ಹರವಿಯಲ್ಲಿ ಮರಳು ಅಕ್ರಮ ಸಾಗಾಟಚಂದ್ರು ಕೊಂಚಿಗೇರಿ
ತಾಲೂಕಿನ ಹರವಿ ಸೇರಿದಂತೆ ನದಿ ತೀರದ ಪ್ರದೇಶಗಳಲ್ಲಿ ಮರಳು ಅಕ್ರಮ ಸಾಗಾಟ ಎಗ್ಗಿಲ್ಲದೇ ಸಾಗಿದೆ. ಹತ್ತಾರು ಅಕ್ರಮಗಳನ್ನು ತಡೆಗಟ್ಟಲಾಗದೇ ಜಿಲ್ಲಾಡಳಿತ ನಿತ್ರಾಣವಾದಂತಿದೆ.
ಹೌದು, ವಿಜಯನಗರ ಜಿಲ್ಲೆ ವ್ಯಾಪ್ತಿಯ ಹೂವಿನಹಡಗಲಿ ತಾಲೂಕಿನಲ್ಲಿ ತುಂಗಭದ್ರಾ ನದಿ ಸರಿ ಸುಮಾರು, 80 ರಿಂದ 90 ಕಿಮೀ ಉದ್ದ ಸುತ್ತುವರಿದಿದೆ. ಎಲ್ಲ ಕಡೆಗೂ ಮರಳಿನ ನಿಕ್ಷೇಪ ಬಯಲಿಗೆ ಹರಡಿಕೊಂಡಿದೆ. ಆದರೆ ರಕ್ಷಣೆ ಮಾಡುವವರಿಲ್ಲದೇ, ನಾಡಿನ ಸಂಪತ್ತು ಹಾಡು ಹಗಲೇ ಲೂಟಿಯಾಗುತ್ತಿದೆ.ತಾಲೂಕಿನ ಕೊನೆ ಭಾಗ ಹರವಿ, ಬನ್ನಿಮಟ್ಟಿ, ಮೈಲಾರ ಮತ್ತು ಹೊನ್ನೂರು, ನವಲಿ, ಸೋವೇನಹಳ್ಳಿ, ಹಕ್ಕಂಡಿ ಗ್ರಾಮದಲ್ಲಿ ನಿತ್ಯ ಮರಳು ಅಕ್ರಮ ದಂಧೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಣ್ಮುಂಚಿಕೊಂಡಿದೆ. ಹಗಲು ಹೊತ್ತಿನಲ್ಲಿ ಹರವಿ-ಹರನಗಿರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಸೇತುವೆ ತಳ ಭಾಗದಲ್ಲೇ, ಮರಳು ಅಕ್ರಮ ದಂಧೆ ನಡೆಯುತ್ತಿದೆ. ಸೇತುವೆಯಿಂದ 1 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ತೆರನಾದ ಗಣಿಗಾರಿಕೆ ಮಾಡುವಂತಿಲ್ಲ, ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮವನ್ನು ಗಾಳಿ ತೂರಿ ಅಕ್ರಮ ದಂಧೆ ನಡೆಯುತ್ತಿದ್ದರೂ, ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ನಿತ್ಯ ಮರಳು ಲೂಟಿಯಿಂದ ಸರ್ಕಾರಕ್ಕೆ ಕೋಟ್ಯಾಂತರ ರು. ರಾಜಸ್ವಧನ ನಷ್ಟವಾಗುತ್ತಿದ್ದರೂ, ಯಾರೂ ಗಮನಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಪರಾಧ ಈ ಕುರಿತು ಸರ್ಕಾರಿ ಕಾನೂನು ತರಲಾಗಿದೆ. ಆದರೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಫಡಿತರ ಫಲಾನುಭವಿಗಳು ಅಕ್ಕಿ ತೂಕ ಮಾಡಿಕೊಂಡು, ನೇರವಾಗಿಯೇ ಅಕ್ರಮವಾಗಿ ಅಕ್ಕಿ ಖರೀದಿ ಮಾಡುವ ವ್ಯಕ್ತಿಗಳಿಗೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪಟ್ಟಣದ ಕೆಲ ಪ್ರಭಾವಿಗಳು ಅಕ್ಕಿ ಖರೀದಿ ಮಾಡುವವರಿಗೂ ಹಣ ಕೊಟ್ಟು ಕಳಿಸುತ್ತಾರೆ, ಅವರು ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಹೋಗಿ ಬಡ ಜನರಿಂದ ₹12ರಿಂದ ₹13 ಗೆ ಕೆಜಿಯಂತೆ ಖರೀದಿ ಮಾಡುತ್ತಾರೆ. ಜನರಿಂದ ಅಕ್ರಮವಾಗಿ ಖರೀದಿ ಮಾಡಿದ ಅಕ್ಕಿಯನ್ನು ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಾರೆ. ಅಲ್ಲಿಂದ ರಾತ್ರಿ ಸಮಯದಲ್ಲಿ ಲಾರಿಗಳ ಮೂಲಕ ಸಾಗಾಟ ಮಾಡುತ್ತಾರೆಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಅಕ್ರಮಗಳ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗಲು ಹಿಂದೇಟು ಹಾಕುವ ಹಿಂದೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.