ಅಂಕೋಲಾ: ಪ್ರಾಣಿವಧೆಯ ನಿಷೇಧ ದಿನವಾದ ಅ. 2ರ ಗಾಂಧಿ ಜಯಂತಿಯಂದು ಕೋಳಿಗಳನ್ನು ವಧೆ ಮಾಡಿ ಮಾರುತ್ತಿದ್ದ ಪಟ್ಟಣದ ಕಾಕರಮಠ ರಸ್ತೆಯ ನೂರಾನಿ ಚಿಕನ್ ಸೆಂಟರ ಮೇಲೆ ಪುರಸಭೆ ಮುಖ್ಯಾಧಿಕಾರಿ ಎಚ್. ಅಕ್ಷತಾ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ದೇಶಾದ್ಯಂತ ಅ. 2ರಂದು ಗಾಂಧಿ ಜಯಂತಿ ಆಚರಿಸಲಾಗುತ್ತಿದೆ. ಈ ದಿನದಂದು ದೇಶದಲ್ಲಿ ಪ್ರಾಣಿವಧೆ ಮಾಡುವಂತಿಲ್ಲ. ಹೀಗಾಗಿ ರಾಜ್ಯದಲ್ಲಿ ಚಿಕನ್, ಮಟನ್ ಮಾಂಸ ಮಾರಾಟ ನಿಷೇಧ ದಿನ ಹೊರಡಿಸಿ ಆದೇಶ ಹೊರಡಿಸಲಾಗಿತ್ತು.ಆದರೆ ಕಾಕರಮಠದ ನೂರುದ್ದೀನ್ ಎಂ. ಶೇಖ ಅವರು ತಮ್ಮ ಮಾಲೀಕತ್ವದ ನೂರಾನಿ ಚಿಕನ್ ಸೆಂಟರ್‌ನಲ್ಲಿ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದಾಗ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ, ಪಿಎಸ್‌ಐ ಉದ್ದಪ್ಪ ಧರೆಪ್ಪನವರ್, ಆರೋಗ್ಯ ನಿರೀಕ್ಷಕ ವಿಷ್ಣು ಗೌಡ, ಪೊಲೀಸ್ ಸಿಬ್ಬಂದಿ ಸಚಿನ್ ನಾಯಕ ದಾಳಿ ನಡೆಸಿ ಕೋಳಿ ಮಾಂಸ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾಂಸವನ್ನು ಬೊಗ್ರಿಬೈಲನ ಘನತಾಜ್ಯ ಘಟಕದಲ್ಲಿ ಸುಟ್ಟು ನಾಶಪಡಿಸಲಾಯಿತು.
ಶ್ರಮದಾನದ ಮೂಲಕ ಮಹಾತ್ಮರ ದಿನಾಚರಣೆಸಿದ್ದಾಪುರ: ಎಂಜಿಸಿ ಕಲಾ, ವಾಣಿಜ್ಯ ಹಾಗೂ ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಎನ್ಎಸ್ಎಸ್ ಘಟಕ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಪರಂಪರಾ ಕೂಟ ಸಹಯೋಗದಲ್ಲಿ ಸ್ವಚ್ಛತಯೇ ಸ್ವಭಾವ, ಸ್ವಚ್ಛತೆಯೇ ಸಂಸ್ಕಾರ ಧ್ಯೇಯದಡಿ ಮಹಾತ್ಮಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷೆ ಪ್ರೊ. ಚೇತನಾ ಎಂ.ಎಚ್. ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಗನ್ನಾಥ ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಡಾ. ದೇವನಾಂಪ್ರಿಯ ಎಂ., ಯುವ ರೆಡ್‌ಕ್ರಾಸ್ ಘಟಕದ ಯೋಜನಾಧಿಕಾರಿ ಸಾಗರ ಪಾಟೀಲ, ಪರಂಪರಾ ಕೂಟದ ಸಂಚಾಲಕ ಪ್ರೊ. ದೀಪಕ ನಾಯ್ಕ ಉಪಸ್ಥಿತರಿದ್ದರು. ನಂತರ ಎಲ್ಲ ವಿದ್ಯಾರ್ಥಿಗಳು ಸಂಪೂರ್ಣ ಮಹಾವಿದ್ಯಾಲಯ, ಮಹಾವಿದ್ಯಾಲಯದ ಎದುರಿನ ರಸ್ತೆ, ಬಸ್ ಸ್ಟ್ಯಾಂಡನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ಮಹಾತ್ಮರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.