ಸಂಡೂರಿನಲ್ಲಿ ಶ್ರೀಗಂಧ ಅಕ್ರಮ ಸಾಗಾಟ: ಇಬ್ಬರ ಬಂಧನ

KannadaprabhaNewsNetwork |  
Published : Feb 19, 2026, 02:15 AM IST
ಸಂಡೂರು ಭಾಗದಿಂದ ಆಂಧ್ರಪ್ರದೇಶದಲ್ಲಿನ ಕಾರ್ಖಾನೆಯೊಂದಕ್ಕೆ ಅಕ್ರಮವಾಗಿ ಶ್ರೀಗಂಧವನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಂಡೂರು ಅರಣ್ಯ ಇಲಾಖೆಯ ಅಧಿಕಾರಿಗಳು ಶ್ರೀಗಂಧ ಸಮೇತ ವಶಕ್ಕೆ ಪಡೆದಿರುವುದು. | Kannada Prabha

ಸಾರಾಂಶ

ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿರುವ ನಿಷತ್ ಫ್ರಾಗ್ರನ್ಸಸ್ ಫ್ಯಾಕ್ಟರಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ.

ಸಂಡೂರು: ತಾಲೂಕಿನ ಅರಣ್ಯ ಪ್ರದೇಶದಿಂದ ಶ್ರೀಗಂಧದ ತುಂಡುಗಳನ್ನು ಕದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳನ್ನು ಸಂಡೂರು ಉತ್ತರ, ದಕ್ಷಿಣ ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಸುಶೀಲಾನಗರ ಗ್ರಾಮದ ನಿವಾಸಿಗಳಾದ ಲೋಕೇಶ್ ನಾಯ್ಕ್, ಕಿರಣ್‌ಕುಮಾರ್ ಎಚ್.ಕೆ. ಬಂಧಿತರು.

ಶ್ರೀಗಂಧದ ತುಂಡುಗಳನ್ನು ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿರುವ ನಿಷತ್ ಫ್ರಾಗ್ರನ್ಸಸ್ ಫ್ಯಾಕ್ಟರಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಶ್ರೀಗಂಧ ಸಾಗಾಣಿಕೆಗೆ ಬಳಸಿದ್ದ ಮಹೀಂದ್ರ ಮೊರಾಜ್ಜೋ ವಾಹನ ಹಾಗೂ 110 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆಂಧ್ರಪ್ರದೇಶ ರಾಜ್ಯದ ರೋಲ್ಲ ಗ್ರಾಮದಲ್ಲಿನ ಫ್ಯಾಕ್ಟರಿಗೆ ಅಲ್ಲಿನ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ತೆರಳಿ, ಅಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 170 ಕೆಜಿ ಶ್ರೀಗಂಧವನ್ನು ಜಪ್ತಿ ಮಾಡಿ, ಪೆನುಗೊಂಡದಲ್ಲಿನ ಅರಣ್ಯಾಧಿಕಾರಿ ವಶಕ್ಕೆ ನೀಡಲಾಗಿದೆ. 3 ದಿನಗಳವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಇದುವರೆಗೆ ಒಟ್ಟು 7 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದೆ. ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಕ್ಕೆ ಪಡೆಯಲಾದ ಶ್ರೀಗಂಧದ ಒಟ್ಟು ಮೌಲ್ಯ ಅಂದಾಜು 15 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆ ನಡೆದಿದೆ ಎಂದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್ ತಿಳಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್, ಎಸಿಎಫ್ ಶರಣ್‌ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಡೂರು ಉತ್ತರ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ್, ದಕ್ಷಿಣ ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್, ಉಪ ವಲಯ ಅರಣ್ಯಾಧಿಕಾರಿಗಳಾದ ತಿಪ್ಪೇಸ್ವಾಮಿ, ಮಹೇಶ್, ಹೊನ್ನೂರಸ್ವಾಮಿ, ಶ್ರೀಧರ್, ಬೀಟ್ ಫಾರೆಸ್ಟರ್‌ಗಳಾದ ರಾಘವೇಂದ್ರ, ಸಿಬ್ಬಂದಿ ಭಾಗವಹಿಸಿದ್ದರು.

ಸಂಡೂರು ಭಾಗದಿಂದ ಆಂಧ್ರಪ್ರದೇಶದಲ್ಲಿನ ಕಾರ್ಖಾನೆಯೊಂದಕ್ಕೆ ಅಕ್ರಮವಾಗಿ ಶ್ರೀಗಂಧವನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಂಡೂರು ಅರಣ್ಯ ಇಲಾಖೆಯ ಅಧಿಕಾರಿಗಳು ಶ್ರೀಗಂಧ ಸಮೇತ ವಶಕ್ಕೆ ಪಡೆದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾವಣೆಗೆ ತಕ್ಕಂತೆ ಕೈಗಾರಿಕೆ ವೇಗ ಹೆಚ್ಚಿಸಿಕೊಳ್ಳಿ: ವಿಜಯ ಸಂಕೇಶ್ವರ
ಶೀಘ್ರ ಬೆಳ್ಳೂಡಿ–ರಾಮತೀರ್ಥ ಸೇತುವೆ ಪುನರ್ ನಿರ್ಮಾಣ: ಶಾಸಕ ಬಿ.ಪಿ.ಹರೀಶ್