ಯಲ್ಲಾಪುರ: ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಜಿಂಕೆ ಮಾಂಸ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ.ಪಿ. ಹಾಗೂ ಯಲ್ಲಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಜಯ್ ಎಚ್. ನಾಯ್ಕ ಅವರ ನೇತೃತ್ವದಲ್ಲಿ ತಾಲೂಕಿನ ಮದನೂರ ಗ್ರಾಪಂನ ಹುಲಗೋಡಿನ ಕೂಲಿ ಕೆಲಸ ಮಾಡುವ ರಮೇಶ ನಾಗೇಶ ಗಾಂವ್ಕರ್(೨೯) ಮನೆಯನ್ನು ಪರಿಶೀಲಿಸಿದಾಗ, ಜಿಂಕೆ ಮಾಂಸ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ, ಜಿಂಕೆಗಳನ್ನು ಬೇಟೆಯಾಡಿ, ಮಾಂಸವನ್ನು ವ್ಯಾಪಾರ ಮಾಡುತ್ತಿರುವ ದಂಧೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ.ಕಿರವತ್ತಿ ವಲಯ ಅರಣ್ಯಾಧಿಕಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಸಿಮಾಂಸ ೩.೩ ಕೆಜಿ, ಎರಡು ಕಾಲು, ಒಂದು ತಲೆ, ಒಂದು ಚರ್ಮ, ಒಂದು ಕತ್ತಿ ಜಪ್ತಿ ಮಾಡಲಾಗಿದೆ. ತನ್ನ ಜತೆ ಈ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಿರುವವರ ಹೆಸರು ತಿಳಿಸಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದು, ಉಳಿದವರ ಪತ್ತೆಗಾಗಿ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿಗಳಾದ ಆನಂದ, ವಿನಯ, ಮಂಜುನಾಥ, ಪ್ರಕಾಶ, ಕಿರಣಕುಮಾರ ಹಾಗೂ ವಲಯದ ಗಸ್ತು ವನಪಾಲಕರು ಮತ್ತು ಇತರ ಸಿಬ್ಬಂದಿ ಭಾಗವಹಿಸಿದ್ದರು.ಕಾರು, ಬಸ್ಸು ಡಿಕ್ಕಿ: ಬಸ್ ಚಾಲಕನ ವಿರುದ್ಧ ದೂರುಯಲ್ಲಾಪುರ: ತಾಲೂಕಿನ ಬೇಡ್ತಿ ಬ್ರಿಡ್ಜ್‌ನಿಂದ ೫೦೦ ಮೀ. ದೂರದಲ್ಲಿ ಕೆಎಸ್ಆರ್‌ಟಿಸಿ ಬಸ್ಸು ಮತ್ತು ಕಾರಿನ ನಡುವೆ ಸೆ. ೧೨ರಂದು ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾರು ಚಾಲಕ ಯಲ್ಲಾಪುರದ ನಿವಾಸಿ ಅಲ್ತಾಫ್ ಅಹಮ್ಮದ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಬಸ್ ಚಾಲಕ ಗಣೇಶ ಪ್ರದೀಪ ನಾಯ್ಕ, ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.
ಅಪಘಾತದಲ್ಲಿ ಅಲ್ತಾಫ್ ಅಹಮ್ಮದ್ ಅವರ ಕಾರಿನ ಮುಂದಿನ ಬಲಭಾಗದ ಬಂಪರ್, ಬೋನೆಟ್, ಹೆಡ್‌ಲೈಟ್ ಇಂಡಿಕೇಟರ್, ಶಾಕ್ ಅಬ್ಸರವರ್ ಮತ್ತು ಹಿಂದಿನ ಬಂಪರ್‌ಗೆ ಹಾನಿಯಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯ ಟ್ರಾಫಿಕ್ ಪಿಎಸ್‌ಐ ನಸ್ರೀನ್ ತಾಜ್ ಚಟ್ಟರಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.