ಬೆಳ್ತಂಗಡಿ: ಕರಾವಳಿಯಲ್ಲಿ ಮರಳಿನ ಅಭಾವದಿಂದ ಜನರ ಮನೆ ನಿರ್ಮಾಣದ ಕನಸು ಕುಸಿಯುತ್ತಿದೆ. ಹೀಗಾಗಿ ಮರಳಿನ ಸರಬರಾಜು ತಕ್ಷಣ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜ ವಿಧಾನಸಭೆಯಲ್ಲಿ ಶುಕ್ರವಾರ ಒತ್ತಾಯಿಸಿದ್ದಾರೆ.
ಸರ್ಕಾರವು 2019ರಲ್ಲಿ ಪ್ರತಿ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವವರಿಗೆ ಸರಳ ವಿಧಾನದಲ್ಲಿ ಸ್ಥಳೀಯ ಮೂಲಗಳಿಂದ ಮರಳು ತೆಗೆಯಲು ಪರವಾನಿಗೆ ನೀಡುವ ಆದೇಶ ಜಾರಿಗೆ ತಂದಿದ್ದರೂ ಸಹ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಆದೇಶ ಸಮರ್ಪಕವಾಗಿ ಜಾರಿಗೆ ಬರದೇ ಇರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದರು.
ಇದಕ್ಕುತ್ತರಿಸಿದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 11 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಮರಳು ತೆಗೆದು ವಿಲೇವಾರಿ ಮಾಡಲು ಕಾರ್ಯಾದೇಶ ನೀಡಲಾಗಿದ್ದರೂ ಆ ಪ್ರದೇಶಗಳಲ್ಲಿ ಮರಳು ವಿಲೇವಾರಿ ಮಾಡುವ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ ಎಂಬುದು ವಿಷಾದನೀಯ ಎಂದರು.ಮರಳಿನ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಮರಳಿನ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಒಂದು ಲೋಡ್ ಮರಳಿಗೆ ಸುಮಾರು ₹20,000 ರಿಂದ ₹21,000 ವರೆಗೆ ದರವಿದೆ. ಹೀಗಾಗಿ ಸಾಮಾನ್ಯ ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳುವುದು ಅತ್ಯಂತ ಕಷ್ಟಕರವಾಗಿದೆ. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಕೆಂಪುಕಲ್ಲಿನ ದರವೂ ಗಣನೀಯವಾಗಿ ಹೆಚ್ಚಳಗೊಂಡಿದ್ದು, ಕೆಲವು ಕಡೆಗಳಲ್ಲಿ ಅದರ ದರವು ₹60,000 ರಿಂದ ₹65,000 ವರೆಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಜನರು ಮನೆ ನಿರ್ಮಾಣ ಮಾಡುವುದು ಅಥವಾ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳುವುದು ದುಸ್ತರವಾಗಿದೆ. ಇನ್ನೊಂದೆಡೆ ಪರಿಸರ ಸಂಬಂಧಿತ ನಿಯಮಗಳು ಹಾಗೂ ಅನುಮತಿ ಪ್ರಕ್ರಿಯೆಗಳ ಅಡಚಣೆಗಳು, ಮತ್ತೊಂದು ಕಡೆ ಮರಳಿನ ಕೊರತೆ – ಈ ಎರಡರ ನಡುವೆ ಸಿಲುಕಿರುವ ಸಾಮಾನ್ಯ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಅಧಿವೇಶನ ಮುಕ್ತಾಯದೊಳಗೆ ಸಭೆ
ಇದೇ ವೇಳೆ ಸಭಾಪತಿಗಳು ಮಧ್ಯಪ್ರವೇಶಿಸಿ ಅಧಿವೇಶನ ಮುಕ್ತಾಯವಾಗುವುದರೊಳಗಾಗಿ ಉಭಯ ಜಿಲ್ಲೆಗಳ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಕರೆದು ಅಂತಿಮ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಸೂಚನೆ ನೀಡಿದರು.