ಜಗಳೂರಲ್ಲಿ ಪಿಒಪಿ ಗಣೇಶಗಳ ಮಾರಾಟಕ್ಕೆ ಬ್ರೇಕ್: ಜಪ್ತಿ ಎಚ್ಚರಿಕೆ

KannadaprabhaNewsNetwork |  
Published : Sep 07, 2026, 01:45 AM IST
  06 ಜೆ,ಜಿ,ಎಲ್‌,2) : ಜಗಳೂರು ಪಟ್ಟಣದ ವಿವಿಧ ಗಣೇಶ ಮೂರ್ತಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪಿಒಪಿ ಮೂರ್ತಿಗಳ ಪರಿಶೀಲನೆ ನಡೆಸಿದ ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಹಾಗೂ ಸಿಬ್ಬಂದಿ. | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಆದೇಶದಂತೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಸ್ಥಳೀಯ ಆಡಳಿತ ಸಮರ ಸಾರಿದೆ. ಪಟ್ಟಣದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ತಡೆಯುವ ನಿಟ್ಟಿನಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಶುಕ್ರವಾರ ವಿವಿಧೆಡೆ ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದಾರೆ.

- ರಾಸಾಯನಿಕ ಬಣ್ಣಗಳ ಗಣೇಶ ತಯಾರಿಸುವಂತಿಲ್ಲ: ಪಪಂ ಮುಖ್ಯಾಧಿಕಾರಿ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ​ಜಗಳೂರು

ಪ್ರಸಕ್ತ ಸಾಲಿನ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಆದೇಶದಂತೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣಲೇಪಿತ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಸ್ಥಳೀಯ ಆಡಳಿತ ಸಮರ ಸಾರಿದೆ. ಪಟ್ಟಣದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ತಡೆಯುವ ನಿಟ್ಟಿನಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಶುಕ್ರವಾರ ವಿವಿಧೆಡೆ ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದರು.

ಪಟ್ಟಣದ ಪ್ರಮುಖ ವ್ಯಾಪಾರ ಪ್ರದೇಶಗಳಾದ ಜಿನಿಗರ ಬೀದಿ ಹಾಗೂ ಚಳ್ಳಕೆರೆ ಗೇಟ್ ಬಳಿ ಇರುವ ಗಣೇಶ ಮೂರ್ತಿ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಮುಖ್ಯಾಧಿಕಾರಿ, ಮಾರಾಟಕ್ಕೆ ಇಡಲಾಗಿರುವ ಮೂರ್ತಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ ಪಿಒಪಿ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದೆಂದು ಮಳಿಗೆಗಳ ಮಾಲೀಕರಿಗೆ ತಿಳಿವಳಿಕೆ ಚೀಟಿ ನೀಡಿ, ಸರ್ಕಾರದ ನಿಯಮಾವಳಿಗಳ ಬಗ್ಗೆ ಜಾಗೃತಿ ಮೂಡಿಸಿದರು.

​ನಿಯಮ ಉಲ್ಲಂಘಿಸಿದರೆ ಜಪ್ತಿ, ಕಾನೂನು ಕ್ರಮ:

ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಮಾತನಾಡಿ, ಪಿಒಪಿಯಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಇವುಗಳಲ್ಲಿ ಬಳಕೆಯಾಗುವ ಅಪಾಯಕಾರಿ ರಾಸಾಯನಿಕ ಬಣ್ಣಗಳು ಜಲಮೂಲಗಳನ್ನು ಕಲುಷಿತಗೊಳಿಸುವುದಲ್ಲದೇ, ಜಲಚರಗಳ ಜೀವಕ್ಕೆ ಗಂಭೀರ ಕಂಟಕವಾಗಲಿವೆ. ಹೀಗಾಗಿ, ಸಾರ್ವಜನಿಕರು ಹಾಗೂ ಮೂರ್ತಿ ತಯಾರಕರು ಸಾಂಪ್ರದಾಯಿಕವಾಗಿ ಮಣ್ಣಿನಿಂದಲೇ ತಯಾರಿಸಿದ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪಿಒಪಿ ಮೂರ್ತಿಗಳನ್ನು ತಯಾರಿಸುವುದು, ಸಾಗಣೆ ಮಾಡುವುದು ಅಥವಾ ಮಾರಾಟ ಕಂಡುಬಂದಲ್ಲಿ ಅಂತಹ ಮೂರ್ತಿಗಳನ್ನು ತಕ್ಷಣವೇ ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಕೆ ನೀಡಲಾಯಿತು.

​ಪರಿಶೀಲನಾ ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಬರಮಪ್ಪ, ಸಿಬ್ಬಂದಿ ನೇತ್ರಾವತಿ, ಮಮತಾ, ರಾಜು ಸೇರಿದಂತೆ ಸ್ಥಳೀಯ ಆಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.

- - -

-06 ಜೆಜಿಎಲ್‌2: ಜಗಳೂರು ಪಟ್ಟಣದ ವಿವಿಧ ಗಣೇಶ ಮೂರ್ತಿ ಮಾರಾಟ ಮಳಿಗೆಗಳಿಗೆ ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪಿಒಪಿ ಮೂರ್ತಿಗಳ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಕಲ್ಯಾಣಾರ್ಥ ಕಲ್ಯಾಣೋತ್ಸವ ಪೂಜಾ ಮಹೋತ್ಸವ
ಶಿಕ್ಷಕ ವೃತ್ತಿಗೆ ಸಿಗುವ ಗೌರವ ಮತ್ತ್ಯಾವ ವೃತ್ತಿಗೂ ಸಿಗಲಾರದು