ಶೀಘ್ರವೇ ಶ್ರೀಗಂಧದ ನೀತಿಯ ಸರಳೀಕರಣ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Jun 05, 2025, 01:31 AM IST
9 | Kannada Prabha

ಸಾರಾಂಶ

ಕೆ.ಎಸ್.ಡಿ.ಎಲ್. ಶ್ರೀಗಂಧದ ಎಣ್ಣೆಯ ಅಗತ್ಯ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ರೈತರು ಕೂಡ ಶ್ರೀಗಂಧ ಬೆಳೆಯುತ್ತಿದ್ದಾರೆ. ಇವರಿಗೆ ಶ್ರೀಗಂಧ ಕಟಾವು ಮಾಡಲು, ಸಾಗಾಟ ಮಾಡಲು ಅನುವಾಗುವಂತೆ ಶೀಘ್ರವೇ ಶ್ರೀಗಂಧದ ನೀತಿ ಸರಳೀಕರಣ ಮಾಡಿ ಅಧಿಸೂಚನೆ ಹೊರಡಿಸಲಾಗುವುದು. ಅರಣ್ಯ ಇಲಾಖೆಯ ವತಿಯಿಂದ ನೆಡುತೋಪಿನಲ್ಲಿ ಶ್ರೀಗಂಧದ ಮರ ಬೆಳೆಸಲು ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ರೈತರು ಶ್ರೀಗಂಧ ಬೆಳೆಯಲು ಅನುಕೂಲವಾಗುವಂತೆ ನೀತಿಯನ್ನು ಸರಳೀಕರಣ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಬುಧವಾರ ಆಯೋಜಿಸಿದ್ದ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆ.ಎಸ್.ಡಿ.ಎಲ್. ಶ್ರೀಗಂಧದ ಎಣ್ಣೆಯ ಅಗತ್ಯ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ರೈತರು ಕೂಡ ಶ್ರೀಗಂಧ ಬೆಳೆಯುತ್ತಿದ್ದಾರೆ. ಇವರಿಗೆ ಶ್ರೀಗಂಧ ಕಟಾವು ಮಾಡಲು, ಸಾಗಾಟ ಮಾಡಲು ಅನುವಾಗುವಂತೆ ಶೀಘ್ರವೇ ಶ್ರೀಗಂಧದ ನೀತಿ ಸರಳೀಕರಣ ಮಾಡಿ ಅಧಿಸೂಚನೆ ಹೊರಡಿಸಲಾಗುವುದು. ಅರಣ್ಯ ಇಲಾಖೆಯ ವತಿಯಿಂದ ನೆಡುತೋಪಿನಲ್ಲಿ ಶ್ರೀಗಂಧದ ಮರ ಬೆಳೆಸಲು ಕ್ರಮ ವಹಿಸಲಾಗುವುದು ಎಂದರು.

ಅಪಾಯ ಭತ್ಯೆ- ಕ್ಯಾಂಟೀನ್ ಸೌಲಭ್ಯ:

ಹಗಲಿರುಳೆನ್ನದೆ ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ಅರಣ್ಯ ಮತ್ತು ಅರಣ್ಯ ಸಂಪತ್ತು ಕಾಯುವ ಸಿಬ್ಬಂದಿಗೆ ವೇತನದ ಜೊತೆಗೆ ಆಹಾರಭತ್ಯೆ ನೀಡಲು ಮತ್ತು ಹೆಚ್ಚುವರಿಯಾಗಿ ಮಾಸಿಕ 2 ಸಾವಿರ ರು. ಅಪಾಯ ಭತ್ಯೆ ನೀಡಲು ಆದೇಶ ನೀಡಿದ್ದು, ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಅರಣ್ಯ ಸಿಬ್ಬಂದಿಗೂ ಸಹ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಗೆ ಇರುವ ರೀತಿಯ ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯವನ್ನು ಅರಣ್ಯ ಸಿಬ್ಬಂದಿಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.

ಕಳೆದ 2 ವರ್ಷದಲ್ಲಿ 15 ಸಾವಿರ ಎಕರೆ ಜಮೀನನ್ನು ಹೊಸದಾಗಿ ಅರಣ್ಯ ಪ್ರದೇಶ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರೂ. ಬೆಲೆ ಬಾಳುವ 128 ಎಕರೆ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕೋಟಿ ರೂ. ಬೆಲೆ ಬಾಳುವ 6 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. 2023- 24 ಮತ್ತು 2024- 25ರ ಸಾಲಿನಲ್ಲಿ ಒಟ್ಟು 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷ ಉದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಹಸಿರು ಸಂವರ್ಧನೆಯಲ್ಲಿ ಇಲಾಖೆಯ ಮುಂಚೂಣಿ ಸಿಬ್ಬಂದಿಯ ಪಾತ್ರ ಹಿರಿದು. ಅವರೆಲ್ಲರ ಶ್ರಮದಿಂದಲೇ ಇಂದು ರಾಜ್ಯದಲ್ಲಿ ಶೇ.21 ರಷ್ಟು ಅರಣ್ಯ ಉಳಿದಿದೆ ಎಂದರೂ ತಪ್ಪಾಗಲಾರದು ಎಂದರು.

ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದ ಒಂದು ತಿಂಗಳಲ್ಲಿ ಬೀಳಬೇಕಾದ ಮಳೆ ಒಂದೇ ವಾರದಲ್ಲಿ ಬೀಳುತ್ತಿದೆ, ಒಂದು ವಾರದ ಮಳೆ ಒಂದು ದಿನ ಬೀಳುತ್ತಿದ್ದು, ಅನಾಹುತ ಸೃಷ್ಟಿಸುತ್ತಿದೆ. ಹೀಗಾಗಿ, ನಾವು ಹಸಿರು ಪ್ರದೇಶ ಹೆಚ್ಚಳಕ್ಕೆ ಒತ್ತು ನೀಡಬೇಕು. ಮರ ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ವಿಧಾನಪರಿಷತ್ತು ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಕೆಎಸ್‌ ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ, ಮುಖ್ಯ ವನ್ಯಜೀವಿ ಪರಿಪಾಲಕರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಕಡೆ, ಎಪಿಸಿಸಿಎಫ್ ಕುಮಾರ್ ಪುಸ್ಕರ್, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್, ಹುಲಿ ಯೋಜನೆ ನಿರ್ದೇಶಕ ಡಾ. ರಮೇಶ್ ಕುಮಾರ್, ಸಿಸಿಎಫ್ ಹೀರಾಲಾಲ್ ಮೊದಲಾದವರು ಇದ್ದರು.100 ವರ್ಷಗಳ ಇತಿಹಾಸವಿರುವ ಕೆಎಸ್‌ ಡಿಎಲ್ ಸಂಸ್ಥೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಲಾಭದಾಯಕವಾಗಿ ಮುಂಚೂಣಿ ಅರಣ್ಯ ಸಂರಕ್ಷಕರಿಗೆ ಸುರಕ್ಷ ಕಿಟ್ ವಿತರಿಸುತ್ತಿರುವುದು ಅಭಿನಂದನಾರ್ಹ.

- ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯಗಂಧದ ಎಣ್ಣೆಯನ್ನು ವಿದೇಶದಿಂದ ರಫ್ತು ಮಾಡುತ್ತಿದ್ದೇವೆ. ಅರಣ್ಯ ಇಲಾಖೆ ಒಪ್ಪಿದರೆ ಒಳ್ಳೆಯ ತಳಿಯ ಗಂಧದ ಸಸಿಗಳನ್ನು ನೀಡುತ್ತೇವೆ. ಬೆಳೆದುಕೊಟ್ಟರೆ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ವಾರ್ಷಿಕ ವಹಿವಾಟು ಅನ್ನು 3 ಸಾವಿರ ಕೋಟಿ ರೂ. ಗುರಿಯೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ.

- ಅಪ್ಪಾಜಿ ಎಸ್. ನಾಡಗೌಡ, ಅಧ್ಯಕ್ಷ, ಕೆಎಸ್‌ ಡಿಎಲ್

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್