ಸೋಮರಡ್ಡಿ ಅಳವಂಡಿ ಕೊಪ್ಪಳ
ರಾತ್ರಿ 11 ಗಂಟೆಯಾಗುತ್ತಿದ್ದಂತೆ ಅಕ್ರಮ ಮರಳು ದಂಧೆ ಪ್ರಾರಂಭವಾಗುತ್ತದೆ. 50-60 ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನು ಹೇರಿಕೊಂಡು ಆಕ್ರಮವಾಗಿ ಸಾಗಿಸಲಾಗುತ್ತದೆ. ಟ್ರ್ಯಾಕ್ಟರ್‌ಗಳಿಗೆ ಅನುಮತಿ ಇಲ್ಲದೇ ಸಾಗಿಸಲಾಗುತ್ತದೆ. ಇದರಿಂದ ತುಂಗಭದ್ರಾ ನದಿ ಬರಿದಾಗುತ್ತಿದ್ದು, ರೈತರ ಪಂಪಸೆಟ್ ಗಳಿಗೆ ನೀರಿಲ್ಲದಂತಾಗುತ್ತಿರುವುದು ಒಂದಡೆಯಾದರೆ ಮತ್ತೊಂದೆಡೆ ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಕೆಗೂ ಸಮಸ್ಯೆಯಾಗುತ್ತಿದೆ.
ರೈತರ ಪಂಪಸೆಟ್ ಪೈಪ್ ಮತ್ತು ವೈಯರ್‌ಗಳನ್ನು ಕಿತ್ತು ಹಾಕಿ ಜೆಸಿಬಿ ಮೂಲಕ ಮರಳನ್ನು ತುಂಬಿಕೊಂಡು ಹೋಗಲಾಗುತ್ತದೆ. ಇಡೀ ನದಿಯ ಒಡಲು ಗುಂಡಿಗಳೇ ತುಂಬಿ ಕೊಂಡಿವೆ. ಮರಳು ಖಾಲಿಯಾಗುತ್ತಿದ್ದು, ನದಿಯುದ್ದಕ್ಕೂ ನೀರಿನ ಅಭಾವ ಎದುರಾಗುತ್ತಿದೆ.ಅಂತರ್ಜಲ ಕುಸಿತ:ನದಿಯುದ್ದಕ್ಕೂ ಆಕ್ರಮ ಮರಳು ದಂಧೆ ನಡೆಯುತ್ತಿರುವುದು ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಕುಸಿಯಲು ಕಾರಣವಾಗಿದೆ. ಇದರಿಂದ ಸುತ್ತಮುತ್ತಲಿನ ರೈತರು ತೊಂದರೆ ಅನುಭವಿಸುವಂತಾಗಿದೆ. ನದಿ ಸಂರಕ್ಷಣೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಮರಳು ದಂಧೆ ನಿಯಂತ್ರಣ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಂಬಂಧಪಟ್ಟ ಠಾಣೆಯ ಪಿಐಗೆ ಕರೆ ಮಾಡಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರು ತಮ್ಮ ಪೋನ್‌ನಲ್ಲಿ ದೂರು ನೀಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಯಾವುದೇ ಕ್ರಮವಾಗದ ಕುರಿತೂ ಸಹ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇಷ್ಟಾದರೂ ಪೊಲೀಸರು ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಇದ್ದಾರೆ.
ದಂಧೆ ಅವ್ಯಾಹತ: ಮರಳು ದಂಧೆ ಈ ಹಿಂದೆ ನಿಯಂತ್ರಣದಲ್ಲಿತ್ತು, ದೂರು ನೀಡಿದರೆ ಕ್ರಮವಾಗುತ್ತಿತ್ತು. ಆದರೆ, ಸರ್ಕಾರ ಬದಲಾದ ಮೇಲೆ ಮರಳು ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಮರಳು ದಂಧೆ ಮಿತಿ ಮೀರಿದ್ದು, ಇದರ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ, ನಿಯಂತ್ರಣ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೋರಾಟಗಾರ ಶರಣಪ್ಪ ಜಡಿ ಹೇಳಿದರು.