ಧಗ್ರಾಯೋದಿಂದ ಸರ್ಕಾರಿ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕ

KannadaprabhaNewsNetwork |  
Published : Jul 09, 2025, 12:19 AM IST
60 | Kannada Prabha

ಸಾರಾಂಶ

ಜ್ಞಾನದೀಪ ಯೋಜನೆ ಮೂಲಕ ಶಿಕ್ಷಕರನ್ನು ಮುಂಬರುವ ಮಾರ್ಚ್ವರೆಗೆ ಆಯ್ದ ಶಾಲೆಗಳಿಗೆ ನಿಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಸರ್ಕಾರಿ ಶಾಲೆಗಳ ಉನ್ನತಿಗೆ ನೆರವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಗುರುತಿಸಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದಾರೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್‌ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರಿ ಶಾಲೆಗಳಿಗೆ ನೇಮಕಗೊಂಡಿರುವ ಗೌರವ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಜ್ಞಾನದೀಪ ಯೋಜನೆ ಮೂಲಕ ಶಿಕ್ಷಕರನ್ನು ಮುಂಬರುವ ಮಾರ್ಚ್ವರೆಗೆ ಆಯ್ದ ಶಾಲೆಗಳಿಗೆ ನಿಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಇನ್ನು ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಲಭ್ಯವಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳವರೂ ನೆರವಾಗಬೇಕಿದೆ ಎಂದು ತಿಳಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯವರು ಜನರ ಧಾರ್ಮಿಕ ಶ್ರದ್ಧೆಯನ್ನು ಗೌರವಿಸುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಕೆರೆ ಕಟ್ಟೆಗಳ ದುರಸ್ಥಿ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಮೂಲಕ ಹಳ್ಳಿಗಳ ಉದ್ಧಾರಕ್ಕೆ ಸಹಕಾರ ನೀಡಿದ್ದಾರೆ, ಜೊತೆಗೆ ಕುಡಿತ ಬಿಡಿಸುವ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾವಿರಾರು ಕುಟುಂಬಗಳ ಪುನಶ್ಚೇತನಕ್ಕೆ ನೆರವಾಗಿದ್ದು, ಇದರೊಂದಿಗೆ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತಿದ್ದಾರೆ. ಜ್ಞಾನದೀಪ ಯೋಜನೆ ಮೂಲಕ ಶಿಕ್ಷಕರಾಗಿ ನೇಮಕವಾಗಿರುವ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು ಸರ್ಕಾರಿ ಶಾಲಾ ಮಕ್ಕಳ ಬುದ್ಧಿ ಶಕ್ತಿ ವೃದ್ಧಿಯೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುವಂತೆ ನೋಡಿಕೊಳ್ಳುವ ಮೂಲಕ ತಮ್ಮ ವೃತ್ತಿ ಶ್ರೇಷ್ಟತೆಯನ್ನು ಕಾಪಾಡಿಕೊಳ್ಳಲು ಶಿಕ್ಷಕರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ. ಧರ್ಮರಾಜ್ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಸಲುವಾಗಿ ಎಸ್ಕೆಡಿಪಿಆರ್ಮೂಲಕ ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳಿಗೆ ಗೌರವ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಕಳೆದ ವರ್ಷ ನಂಜನಗೂಡು ತಾಲೂಕಿನ 7 ಶಾಲೆಗಳಿಗೆ ಗೌರವ ಶಿಕ್ಷಕರನ್ನು ಸಂಸ್ಥೆ ಮೂಲಕ ನೇಮಕ ಮಾಡಲಾಗಿತ್ತು, ಈ ಬಾರಿ ಶಿಕ್ಷಣ ಇಲಾಖೆಯವರು ನೀಡಿದ ಮಾಹಿತಿಯನ್ವಯ 15 ಶಾಲೆಗಳಿಗೆ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಜ್ಞಾನದೀಪ ಯೋಜನೆ ಮೂಲಕ ನೇಮಕಗೊಂಡಿರುವ ಶಿಕ್ಷಕರಿಗೆ ಮಂಜೂರಾತಿ ಪತ್ರವನ್ನು ನೀಡಲಾಯಿತು.

ಶಿಕ್ಷಣ ಇಲಾಖೆ ಸಿಆರ್ಪಿ ಚಂದ್ರಶೇಖರ್‌, ನಿವೃತ್ತ ಉಪ ತಹಸೀಲ್ದಾರ್ಎಸ್.ಎಲ್‌. ಮೂರ್ತಿ, ಜನ ಜಾಗೃತಿ ಸಮಿತಿ ಸದಸ್ಯರುಗಳಾದ ಶಿವಯ್ಯ, ಲತಾ ಮೋಹನ್‌, ಶಶಿಕಲಾ, ಶಿಕ್ಷಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

PREV