ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಚೊಚ್ಚಲ ಬಜೆಟ್ ಸಭೆಯಲ್ಲಿ ಶಾಸಕ ಉದಯ್ ಅಧ್ಯಕ್ಷತೆಯಲ್ಲಿ ಡೀಸಿ ಡಾ.ಕುಮಾರ್ ಅವರು ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರೀಕ್ಷಿತ ಅನುದಾನ, ಸಂಪನ್ಮೂಲ ತೆರಿಗೆ ಮತ್ತು ಯೋಜನೇತರ ತೆರಿಗೆ ಆದಾಯಗಳನ್ನೊಳಗೊಂಡ ₹1,15,70,024 ಬಜೆಟ್ ಮಂಡಿಸಿದರು.
ಪ್ರಸಕ್ತ ಸಾಲಿನ ನಗರಸಭೆಯಲ್ಲಿ ಸ್ವಂತ ಸಂಪನ್ಮೂಲಗಳಾದ ತೆರಿಗೆ ಮತ್ತು ತೆರಿಗೆಯೇತರ ಒಟ್ಟು ₹15.88 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು ಮತ್ತು ಕರಗಳ ಬಾಬ್ತು ₹1.69 ಕೋಟಿ , ರಾಜ್ಯ ಸರ್ಕಾರದಿಂದ ₹75.50 ಕೋಟಿ, ಕೇಂದ್ರ ಸರ್ಕಾರದಿಂದ ₹18.95 ಕೋಟಿ ಸೇರಿ ಒಟ್ಟು ₹120.66 ಕೋಟಿ ಆಗಿದೆ.ಮುಂದುವರಿದ ಕಾಮಗಾರಿಗಳು ಸೇರಿ ಒಟ್ಟು 2026-27ನೇ ಸಾಲಿಗೆ ನೌಕರರ ವೇತನ, ನಿರ್ವಹಣಾ ವೆಚ್ಚ, ಬಂಡವಾಳ ಕಾಮಗಾರಿ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಕರ ಮತ್ತು ಶಾಸನ ಬದ್ಧ ತೆರಿಗೆಗಳು ಹಾಗೂ ನೌಕರರ ವೇತನದಲ್ಲಿ ಕಟಾವಣೆಗಳು ಸೇರಿದಂತೆ ಒಟ್ಟು ₹119,50,33,000 ಅಂದಾಜು ವೆಚ್ಚ ಹಾಗೂ ₹1,15,70,024 ಉಳಿತಾಯ ಬಜೆಟ್ ಅನ್ನು ಡೀಸಿ ಮಂಡಿಸಿದರು.
ನಗರಸಭೆಯ ಸ್ವಂತ ಸಂಪನ್ಮೂಲ ಮತ್ತು ತೆರಿಗೆ ಆದಾಯಗಳಿಂದ 1 ಸಾವಿರ ಲಕ್ಷ ಸಂಗ್ರಹ ಗುರಿ ಹೊಂದಲಾಗಿದೆ. ತೆರಿಗೆಯೇತರ ಮೂಲಗಳಾದ ನೀರು ಬಳಕೆದಾರರ ಶುಲ್ಕ, ಒಳಚರಂಡಿ ಸಂಪರ್ಕ, ಬಳಕೆದಾರರ ಶುಲ್ಕ ಸಂಗ್ರಹಣೆ, ಉದ್ದಿಮೆ ಪರವಾನಗಿ, ಜಾಹೀರಾತು ಮತ್ತು ಮೊಬೈಲ್ ಟವರ್ ನೋಂದಣಿ ಶುಲ್ಕ, ಅಂಗಡಿ ಮಳಿಗೆ ಬಾಡಿಗೆ ದಂಡ, ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಖಾತೆ ಬದಲಾವಣೆ, ಟ್ಯಾಕ್ಸಿ, ಖಾಸಗಿ ಬಸ್ಸು ನಿಲ್ದಾಣ, ಸಂತೆ ನೆಲಬಾಡಿಗೆ, ಕಸಾಯಿ ಖಾನೆ ಶುಲ್ಕಗಳಿಂದ ತೆರಿಗೆ ಆದಾಯವನ್ನು ನಿರೀಕ್ಷಿಸಲಾಗಿದೆ.
ಸೋಮನಹಳ್ಳಿ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಕೆ. ಕೋಡಿಹಳ್ಳಿ, ಚಾಮನಹಳ್ಳಿ ಹಾಗೂ ಆಶ್ರಯ ಬಡಾವಣೆ, ದೇಶಹಳ್ಳಿ ಗ್ರಾಮ, ಚಾಪುರದೊಡ್ಡಿ, ಗೆಜ್ಜಲಗೆರೆ ಗ್ರಾಮ, ಗೊರವನಹಳ್ಳಿ, ಮರಕಾಡದೊಡ್ಡಿ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಕಲ್ಪಿಸಲು ಮತ್ತು ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಗಾಗಿ ನಗರಸಭೆ ಅನುದಾನದಲ್ಲಿ ₹80 ಲಕ್ಷ ಗಳನ್ನು ಪ್ರಸ್ತುತ ಬಳಸಲಾಗುತ್ತಿದ್ದು, 2026-27ನೇ ಸಾಲಿಗೆ ₹150 ಲಕ್ಷ ಗಳನ್ನು ಮೀಸಲಿರಿಸಲಾಗಿದೆ.ಮದ್ದೂರು ನಗರಸಭೆ ವ್ಯಾಪ್ತಿಯ ಟಿ.ಪಿ. ವೃತ್ತದಿಂದ ಕೊಲ್ಲಿ ವೃತ್ತದವರೆಗೆ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಸ್ತೆ ನಿರ್ಮಾಣ ಮತ್ತು ಭೂಸ್ವಾಧೀನ ವೆಚ್ಚಗಳೊಂದಿಗೆ ಲೋಕೋಪಯೋಗಿ ಇಲಾಖೆಯಿಂದ ₹14.859 ಲಕ್ಷ ಅಂದಾಜು ಮೊತ್ತ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು.
ಈ ವೇಳೆ ಪೌರಾಯುಕ್ತೆ ರಾಧಿಕಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಸೇರಿದಂತೆ ನಗರಸಭೆ ಅಧಿಕಾರಿ ವರ್ಗ ಸಭೆಯಲ್ಲಿ ಹಾಜರಿದ್ದರು.