ಶಿವಕುಮಾರ ಕುಷ್ಟಗಿ
ನದಿಯ ದಡದಲ್ಲಿರುವ ರೈತರ ಪಟ್ಟಾ ಜಮೀನುಗಳಲ್ಲಿ(ಖಾಸಗಿ ಭೂಮಿ) ಮರಳು ತೆಗೆಯಲು ಅನುಮತಿ ಪಡೆದವರು ಅಥವಾ ಅದರ ನೆಪದಲ್ಲಿ ಮರಳು ಬಾಚುತ್ತಿರುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳನ್ನು ಕಡೆಗಣಿಸಿದ್ದಾರೆ. ಪಟ್ಟಾ ಲ್ಯಾಂಡ್‌ನಲ್ಲಿ ಮರಳು ತೆಗೆಯುವಾಗ ಯಾವುದೇ ಕಾರಣಕ್ಕೂ ಯಾಂತ್ರೀಕೃತ ಬೋಟ್‌ಗಳನ್ನು ಬಳಸುವಂತಿಲ್ಲ ಎಂಬ ನಿಯಮವಿದೆ. ಆದರೆ, ಇಲ್ಲಿ ದೊಡ್ಡ ದೊಡ್ಡ ಬೋಟ್‌ಗಳನ್ನು ಇಳಿಸಿ ಮರಳು ಎತ್ತಲಾಗುತ್ತಿದೆ.
ಅಧಿಕಾರಿಗಳು ಶಾಮೀಲು ಸಾಧ್ಯತೆ: ಈ ಅಕ್ರಮದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳೀಯ ಮಟ್ಟದಲ್ಲಿ ಅಕ್ರಮ ನಡೆಯುತ್ತಿರುವುದು ಕಂದಾಯ ನಿರೀಕ್ಷಕರಿಗೆ ಮತ್ತು ರೋಣ ಹಾಗೂ ನರಗುಂದ ತಹಸೀಲ್ದಾರರಿಗೆ ಸ್ಪಷ್ಟವಾಗಿ ತಿಳಿದಿದ್ದರೂ, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಧೈರ್ಯ ತೋರುತ್ತಿಲ್ಲ. ಮರಳು ನಿಕ್ಷೇಪಗಳ ರಕ್ಷಣೆ ಮಾಡಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಣುಮುಚ್ಚಿ ಕುಳಿತಿದ್ದು, ಈ ಎಲ್ಲ ಅಧಿಕಾರಿಗಳು ಮರಳು ಮಾಫಿಯಾದ ನಡುವೆ ಆಂತರಿಕ ಒಪ್ಪಂದ ನಡೆದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.ಮರಳು ನೀತಿ 2020: ಕರ್ನಾಟಕ ಮರಳು ನೀತಿ 2020ರ ಪ್ರಕಾರ, ಪಟ್ಟಾ ಜಮೀನುಗಳಲ್ಲಿ ಮರಳು ತೆಗೆಯಲು ಅನುಮತಿ ಇದ್ದರೂ ಮರಳು ತೆಗೆಯಲು ಯಾಂತ್ರೀಕೃತ ಬೋಟ್‌ಗಳು ಅಥವಾ ಭಾರೀ ಯಂತ್ರಗಳನ್ನು ಜೆಸಿಬಿ, ಹಿಟಾಚಿ ಬಳಸುವಂತಿಲ್ಲ. ಈ ನಿಯಮದ ಉಲ್ಲಂಘನೆಯಾದರೆ ಆ ವ್ಯಕ್ತಿಯ ಮರಳು ತೆಗೆಯುವ ಪರವಾನಗಿಯನ್ನು(ಪರ್ಮಿಟ್) ತಕ್ಷಣವೇ ರದ್ದುಪಡಿಸಬಹುದು ಮತ್ತು ದಂಡ ವಿಧಿಸಬಹುದು. ಗಣಿ ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957(ಎಂಎಂಡಿಆರ್ ಆ್ಯಕ್ಟ್) ಇದು ಅಕ್ರಮ ಗಣಿಗಾರಿಕೆಯನ್ನು ತಡೆಯುವ ಪ್ರಮುಖ ಕೇಂದ್ರ ಕಾಯ್ದೆಯಾಗಿದೆ.
ಉಲ್ಲಂಘಿಸಿದವರಿಗೆ ಶಿಕ್ಷೆ ಏನು?: ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದ್ದು, ತಪ್ಪು ಸಾಬೀತಾದಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಪ್ರತಿ ಹೆಕ್ಟೇರ್‌ಗೆ ₹5 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪರಿಸರ ಸಂರಕ್ಷಣಾ ಕಾಯ್ದೆ, 1986(ಎನ್ವಿರಾಂನ್ಮೆಂಟ್ ಪ್ರೋಟೆಕ್ಷನ್ ಆ್ಯಕ್ಟ್) ಅಡಿಯಲ್ಲಿ ನದಿ ಪಾತ್ರದಲ್ಲಿ ಬೋಟ್ ಬಳಸಿ ಮರಳು ಎತ್ತುವುದರಿಂದ ನದಿಯ ಪರಿಸರ ವ್ಯವಸ್ಥೆ ಹಾಳಾಗುತ್ತದೆ. ನದಿ ತಳದ ಜೀವಸಂಕುಲ ನಾಶವಾಗುವುದು ಮತ್ತು ನೀರಿನ ಹರಿವಿನ ದಿಕ್ಕು ಬದಲಾಗುವುದು ಪರಿಸರ ವಿರೋಧಿ ಕೃತ್ಯವಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಪರಿಸರ ಮಾಲಿನ್ಯ ಮತ್ತು ಹಾನಿ ಉಂಟುಮಾಡಿದಕ್ಕಾಗಿ ಪ್ರಕರಣ ದಾಖಲಿಸಬಹುದು.ಸರ್ಕಾರಿ ಆಸ್ತಿಯ ಕಳ್ಳತನ
ಇನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಂತೆ ಪಟ್ಟಾ ಜಮೀನು ಕೇವಲ ಕೃಷಿ ಉದ್ದೇಶಕ್ಕಾಗಿ ಇರುತ್ತದೆ. ಅದನ್ನು ವಾಣಿಜ್ಯ ಉದ್ದೇಶದ ಅಕ್ರಮ ಗಣಿಗಾರಿಕೆಗೆ ಬಳಸುವುದು ಭೂ ಬಳಕೆಯ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ನಿಯಮದಲ್ಲಿಯೂ ಪ್ರಕರಣ ದಾಖಲಿಸಬಹುದು.
ಕರಣ ದಾಖಲಿಸಬಹುದು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಾವಳಿಗಳ ಪ್ರಕಾರ ಹಾಗೂ ಕರ್ನಾಟಕ ಮರಳು ನೀತಿಯ ಅಡಿಯಲ್ಲಿ ಪಟ್ಟಾ ಜಮೀನುಗಳಲ್ಲಿ ಬೋಟ್ ಬಳಸುವುದು ಕಡ್ಡಾಯವಾಗಿ ನಿಷೇಧಿಸಲ್ಪಟ್ಟಿದೆ. ಇದು ಎಂಎಂಡಿಆರ್ ಆ್ಯಕ್ಟ್ 1957ರ ಸೆಕ್ಷನ್ 21ರ ಅಡಿಯಲ್ಲಿ ಅಕ್ರಮ ಗಣಿಗಾರಿಕೆಯಾಗಿರುತ್ತದೆ. ಅಧಿಕಾರಿಗಳು ತಿಳಿದೂ ಸುಮ್ಮನಿರುವುದು ಕರ್ತವ್ಯ ಲೋಪ ಎಂದು ಪರಿಗಣಿಸಿ ಅಧಿಕಾರಿಗಳ ಮೇಲೆಯೂ ಪ್ರಕರಣ ದಾಖಲಿಸಬಹುದಾಗಿದೆ ಎಂದು ಹಿರಿಯ ನ್ಯಾಯವಾದಿ ಮಂಜುನಾಥ ಮತ್ತೂರ ತಿಳಿಸಿದರು.