ತಣಿಗೆಬೈಲು ವಲಯದ ನಂದಿಬಟ್ಟಲು ಅರಣ್ಯದಲ್ಲಿ ಮರಗಳ ಕಡಿತಲೆ, ಅಕ್ರಮ ಸಾಗಾಟ
ಈ ಅರಣ್ಯ ಪ್ರದೇಶದಲ್ಲಿ ಹಿಂದೆ ಹೊರಗಿನಿಂದ ಬಂದು ಕಾಡಿನೊಳಗೆ ನುಗ್ಗಿ ಬೆಲೆ ಬಾಳುವ ಮರಗಳನ್ನು ಕಡಿಯುವ ದಂಧೆ ಅವ್ಯಾಹತವಾಗಿ ನಡೆದಿತ್ತು. ಇದರಲ್ಲಿ ಮರ ಕಳ್ಳ ಸಾಗಾಣಿಕೆಯ ಮಾಫಿಯಾ ಸಹ ಜೊತೆ ಗೂಡಿತ್ತು. ಗುಂಪುಗೂಡಿ ಬಂದು ಮರಗಳನ್ನು ಕಡಿದು ಸಾಗಿಸುವುದು ನಿರಂತರವಾಗಿತ್ತು. ಆಗ ವನ್ಯಜೀವಿ ವಿಭಾಗ ಹಾಗೂ ಪ್ರಾದೇಶಿಕ ವಿಭಾಗಗಳೆಂದು ಈ ಕಾಡಿನ ಪ್ರದೇಶ ಗುರುತಿಸಿರಲಿಲ್ಲ. ಅನಂತರ 1996 ರಲ್ಲಿ ಈ ಪ್ರದೇಶಗಳು ಭದ್ರಾ ಅಭಯಾರಣ್ಯದಲ್ಲಿ ಸೇರ್ಪಡೆಗೊಂಡು ಅನಂತರ ಬೇಟೆ ನಿಗ್ರಹದಳ ಅಸ್ತಿತ್ವಕ್ಕೆ ಬಂದಿದ್ದರಿಂದ ಅಕ್ರಮವಾಗಿ ಮರ ಕಡಿಯುವುದು ನಿಯಂತ್ರಣಗೊಂಡು ಪರಿಸ್ಥಿತಿ ತಹ ಬಂದಿಗೆ ಬಂತು. ಹಿಂದೆ ಅನೇಕ ಸಲ ಇಲಾಖೆಯೊಂದಿಗೆ ಮರಗಳ್ಳರ ಸಂಘರ್ಷ ನಡೆದಿದ್ದು, ಗುಂಡಿನ ಚಕಮಕಿ ನಡೆದ ಸಂದರ್ಭಗಳೂ ಇವೆ ಎಂದು ಹೇಳಿದ್ದಾರೆ. ಅಭಯಾರಣ್ಯಗಳಲ್ಲಿ ಮರಕಡಿಯುವುದಕ್ಕೆ ಪೂರ್ಣ ನಿಷಿದ್ಧವಿದೆ. ಮಳೆ-ಗಾಳಿಗೆ ಮರಗಳು ಉರುಳಿ ಬಿದ್ದರೂ ಅವುಗಳನ್ನು ಸಾಗಿಸುವ ಹಾಗಿಲ್ಲ. ಅಲ್ಲೇ ಅವು ಮಣ್ಣಾಗಬೇಕು. ಕಾನೂನು ಈ ರೀತಿ ಅತ್ಯಂತ ಕಠಿಣವಾಗಿದ್ದರೂ ಭದ್ರಾ ಅಭಯಾರಣ್ಯದ ತಣಿಗೆಬೈಲು ವಲಯದಲ್ಲಿ ಇಷ್ಟೊಂದು ಬೆಲೆಬಾಳುವ ಮರಗಳನ್ನು ಮರಗಳ್ಳರು ಬಂದುಕಡಿಯಲು ಸಾಧ್ಯವೇ ಇಲ್ಲ ಎನ್ನುವ ಸ್ಥಳೀಯರು, ಕೆಲವು ಸಿಬ್ಬಂದಿ ಮುಂದೆ ನಿಂತು ಈ ಮರಗಳನ್ನು ಕಡಿಸಿ ಸಾಗಿಸಿದ್ದಾರೆ ಎನ್ನುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿದ್ದರೂ ಆ ಅಭಯಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಹಾಗೂ ಉಪ ವಲಯ ಅರಣ್ಯಾಧಿ ಕಾರಿಗಳಿಗೆ ತಿಳಿದು ಬಂದಿಲ್ಲವೇ ಎಂಬ ಪ್ರಶ್ನೆಯೂ ಮೇಲೆದ್ದಿದೆ. ಈ ಅಧಿಕಾರಿಗಳು ಈ ಪ್ರಕರಣಕ್ಕೆ ಸಹಾಯಕರಾಗಿದ್ದರೊ ಅಥವಾ ಅವರ ಪರೋಕ್ಷ ಬೆಂಬಲವೂ ಇತ್ತೊ ಎಂಬುದು ಕೂಲಂಕಷ ತನಿಖೆಯಿಂದಷ್ಟೇ ಹೊರಬರಬೇಕಾಗಿದೆ.ಈ ಪ್ರಕರಣದಲ್ಲಿ ಕೇವಲ ಕೆಳದರ್ಜೆಯಲ್ಲಿ ಕೆಲಸ ಮಾಡುವ ನೌಕರರ ಮೇಲೆ ಕ್ರಮಕೈಗೊಂಡು ತಿಪ್ಪೆ ಸಾರಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬಾರದು. ಈ ಗಂಭೀರ ಪ್ರಕರಣ ಮೇಲಿನ ಅಧಿಕಾರಿಗಳ ಸಹಕಾರವಿಲ್ಲದೆ ನಡೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅತ್ಯಂತ ತೀವ್ರತರವಾದ ಕರ್ತವ್ಯ ಚ್ಯುತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿ ಹಾಗೂ ಇದಕ್ಕೆಕಾರಣರಾದ ಸಿಬ್ಬಂದಿಗಳ ಮೇಲೂ ತೀವ್ರ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತಕ್ಷಣ ಉದ್ಯೋಗದಿಂದ ವಜಾಗೊಳಿಸುವ ಅಥವಾ ಅವರಿಂದ ಹನನಗೊಂಡಿರುವ ತೇಗದ ಮರದ ಪೂರ್ಣ ಮೌಲ್ಯವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. 5 ಕೆಸಿಕೆಎಂ 8 ಭದ್ರಾ ಅಭಯಾರಣ್ಯದ ತಣಿಗೆಬೈಲಿನ ಗುಡ್ಡದ ಬೀರನಹಳ್ಳಿಯ ಗುರುಪುರ, ನಂದಿಬಟ್ಟಲು ಅರಣ್ಯ ಪ್ರದೇಶದಲ್ಲಿ ಕಡಿತಲೆ ಮಾಡಿರುವ ತೇಗದ ಮರ.