ಕನ್ನಡ ರಾಜ್ಯೋತ್ಸವ । 50 ದಿನಗಳ ಕನ್ನಡ ಹಬ್ಬದ ಆಚರಣೆ
ಸಂಚಿಹೊನ್ನಮ್ಮ, ಮಲೆಯೂರು ದೇವಚಂದ್ರ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಹರದನಹಳ್ಳಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 16ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.12ನೇ ಶತಮಾನದ ಅಕ್ಕಮಹಾದೇವಿ ಮತ್ತಿತರ ವಚನಕಾರ್ತಿಯರನ್ನು ಬಿಟ್ಟರೆ. ಕನ್ನಡದಲ್ಲಿ ಸ್ತ್ರೀಯರು ಕೃತಿ ರಚನೆ ಮಾಡಿದ ನಿದರ್ಶನಗಳಿಲ್ಲ. 18 ಶತಮಾನದಲ್ಲಿಯೇ ಚಿಕ್ಕದೇವರಾಯರ ಅರಮನೆಯ ಪರಿಸರದಲ್ಲಿ ಹೊನ್ನಮ್ಮ, ಶೃಂಗಾರಮ್ಮ, ಚೆಲುವಾಂಬೆಯರೆಂಬ ಕವಯಿತ್ರಿಯರಿದ್ದರು. ಶೃಂಗಾರಮ್ಮ ಬರೆದ ಪದ್ಮನಿ ಕಲ್ಯಾಣ, ರಾಣಿಯಾದ ಚೆಲುವಾಂಬೆ ಬರೆದ ವರನಂದಿ ಕಲ್ಯಾಣ ವೆಂಕಟಾಚಲ ಮಹಾತ್ಮ, ಲಾಲಿಪದ ಇವುಗಳನ್ನು ಹೆಸರಿಸಬಹದು. ಇವರಲ್ಲಿ ಹೊನ್ನಮ್ಮ ಕಾವ್ಯಶಕ್ತಿಯೇ ಪ್ರಖ್ಯಾತಿ ಹೊಂದುತ್ತದೆ ಎಂದರು.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಿವಾಸಿಯಾಗಿದ್ದ ದೇವಚಂದ್ರ 1770ರಿಂದ 1841ರವಗರೆ ಬದುಕಿದ್ದರು. ಅವರು ಜೈನಕವಿಯಾಗಿದ್ದರು. ಅವರು ಪ್ರಥಮ ಗ್ರಂಥ ಪೂಜ್ಯವಾದ ಚರಿತೆಯನ್ನು 1792ರಲ್ಲಿ ರಚಿಸಿದರು. ರಾಮಕಥಾವತಾರವನ್ನು 1797ರಲ್ಲಿ ಬರೆದರು. ರಾಜಾವಳೀ ಕಥೆಯನ್ನು ಮುಮ್ಮುಡಿ ಕೃಷ್ಣರಾಜ ಒಡೆಯರ ಆಶ್ರಿತ ವೈದ್ಯ ಸೂರಿಪಂಡಿತರ ಪ್ರೋತ್ಸಾಹದಿಂದ 1838ರಲ್ಲಿ ಬರೆದು 1841ರಲ್ಲಿ ರಾಣಿ ದೇವಿರಾಂಬೆಗೆ ಒಪ್ಪಿಸಿದರು. ಮಲೆಯೂರು ದೇವಚಂದ್ರ ಹಾಗೂ ಯಳಂದೂರಿನ ಸಂಚಿಹೊನ್ನಮ್ಮ ಅವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಣೆ ಮಾಡಿಕೊಂಡು ಅವರ ಬಗ್ಗೆ ಜಿಲ್ಲೆಯ ಯುವಪೀಳಿಗೆಗೆ ತಿಳಿಸುವುದು ಒಂದು ಒಳ್ಳೆಯ ಕೆಲಸವಾಗಿದ್ದು, ನಮ್ಮ ಜಿಲ್ಲೆ, ನಮ್ಮ ಹೆಮ್ಮೆ ಎಂದರು.