ಯಳೇಸಂದ್ರ ಗ್ರಾಮದಲ್ಲಿ ₹೩೦ ಕೋಟಿ ವೆಚ್ಚದಲ್ಲಿ ಕಾರ್ಮಿಕ ಇಲಾಖೆಯ ಹಾಸ್ಟೆಲ್ ನಿರ್ಮಾಣ ಮಾಡಲು ಸರ್ಕಾರ ಅನುಮೋದಿಸಿದ್ದು ಇಷ್ಟರಲ್ಲೆ ನಿರ್ಮಾಣ ಮಾಡಲಾಗುವುದೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಯಳೇಸಂದ್ರ ಗ್ರಾಮದಲ್ಲಿ ₹೩೦ ಕೋಟಿ ವೆಚ್ಚದಲ್ಲಿ ಕಾರ್ಮಿಕ ಇಲಾಖೆಯ ಹಾಸ್ಟೆಲ್ ನಿರ್ಮಾಣ ಮಾಡಲು ಸರ್ಕಾರ ಅನುಮೋದಿಸಿದ್ದು ಇಷ್ಟರಲ್ಲೆ ನಿರ್ಮಾಣ ಮಾಡಲಾಗುವುದೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಯಳೇಸಂದ್ರ ಗ್ರಾಪಂಃಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯಳೇಸಂದ್ರ ಎಂದರೆ ನನಗೆ ಹೆಚ್ಚು ಪ್ರೀತಿ ಈ ಕಾರಣಕ್ಕೆ ಕಿತ್ತೂರುರಾಣಿ ಚೆನ್ನಮ್ಮ,ಹಾಗೂ ಮೊರಾರ್ಜಿ ದೇಸಾಯಿ ಹಾಸ್ಟೆಲ್ ನಿರ್ಮಾಣ ಮಾಡಿ ಈ ಬಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗಿದೆ. ಈಗ ಕಾರ್ಮಿಕ ಹಾಸ್ಟೆಲ್ ಜಿಲ್ಲೆಗೆ ಒಂದು ಮಂಜೂರಾಗಿತ್ತು ಅದನ್ನು ಬಂಗಾರಪೇಟೆ ಕ್ಷೇತ್ರದಲ್ಲಿ ನಿರ್ಮಾಣ ಮಾಡಲು ಇಲಾಖೆ ಸಚಿವರಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಮಂಜೂರು ಮಾಡಿದ್ದಾರೆಂದರು.ಗ್ರಾಮಗಳಲ್ಲಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಲು ಇಡೀ ತಾಲೂಕು ಆಡಳಿತವೇ ಗ್ರಾಮಕ್ಕೆ ಬಂದಿದೆ, ಇಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿಗೆ ಅವುಗಳನ್ನು ಪರಿಹರಿಸಲು ಸಭೆಗೆ ಬರಬೇಕೆಂದು ತಹಸೀಲ್ದಾರ್ ವೆಂಕಟೇಶಪ್ಪರಿಗೆ ತಿಳಿಸಿದ್ದರೂ ಅವರು ಬಾರದೆ ಉದ್ದಟತನ ಮಾಡಿದ್ದಾರೆ, ಅವರು ಹೈಟೆಕ್ ತಹಸೀಲ್ದಾರ್ ಆಗಿದ್ದಾರೆ ಬಡವರ ಸಮಸ್ಯೆಗಳಿಗೆ ಸ್ಪಂದಿಸದೆ ಎಲ್ಲಾ ಕೆಲಸ ಕಾರ್ಯಗಳಿಗೂ ಲಂಚದ ಬೇಡಿಕೆ ಇಡುವರು ಲಂಚವಿಲ್ಲದೆ ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳು ತಾಲೂಕು ಕಚೇರಿಯಲ್ಲಿ ನಡೆಯುತ್ತಿಲ್ಲವೆಂದು ಸಾರ್ವಜನಿಕರು ದೂರು ನೀಡಿದ್ದಾರೆ ಅಲ್ಲದೆ ಇವರ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಿದ್ದಾರೆ,ಈ ಹಿನ್ನೆಲೆ ನಾನು ಜಿಲ್ಲಾಧಿಕಾರಿಗೆ ದೂರು ನೀಡಿ ಶಿಸ್ತು ಕ್ರಮವಹಿಸಲು ತಿಳಿಸುವುದಾಗಿ ಹೇಳಿದರು.ಈ ಹಿಂದೆ ಗ್ರಾಮಸ್ಥರು ವಿಎಸ್‌ಎಸ್‌ಎನ್ ಸಂಘದಲ್ಲಿ ಸಾಲ ಪಡೆಯಲು ಬೂದಿಕೋಟೆ ವಿಎಸ್‌ಎಸ್‌ಎನ್‌ಗೆ ಹೋಗಬೇಕಿತ್ತು, ಈ ಅವ್ಯವಸ್ಥೆ ತಪ್ಪಿಸಲು ಗ್ರಾಮದಲ್ಲೆ ವಿಎಸ್‌ಎಸ್‌ಎನ್ ಸಂಘ ಆರಂಭಿಸಿ ಎಲ್ಲ ಜನರು ಮುಕ್ತವಾಗಿ ಸಂಘದಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡುವೆ. ಶಾಸಕನಾಗಿ ಗೆದ್ದ ನಂತರ ಗ್ರಾಮದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಆದರೂ ಸಮಸ್ಯೆಗಳನ್ನು ಆಲಿಸಲು ತಾಲೂಕು ಆಡಳಿತದೊಂದಿಗೆ ಬಂದಿರುವೆ, ಇದು ನನ್ನ ಕರ್ತವ್ಯವಾಗಿದೆ,ಜನಪ್ರತಿನಿಧಿಯಾದ ಮೇಲೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಜೆಜೆಎಂ ಯೋಜನೆಯಲ್ಲಿ ಗ್ರಾಮಗಳಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಗುತ್ತಿಗೆದಾರರು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಪಡಿಸಿದ್ದು ಯಾವುದೇ ಕಾರಣಕ್ಕೂ ಗುತ್ತಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವವರೆಗೂ ಬಿಲ್ ಪಾವತಿ ಮಾಡಬಾರದೆಂದು ಶಾಸಕರು ಎಂಜಿನಿಯರ್‌ಗೆ ತಾಕೀತು ಮಾಡಿದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಲೋಚನಮ್ಮ,ಉಪಾಧ್ಯಕ್ಷ ಆನಂದ್,ತಪಂ ಇಒ ರವಿಕುಮಾರ್,ಬಿಇಒ ಗುರುಮೂರ್ತಿ,ಮುಖಂಡರಾದ ಬಿ.ವಿ.ಕೃಷ್ಣ,ಎ.ಬಾಬು,ಮಹಾದೇವ್,ಕೆ.ವಿ.ನಾಗರಾಜ್,ಶ್ರೀನಿವಾಸರೆಡ್ಡಿ,ಸಿಡಿಪಿಒ ಮುನಿರಾಜು,ತೋಟಗಾರಿಕೆ ಅಧಿಕಾರಿ ಶಿವಾರೆಡ್ಡಿ,ಅಂಜಲಿ,ಕೃಷಿ ಅಧಿಕಾರಿ ಪ್ರತಿಭಾ,ಪಿಡಿಒ ಆನಂದ್ ಇತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.