-ಬಡಗಬೈಲು ಗ್ರಾಮದ ಕನಗೆರೆಯ ರಂಗನಾಥೇಶ್ವರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ
ಸನಾತನ ಧರ್ಮಕ್ಕೆ ವಿಶೇಷ ಸ್ಥಾನಮಾನವಿದೆ. ಪ್ರತಿ ಸಮಸ್ಯೆಗಳಿಗೂ ಸನಾತನ ಧರ್ಮದಲ್ಲಿ ಉತ್ತರವಿದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧು ಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಗುರುವಾರ ಬಡಗಬೈಲು ಗ್ರಾಮದ ಕನಗೆರೆ ಶ್ರೀ ರಂಗನಾಥೇಶ್ವರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಕುಂಭಾಭಿಷೇಕದಲ್ಲಿ ಆಶೀರ್ವಚನ ನೀಡಿದರು. ಸನಾತನ ಧರ್ಮದ ವೇದ, ಭಗವದ್ಗೀತೆ, ಪುರಾಣ, ಶಾಸ್ತ್ರದ ಗ್ರಂಥ ಗಳಲ್ಲಿ ಪ್ರತಿ ಸಮಸ್ಯೆಗೂ ಉತ್ತರವಿದೆ. ನಮ್ಮ ಸನಾತನ ಧರ್ಮವು ವಿಸ್ತಾರವಾಗಿದೆ. ಶಂಕರಾಚಾರ್ಯರು ಸನಾತನ ಧರ್ಮದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಸನಾತನ ಧರ್ಮ, ಪರಂಪರೆ ಶ್ರೇಷ್ಠ. ಪ್ರತಿಯೊಬ್ಬರೂ ತಾವು ಸುಖವಾಗಿರಬೇಕು ಎಂದು ಬಯಸುತ್ತಾರೆ.ಸುಖವಾಗಿರಲು ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದರೆ, ಸುಖವಾಗಿರಲು ಬೇಕಾದ ಮಾರ್ಗ ಕಂಡುಕೊಂಡಿರುವುದಿಲ್ಲ. ಯಾವುದೇ ಪ್ರಯತ್ನ ಮಾಡದೆ ಅಥವಾ ಪ್ರಯತ್ನ ತಪ್ಪಾಗಿದ್ದರೆ ಫಲ ಸಿಗುವುದಿಲ್ಲ. ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು ಪ್ರಯತ್ನ ಪಟ್ಟರೆ ಸುಖ ಸಿಗಲಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸನಾತನ ಧರ್ಮದ ಉಳಿಸಲು ಶೃಂಗೇರಿ ಉಭಯ ಜಗದ್ಗುರು ತುಂಬಾ ಶ್ರಮ ಪಟ್ಟಿದ್ದಾರೆ. ಶೃಂಗೇರಿ ಮಠದಿಂದ ರಾಜ್ಯದ 17 ಸಾವಿರ ದೇವಸ್ಥಾನಗಳು ಜೀರ್ಣೋದ್ದಾರಗೊಂಡಿದೆ. ನಾನು ಶಾಸಕನಾಗಿ ಶೃಂಗೇರಿ ಕ್ಷೇತ್ರ ಅಭಿವೃದ್ಧಿಗೆ ಶೃಂಗೇರಿ ಶ್ರೀಗಳ ಆಶೀರ್ವಾದವೇ ಕಾರಣ. ಕನಗೆರೆಯಲ್ಲಿ ದೇವಸ್ಥಾನದ ಸಮಿತಿಯವರು ಸುಂದರ ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನಕ್ಕೆ ಹೋಗಲು ಬೇಕಾದ ರಸ್ತೆ ತುರ್ತಾಗಿ ನಾನು ಮಾಡಿಸಿಕೊಟ್ಟಿದ್ದೇನೆ. ಶೃಂಗೇರಿ ಮಠದ ಹೆಸರು ವಿಶ್ವವ್ಯಾಪಿಯಾಗಿದೆ. ಶೃಂಗೇರಿ ಮಠದಿಂದ ಶಾಸಕನಾದ ನನಗೂ ಗೌರವ ಬಂದಿದೆ. ಈ ದೇವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಶೃಂಗೇರಿ ಶ್ರೀಗಳು ಆಗಮಿಸಿದ್ದರಿಂದ ದೇವಸ್ಥಾನದ ಶಕ್ತಿ ಹೆಚ್ಚಾಗಿದೆ ಎಂದರು.
ಶೃಂಗೇರಿ ಶ್ರೀಗಳು ನಮ್ಮ ಊರಿಗೆ ಆಗಮಿಸಿದ್ದರಿಂದ ನಮ್ಮ ಊರಿನ ಸಮಸ್ಯೆಗಳು ಬಗೆಹರಿಯಲಿದೆ. ಶೃಂಗೇರಿ ಮಠದಲ್ಲಿ ಅನ್ನ, ಅಕ್ಷರ ದಾಸೋಹ ನಡೆಯುತ್ತಿದೆ. ಮಠದ ಆಸ್ಪತ್ರೆ ಚೆನ್ನಾಗಿ ನಡೆಯುತ್ತಿದೆ. ಶೃಂಗೇರಿ ಶ್ರೀಗಳಲ್ಲಿ ಶಂಕರಾಚಾರ್ಯರ ಪ್ರತಿರೂಪ ಕಾಣುತ್ತಿದ್ದೇವೆ ಎಂದರು.
ಇದಕ್ಕೂ ಮೊದಲು ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದಾಗಿ ಪೂರ್ಣ ಕುಂಭ, ವಾದ್ಯದೊಂದಿಗೆ ಸ್ವಾಗತಿಸಲಾಯಿತು. ಶ್ರೀಗಳು ರಾಮನಾಥೇಶ್ವರ ಸ್ವಾಮಿ ರುದ್ರಾಭಿಷೇಕ ನೆರವೇರಿಸಿದರು. ನಂತರ ದೇವಸ್ಥಾನದ ಶಿಖರಕ್ಕೆ ಕುಂಬಾಭಿಷೇಕ ನೆರವೇರಿಸಿದರು. ಆಶೀರ್ವಾದದ ನಂತರ ಎಲ್ಲಾ ಭಕ್ತರಿಗೂ ಶ್ರೀಗಳು ಫಲ ಮಂತ್ರಾಕ್ಷತೆ ವಿತರಿಸಿದರು.