ಕನ್ನಡಪ್ರಭ ವಾರ್ತೆ ಕೋಟ
ಪ್ರಸ್ತುತ ಲ್ಯಾಂಡ್ ಮಾಫಿಯಾದಿಂದ ಕೃಷಿ ಭೂಮಿ ಅವನತಿಯ ದಾರಿಯಲ್ಲಿದೆ. ಆದರೆ ಅಲ್ಲಲ್ಲಿ ಅಳಿದುಳಿದ ಭೂಮಿಯಲ್ಲಿ ಹಳೆ ತಲೆಮಾರು ಕಾರ್ಯಾಭಾರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ನಕ್ಷತ್ರಿ ಕುಟುಂಬ ರೈತಕಾಯಕ ನಿಜಕ್ಕೂ ಶ್ಲಾಘನೀಯ ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು.ಅವರು ಇಲ್ಲಿನ ಹಿರಿಯ ಕೃಷಿಕ ಬಾಲಕೃಷ್ಣ ನಕ್ಷತ್ರಿ ಮನೆಯಂಗಳದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ‘೩೬ನೇ ರೈತರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವ ಸಮುದಾಯ ಆಸಕ್ತಿ ವಹಿಸಿದಾಗ ಮಾತ್ರ ಕೃಷಿ ಉಳಿಸಲು ಸಾಧ್ಯ. ತಂದೆ ತಾಯಿಗಳಂತೆ ಮಕ್ಕಳು ಕೂಡ ಕೃಷಿ ಕಾಯಕವನ್ನು ಮುಂದಿನ ತಲೆಮಾರಿನತ್ತ ಕೊಂಡೊಯ್ಯುವ ಕಾರ್ಯ ಮಾಡಬೇಕಿದೆ. ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಹಿರಿಯ ರೈತ ಕಾಯಕಜೀವಿ ಯಶೋದಾ ನಕ್ಷತ್ರಿ ದಂಪತಿಗೆ ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು. ಪುತ್ರರಾದ ಬಾಲಕೃಷ್ಣ, ಬಾಲಚಂದ್ರ ನಕ್ಷತ್ರಿ ಕುಟುಂಬಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪರಿಸರ ಕಾಳಜಿಯ ನಿಮಿತ್ತ ನಕ್ಷತ್ರಿ ಕುಟುಂಬದ ಭೂಮಿಯಲ್ಲಿ ಗಿಡ ನೆಡಲಾಯಿತು.
ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಕೃಷಿ ಸವಲತ್ತಿನ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.ವಿವೇಕ ವಿದ್ಯಾಸಂಸ್ಥೆ ಉಪನ್ಯಾಸಕ ಸಂಜೀವ ಗುಂಡ್ಮಿ, ಹಂದಟ್ಟು ಪಾಂಚಜನ್ಯ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ರೋಟರಿ ಕ್ಲಬ್ ಅಧ್ಯಕ್ಷ ದೇವಪ್ಪ ಪಟಗಾರ್, ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ವಿಪ್ರ ಮಹಿಳಾ ಬಳಗ ಸಂಚಾಲಕಿ ವನೀತಾ ಉಪಾಧ್ಯ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಜತೆಕಾರ್ಯದರ್ಶಿ ಶಕೀಲ ಎನ್. ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆಯೊಂದಿಗೆ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶಶಿಧರ ತಿಂಗಳಾಯ ವಂದಿಸಿದರು.