ಕೈಕಮಾಂಡ್‌ ಹೇಳದ್ರೆ 2 ಬಜೆಟ್‌ ನಂದೇ : ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 26, 2026, 02:00 AM ISTUpdated : Mar 26, 2026, 12:12 PM IST
Siddaramaiah

ಸಾರಾಂಶ

ಹೈಕಮಾಂಡ್ ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್‌ ಕೂಡ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಪುನರುಚ್ಚರಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್‌, ‘ಮುಂದಿನ ಎರಡು ಬಜೆಟ್‌ ಕೂಡ ನೀವೇ ಮಂಡಿಸಬೇಕಿದೆ’ ಎಂದು ಕಾಲೆಳೆದರು.

  ವಿಧಾನಸಭೆ :  ಹೈಕಮಾಂಡ್ ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್‌ ಕೂಡ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಪುನರುಚ್ಚರಿಸಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸುವಾಗ ಎದ್ದು ನಿಂತ ಪ್ರತಿಪಕ್ಷ ನಾಯಕ ಆರ್.ಅಶೋಕ್‌, ‘ಮುಂದಿನ ಎರಡು ಬಜೆಟ್‌ ಕೂಡ ನೀವೇ ಮಂಡಿಸಬೇಕಿದೆ’ ಎಂದು ಕಾಲೆಳೆದರು.

ಆಗ ಸಿದ್ದರಾಮಯ್ಯ ಅವರು, ‘ನಮ್ಮ ಸರ್ಕಾರವೇ ಇನ್ನೂ ಎರಡು ಬಜೆಟ್‌ ಮಂಡಿಸುತ್ತದೆ. 2028ರ ಬಳಿಕವೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ’ ಎಂದು ಹೇಳಿದರು.

ಅಶೋಕ್‌ ಅವರು, ‘ನಿಮ್ಮ ಸರ್ಕಾರ ಮಂಡಿಸುವುದು ಬೇರೆ. ನೀವು ಮಂಡಿಸುತ್ತೀರಾ? ಧೈರ್ಯವಾಗಿ ಹೇಳಿ’ ಎಂದರು.

ನಿಮ್ಮ ಮುಂದೆ ಯಾವ ಹೈಕಮಾಂಡ್‌ ಸರ್!:

ಬಿಜೆಪಿಯ ಸುನಿಲ್‌ ಕುಮಾರ್‌, ‘ರಾಜ್ಯದ ಗಟ್ಟಿ ನಾಯಕ ಸರ್‌ ನೀವು. 17 ಬಜೆಟ್‌ ಮಂಡಿಸಿದ್ದೀರಿ. ದೇವೇಗೌಡರು ಹೈಕಮಾಂಡ್‌ ಆಗಿದ್ದಾಗಲೇ ಅವರ ಮಾತು ಕೇಳಿಲ್ಲ ನೀವು. ನಿಮ್ಮ ಮುಂದೆ ಯಾವ ಹೈಕಮಾಂಡ್ ಸರ್? ಮುಂದಿನ ಎರಡು ಬಜೆಟ್‌ ನಾನೇ ಮಂಡಿಸುತ್ತೇನೆ ಎಂದು ಹೇಳಿ’ ಎಂದು ಸವಾಲು ಹಾಕಿದರು.

ಮೋದಿ ಮಾತು ಕೇಳಲ್ಲ ಎಂದು ಹೇಳಿ-ತಿರುಗೇಟು:

ಆಗ ಸಿದ್ದರಾಮಯ್ಯ, ‘ನಿಮ್ಮ ಕರಾವಳಿಯವರು ಎಲ್ಲರೂ ಹೀಗೆ ಅನಿಸುತ್ತೆ ಸ್ವಲ್ಪ ಬುದ್ದಿ ಜಾಸ್ತಿ. ನೀವು ಎಷ್ಟು ಜಾಕ್‌ ಹಾಕಿದರೂ ನಾನು ಮರುಳಾಗಲ್ಲ. ನಿಮಗೆ ಧಮ್ ಇದ್ದರೆ ನರೇಂದ್ರ ಮೋದಿ ಮಾತನ್ನು ಕೇಳಲ್ಲ ಎಂದು ಹೇಳಿ. ನಾನೇ ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಆರ್‌.ಅಶೋಕ್‌ ಹೇಳಲಿ’ ಎಂದು ತಿರುಗೇಟು ನೀಡಿದರು.

ಸುನಿಲ್ ಕುಮಾರ್, ‘ನಾನು ಮೋದಿ ಮತ್ತು ಹೈಕಮಾಂಡ್‌ ಭಕ್ತ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ನಾನು ಹೈಕಮಾಂಡ್ ಮಾತನ್ನೇ ಕೇಳುವುದು. ಆದರೆ, ‌ನೀವು ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜೆಡಿಎಸ್‌ನಲ್ಲಿ ನಿಮ್ಮತನವನ್ನೇ ಉಳಿಸಿಕೊಂಡಿದ್ದೀರಿ. ಈಗಲೂ ನಿಮ್ಮತನವನ್ನು 2026 ರಿಂದ 2028 ರವರೆಗೆ ಉಳಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಹೈಕಮಾಂಡ್ ಮಾತು ಕೇಳುವೆ-ಸಿಎಂ:

ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹೈಕಮಾಂಡ್‌ ಮಾತನ್ನು ಎಲ್ಲರೂ ಕೇಳಲೇಬೇಕು. ನಾನು ಯಾವಾಗಲೂ ಹೈಕಮಾಂಡ್ ಮಾತು ಕೇಳಲ್ಲ ಎಂದು ಹೇಳೇ ಇಲ್ಲ. ಹೈಕಮಾಂಡ್ ಮಾತನ್ನು ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ. ಹೈಕಮಾಂಡ್‌ ಅವಕಾಶ ನೀಡಿದರೆ ಮುಂದಿನ ಎರಡೂ ಬಜೆಟ್‌ ಕೂಡ ಮಂಡಿಸುತ್ತೇನೆ’ ಎಂದರು.

ಕಾಲವೇ ಉತ್ತರ ಕೊಡಲಿದೆ: ಡಿಕೆಶಿ

ಬಿಜೆಪಿಯವರಿಗೆ ನನ್ನ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರುವುದಿಲ್ಲ. ನಾನು ನಿದ್ದೆಗೆಟ್ಟಿದ್ದಕ್ಕೆ ನಮ್ಮ ಪಕ್ಷ ಸರ್ಕಾರ ರಚಿಸಿದೆ. ಮುಂದೆ ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ನುಡಿದರು.

ಬಜೆಟ್‌ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಅವರು, ಅಶೋಕ್‌ ನಿನಗೆ ರಾಜಕೀಯವಾಗಿ ನೀರು ಕುಡಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರನ್ನು ಕೆಣಕುತ್ತಿದ್ದರು. ಆಗ ಆರ್‌.ಅಶೋಕ್‌, ನೀವು ಪಕ್ಕದಲ್ಲಿರುವವರಿಗೆ (ಡಿ.ಕೆ. ಶಿವಕುಮಾರ್‌) ನಿದ್ದೆಗೆಡಿಸಿದ್ದೀರಿ. ಪಾಪ ಅವರು ದೆಹಲಿಯಿಂದ ಬೆಂಗಳೂರು, ಬೆಂಗಳೂರಿನಿಂದ ದೆಹಲಿಗೆ ಅಲೆಯುತ್ತಿದ್ದಾರೆ. ಅವರಿಗೆ ನಿದ್ದೆ ಇಲ್ಲದಂತಾಗಿದೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಪಕ್ಕದಲ್ಲೇ ಕೂತಿದ್ದ ಶಿವಕುಮಾರ್ ಕಡೆ ನೋಡುತ್ತಾ, ‘ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಹೇಳಿದ್ದೇವೆ’ ಎಂದು ಹೇಳಿದರು.

ಆಗ ಡಿ.ಕೆ. ಶಿವಕುಮಾರ್‌, ‘ಅವರಿಗೆ ನಮ್ಮ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರಲ್ಲ’ ಎಂದಾಗ ಆರ್‌. ಅಶೋಕ್‌ ಅವರು, ‘ನಿಮಗೆ ನಿದ್ದೆ ಇಲ್ಲದಂತೆ ಆಗಿದೆಯಲ್ಲಾ’ ಅದರ ಬಗ್ಗೆ ಹೇಳುತ್ತಿದ್ದೇವೆ. ನೀವು ಮುಖ್ಯಮಂತ್ರಿ ಆಗುವುದು ಯಾವಾಗ ಅದನ್ನು ಹೇಳಿ ಎಂದು ಕೆಣಕಿದರು.

ಇದಕ್ಕೆ ಡಿ.ಕೆ.ಶಿವಕುಮಾರ್‌, ‘ನಾನು ನಿದ್ದೆಗೆಟ್ಟಿದ್ದಕ್ಕಾಗಿಯೇ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!