ಅಳ್ನಾವರ: ಸನಾತನ ಧರ್ಮ ಸುಂದರ ಬದುಕಿನ ಚಿತ್ರಣ ಬಿಂಬಿಸುತ್ತದೆ. ಸಮಾಜದ ಎಲ್ಲ ವರ್ಗದ ಜನರು ಒಗ್ಗಟ್ಟಾಗಿ ಬದುಕು ಕಟ್ಟಿಕೊಂಡ ಭಾರತೀಯ ಭವ್ಯ ಸಂಸ್ಕೃತಿಯಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡುವ ದಿಟ್ಟ ಶಕ್ತಿ ಅಡಗಿದೆ, ಇದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಮಹಾಸ್ವಾಮೀಜಿ ಹೇಳಿದರು.ಸಮೀಪದ ಬೆಣಚಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಸನಾತನ ಧರ್ಮ ಸಂಪತ್ತು ಶ್ರೇಷ್ಟ ಮೌಲ್ಯ ಪ್ರತಿಪಾದಿಸುತ್ತದೆ. ಸದಾ ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ. ಬಸವಾದಿ ಶರಣರ, ಮಹಾತ್ಮರ, ಖುಷಿ ಮುನಿಗಳ ತತ್ವ, ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ ಎಂದರು.
ನಮ್ಮ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ, ದಾರ್ಶನಿಕ ಮೌಲ್ಯಗಳು ಮಾನವೀಯ ಗುಣಗಳನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಮಾಡಿವೆ. ಜಾತ್ರೆಗೂ ಧರ್ಮ ಜಾಗೃತಿಗೂ ಅವಿನಾಭಾವ ಸಂಬಂಧ ಇದೆ. ಜಾತ್ರೆಯ ಮೂಲಕ ಮಾಡುವ ಧರ್ಮ ಜಾಗೃತಿ, ಅನ್ನಧಾನ, ಪೂಜೆ, ಪುನಸ್ಕಾರ, ಶಾಸ್ತ್ರಗಳ ಪಠಣ, ಭಜನೆ, ಕೀರ್ತನೆ, ಧಾನ, ಧರ್ಮ ಒಳ್ಳೇಯ ಸೂತ್ರ ಸೂಚಿಸುತ್ತವೆ. ನಮ್ಮ ಸಂಸ್ಕೃತಿಯಲ್ಲಿ ಸನ್ಮಾರ್ಗದ ಹಾದಿ ಇದೆ.ದುಶ್ಚಟಗಳಿಂದ ದೂರ ಇದ್ದು, ವ್ಯಸನಮುಕ್ತ ಸುಸಂಸ್ಕೃತ ಹಳ್ಳಿ ಕಟ್ಟುವ ಕಾರ್ಯ ಶಿಕ್ಷಣ ಮತ್ತು ಧರ್ಮಾಚರಣೆ ಮೂಲಕ ನಡೆಯಲಿ ಎಂದು ಹೇಳಿದರು.ಬೆಳಗಾವಿ ಮುಕ್ತಿಮಠದ ಶಿವಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು, ಕಿವಡೆಬೈಲನ ಬಾಲಯೋಗಿ ಮಾಣಿಕ್ಯ ಚೆನ್ನವೃಷಭೇಂಧ್ರ ಸ್ವಾಮೀಜಿ, ರವಿಶಾಸ್ತ್ರೀಜಿ, ಈರಯ್ಯ ದೇವರಕೊಂಡ, ಬಸಯ್ಯ ಹಿರೇಮಠ, ಹಿರೇಮುನವಳ್ಳಿಯ ಶಂಬುಲಿಂಗ್ ಶಿವಾಚಾರ್ಯ ಸ್ವಾಮೀಜಿ, ಧರ್ಮದರ್ಶಿ ನಾರಾಯಣಗೌಡ ಪಾಟೀಲ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ಕಮ್ಮಾರ, ಶ್ರೀಕಾಂತ ಗಾಯಕವಾಡ, ಸುರೇಶಗೌಡ ಕರಿಗೌಡರ, ಕೆ.ಎಲ್ ನಾಯಕ ಇದ್ದರು.
ಎ.ಕೆ.ಹೊನಗೇಕರ ಸ್ವಾಗತಿಸಿದರು. ಡಿ.ಎನ್.ಖಾನಾಪೂರಕರ ನಿರೂಪಿಸಿದರು. ಎಸ್.ಎನ್. ಪಾಟೀಲ ವಂದಿಸಿದರು.