ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾನ್ವಿತ ಮಕ್ಕಳಿಗೆ ಜಾಗತಿಕ ನಾಗರಿಕರು ಮತ್ತು ಭವಿಷ್ಯದ ನಾಯಕರಾಗಿ ಅಭಿವೃದ್ಧಿ ಹೊಂದಲು ಅವಕಾಶಗಳನ್ನು ನೀಡುವ ಉದ್ದೇಶದಿಂದ ಸಂವಿತ್ ವಸತಿ ಶಾಲೆಯನ್ನು ಕಳೆದ ಜೂನ್‌ನಲ್ಲಿ ಪ್ರಾರಂಭಿಸಲಾಯಿತು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ನಂದಿ ಗ್ರಾಮದ ನಂದಿ ಬೆಟ್ಟದ ತಪ್ಪಲಿನಲ್ಲಿ ಶ್ರೀ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾನ್ವಿತ ಮಕ್ಕಳಿಗಾಗಿ ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಂವಿತ್ ವಸತಿ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಶಿಸ್ತು, ಮೌಲ್ಯಗಳನ್ನು ಕಲಿಸಬೇಕು
ಈ ವಸತಿ ಶಾಲೆಯಲ್ಲಿ ಮಕ್ಕಳಲ್ಲಿ ಪ್ರೀತಿ, ಆಧ್ಯಾತ್ಮಿಕತೆ, ಸಹಾನುಭೂತಿ, ಶಿಸ್ತು ಮತ್ತು ಗೌರವದಂತಹ ಸಾಂಪ್ರದಾಯಿಕ ಮೌಲ್ಯಗಳನ್ನು ತುಂಬುವ ಮೂಲಕ ಮಾನವೀಯತೆಯ ಸೇವೆಗೆ ಆದ್ಯತೆ ನೀಡುವ ಮನಸ್ಥಿತಿಯನ್ನು ಬೆಳೆಸುವುದು ಮುಖ್ಯ ಗುರಿಯಾಗಿದೆ. ಮಠವು ಅನ್ನ ಅಕ್ಷರ ಆಶ್ರಯ ಕಲ್ಪಿಸುವ ಮಹದಾಸೆ ಹೊಂದಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದರು.ಸಂವಿತ್ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಜೀವನದ ಪ್ರತಿಯೊಂದು ಅಂಶವನ್ನು ಎದುರಿಸಲು ಅವರನ್ನು ಸಿದ್ಧಪಡಿಸಲು ಉದ್ದೇಶಿಸಿದ್ದು, ವೈಯಕ್ತಿಕ ಸಾಧನೆ ಮತ್ತು ಸಾಮೂಹಿಕ ಶ್ರೇಷ್ಠತೆಯ ಶಾಲಾ ಸಮುದಾಯವನ್ನು ನಿರ್ಮಿಸುವುದು. ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸಲು ಮತ್ತು ಅವರ ಮನಸ್ಸು ಮತ್ತು ಆತ್ಮಗಳನ್ನು ಪ್ರಬುದ್ಧಗೊಳಿಸಲು ನಿರಂತರವಾಗಿ ಮೌಲ್ಯಯುತ ಪಠ್ಯಕ್ರಮ ಅನುಸರಿಸಲಾಗುವುದು ಎಂದರು.
ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯಸಂವಿತ್ ನಲ್ಲಿ ಮಕ್ಕಳ ವೈಯಕ್ತಿಕ ಅಭಿವ್ಯಕ್ತಿಗೆ ಸ್ವಾತಂತ್ರ್ಯ ಮತ್ತು ಸ್ಥಳವನ್ನು ಒದಗಿಸುವುದು ಅವರನ್ನು ಸ್ವಾವಲಂಬಿ, ಸ್ವಯಂ ಪ್ರೇರಿತ ಮತ್ತು ಆತ್ಮವಿಶ್ವಾಸದ ವ್ಯಕ್ತಿಯಾಗಲು ಅನುವು ಮಾಡಿಕೊಡುತ್ತದೆ.ಸಮಗ್ರತೆ, ಪರಿಶ್ರಮ, ನಮ್ರತೆ ಮತ್ತು ಶಿಸ್ತಿನ ಪ್ರಮುಖ ಮೌಲ್ಯಗಳಿಗೆ ಸಂಬಂಧಿಸಿದಂತೆ ಮತ್ತು ಯುವ ಮನಸ್ಸಿನಲ್ಲಿ ನೈತಿಕ, ಸಾಂಸ್ಕೃತಿಕ, ದೇಶಭಕ್ತಿ ಮತ್ತು ಪರಿಸರ ಮೌಲ್ಯಗಳನ್ನು ಅಳವಡಿಸಿ ಕಲಿಕೆಯನ್ನು ಪರಿಷ್ಕರಿಸಲಾಗುವುದು.ಬಡ, ನಿರ್ಗತಿಕ ಮತ್ತು ಪ್ರತಿಭಾವಂತ ಮಕ್ಕಳಿಗೆ ಉಚಿತ ಮತ್ತು ಸಂಪೂರ್ಣ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಹೇಳಿದರು.ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಮಾತನಾಡಿ, ಸಂವಿತ್ ಶಾಲೆಗೆ ದಾಖಲೆ ಪಡೆಯುವ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ವಸತಿ ಸೌಲಭ್ಯ ಕಲ್ಪಿಸಲಾಗುವುದು, ಪ್ರಾಥಮಿಕ ಹಂತದ ಆರನೇ ತರಗತಿಯಿಂದ ಪದವಿ ಪೂರ್ವ ಶಿಕ್ಷಣದವರೆಗೂ ನೀಡಲಾಗುವುದು. ಕೋವಿಡ್ ನಿಂದ ಪೋಷಕರ ಕಳೆದು ಕೊಂಡವರು, ಪೋಷಕರಿಲ್ಲದ ಮಕ್ಕಳು, ಆರ್ಥಿಕವಾಗಿ ದುರ್ಬಲರಾದ ಮಕ್ಕಳು ದಾಖಲಾತಿಗೆ ಅರ್ಹರಾಗಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ,ಸೌಮ್ಯನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಸಾಯಿ ಕೀರ್ತಿನಾಥ ಸ್ವಾಮೀಜಿ, ಕೆಪಿಎಸ್ ಸಿಯ ಮಾಜಿ ಅಧ್ಯಕ್ಷ ಹೆಚ್.ಎನ್.ಕೃಷ್ಣ, ಭಗತ್ ಸಿಂಗ್ ಚಾರಿಟಬಲ್ ಅಧ್ಯಕ್ಷ ಸಂದೀಪ್ ರೆಡ್ಡಿ, ವಕ್ಕಲಿಗ ಮುಖಂಡರಾದ ದೇವರಾಜ್, ಯಲುವಹಳ್ಳಿ ರಮೇಶ್, ಅಪ್ಪಯ್ಯಣ್ಣ, ರಾಜಣ್ಣ, ರಾಜಶೇಖರ್,ಜಿ.ಆರ್. ಶ್ರೀನಿವಾಸ್, ಮುನಿಶಾಮಿ, ಎಸ್ ಜೆ ಸಿ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ ಟಿ ರಾಜು, ಬಿಜಿಎಸ್ ಪಿಯು ಕಾಲೇಜಿನ ಆಡಳಿತಾಧಿಕಾರಿ ಡಾ. ಮಧುಸೂಧನ್, ಬಿಜಿಎಸ್ ಮುಖ್ಯೋಪಾಧ್ಯಾಯ ಡಿ.ಸಿ.ಮೋಹನ್ ಕುಮಾರ್, ಶಿಕ್ಷಕ ಗೋಪಾಲಕೃಷ್ಣ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್. ಆಂಜನೇಯರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಿನಿ, ಉಪಾಧ್ಯಕ್ಷ ಮಲ್ಲಪ್ಪ, ಪಿಡಿಒ ರವಿಕುಮಾರ್ ಇದ್ದರು.ಸಿಕೆಬಿ-2 ಸಂವಿತ್ ವಸತಿ ಶಾಲೆಯ ಕಟ್ಟಡಕ್ಕೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿದರು.