಗೋಡು ತಾಲೂಕಿನ ನಂದಿಕಟ್ಟಾ ಗ್ರಾಮದ ಸ.ನಂ. 219ಬ ರಲ್ಲಿ 3 ಎಕರೆ 17 ಗುಂಟೆ ಜಮೀನನ್ನು ಫಕೀರಪ್ಪ ಕೇರಪ್ಪ ಮಾದರ್ ಅಲಿಯಾಸ್ ಹರಿಜನ ಅವರಿಗೆ ಹಾಗೂ ಹುನಗುಂದದಲ್ಲಿ 10 ಎಕರೆ 16 ಗುಂಟೆ ಶಿವಪ್ಪ ರೂಪಲಮಪ್ಪ ಲಮಾಣಿ ಅವರಿಗೆ ಕಬ್ಜಾ ಆದೇಶವನ್ನು ಜಿಲ್ಲಾಧಿಕಾರಿ ವಿತರಿಸಿದರು.
ಜಿಲ್ಲಾಧಿಕಾರಿ ಒಬ್ಬರು ಈ ರೀತಿ ಪರಿಶಿಷ್ಟ ಜಾತಿ ಪಂಗಡದವರಿಗೆ ಜಮೀನು ಕಬ್ಜಾ ಕೊಡಿಸಲು ಖುದ್ದು ಆಗಮಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಜಮೀನು ಪಡೆದವರಿಗೆ ಜಮೀನಿನ ಮಹತ್ವ ಮತ್ತು ಕಾನೂನಿನ ಅರಿವು ಮೂಡಿಸಿ, ನ್ಯಾಯ ಒದಗಿಸಿದ ಈ ಕಾರ್ಯ ಸದಾ ನೆನಪಿನಲ್ಲಿರುವ ಮಾದರಿ ಕಾರ್ಯವಾಗಿದೆ.ಶಿರಸಿ ತಹಸೀಲ್ದಾರ್ ಶ್ರೀಧರ, ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ತಾಲೂಕು ಭೂ ಧಾಖಲೆಗಳ ನಿರ್ದೇಶಕರು, ಸರ್ವೇಯರ್‌ಗಳು, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.