ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ ಪಕ್ಷಕ್ಕೆ ಭಿನ್ನಮತದ ತಲೆನೋವು

KannadaprabhaNewsNetwork | Updated : Oct 20 2024, 12:37 PM IST

ಸಾರಾಂಶ

ನೂರಾರು ಬೆಂಬಲಿಗರೊಂದಿಗೆ ಸಂತೋಷ್‌ ಲಾಡ್ ಅವರನ್ನು ಭೇಟಿ ಮಾಡಿ ತನಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು.

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎರಡು ಪಕ್ಷಗಳು ಅಖಾಡಕ್ಕೆ ಸಜ್ಜಾಗುತ್ತಿರುವ ನಡುವೆ ಕಾಂಗ್ರೆಸ್‌ನಲ್ಲಿ ಎದುರಾದ ಭಿನ್ನಮತ ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಹಾಲಿ ಸಂಸದ ಈ.ತುಕಾರಾಂ ಕುಟುಂಬ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಖಾತ್ರಿಯಾಗುತ್ತಿದ್ದಂತೆಯೇ ಸಚಿವ ಸಂತೋಷ್‌ ಲಾಡ್ ಆಪ್ತ ಹಾಗೂ ಜಿಪಂ ಮಾಜಿ ಸದಸ್ಯ ತುಮಟಿ ಲಕ್ಷ್ಮಣ ಟಿಕೆಟ್‌ ಗಾಗಿ ಒತ್ತಡ ಹಾಕಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ಸಂತೋಷ್‌ ಲಾಡ್ ಅವರನ್ನು ಭೇಟಿ ಮಾಡಿ ತನಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಲಕ್ಷ್ಮಣ್ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದು ಟಿಕೆಟ್‌ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ. ಇದು ಸಂತೋಷ್‌ ಲಾಡ್ ಹಾಗೂ ತುಕಾರಾಂ ಅವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ತುಕಾರಾಂ ಕುಟುಂಬಕ್ಕೆ ಟಿಕೆಟ್ ಖಾತ್ರಿ?

ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯ ಗಳಿಸಿದ್ದ ಈ.ತುಕಾರಾಂ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸಂತೋಷ್‌ ಲಾಡ್ ಸೇರಿದಂತೆ ಅನೇಕ ನಾಯಕರು ಸೂಚಿಸಿದ್ದರು. ಆದರೆ, ಇದಕ್ಕೊಪ್ಪದ ತುಕಾರಾಂ, ಶಾಸಕನಾಗಿಯೇ ಉಳಿಯುವುದಾಗಿ ಹೇಳಿದ್ದರು. ಶ್ರೀರಾಮುಲು ವಿರುದ್ಧ ತುಕಾರಾಂ ಸ್ಪರ್ಧಿಸಿದರೆ ಮಾತ್ರ ಗೆಲುವು ಸಾಧ್ಯ ಎಂದರಿತ ಕೈ ನಾಯಕರು ಸಿಎಂ ಸಿದ್ದರಾಮಯ್ಯ ಮೂಲಕ ತುಕಾರಾಂಗೆ ಲೋಕಸಭೆಗೆ ಸ್ಪರ್ಧಿಸುವಂತೆ ಹೇಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ತೆರವಾಗುವ ಸ್ಥಾನಕ್ಕೆ ನನ್ನ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ತುಕಾರಾಂ ಬೇಡಿಕೆ ಇಟ್ಟಿದ್ದರು. 

ಇದಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರು ಒಪ್ಪಿದ್ದರು. ಈ ಒಪ್ಪಂದದ ಮಾತುಕತೆ ಕುರಿತು ಈಚೆಗೆ ಸಂಡೂರಿಗೆ ಸಾಧನಾ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ತುಕಾರಾಂ ಅವರು ಲೋಕಸಭಾ ಕ್ಷೇತ್ರ ಚುನಾವಣೆಗೆ ಒಪ್ಪದಿರುವ ಕುರಿತು ಪ್ರಸ್ತಾಪಿಸಿ, ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡುವ ಸುಳಿವು ನೀಡಿದರು. ಹೀಗಾಗಿ ತುಕಾರಾಂ ಪತ್ನಿ ಅನ್ನಪೂರ್ಣ ಅಥವಾ ಪುತ್ರಿ ಸೌಪರ್ಣಿಕ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

Share this article