ವಿಶೇಷ ವರದಿ
ಉಪ ಚುನಾವಣೆ ಘೋಷಣೆಗೊಂಡು ನಾಮಪತ್ರ ಸಲ್ಲಿಕೆ ದಿನದಿಂದಲೇ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಶುರುವಾಗಿತ್ತು. ದಿನ ಕಳೆದು ರಾಜ್ಯ ನಾಯಕರು ಗಣಿನಾಡಿಗೆ ಎಂಟ್ರಿಯಾಗುತ್ತಿದ್ದಂತೆಯೇ ಬಹಿರಂಗ ಪ್ರಚಾರ ಮತ್ತಷ್ಟು ರಂಗು ಪಡೆಯಿತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆದಿಯಾಗಿ ಸಂಡೂರಿಗೆ ಆಗಮಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಸಂಡೂರಿನ ಚುನಾವಣಾ ರಣಕಣದಲ್ಲಿ ಪರಸ್ಪರ ವಾಕ್ಸಮರ, ಆರೋಪ-ಪ್ರತ್ಯಾರೋಪದ ಬಿರುಸು ಬಾಣಗಳು ದೀಪಾವಳಿಯ ಪಟಾಕಿಗಳಿಗಿಂತಲೂ ಹೆಚ್ಚು ಸದ್ದು ಮಾಡಿದವು.
ಹಳ್ಳಿಹಳ್ಳಿ ಸುತ್ತಾಡಿದ ಸಿಎಂ:ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಸಂಡೂರು ಕಮಲ ಪಾಳಯಕ್ಕೆ ತುತ್ತಾಗಬಾರದು ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಕಾಲ ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿದರು. ಅಲ್ಲದೆ, ಹಳ್ಳಿಹಳ್ಳಿಗಳನ್ನು ಸುತ್ತಾಡಿ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಪ್ರತಿಪಕ್ಷ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಸಂಡೂರಿನಲ್ಲಿ ನಾನೇ ಸ್ಪರ್ಧಿಸಿದ್ದೇನೆಂದು ತಿಳಿದು ಮತದಾನ ಮಾಡಿ. ಯಾವುದೇ ಕಾರಣಕ್ಕೆ ಬಿಜೆಪಿಯನ್ನು ಗೆಲ್ಲಿಸಬೇಡಿ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಜನಾರ್ದನ ರೆಡ್ಡಿಯನ್ನು ದೂರವಿಡಿ ಎಂದು ಕರೆ ನೀಡಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂಡೂರು ಉಪಕಣದಲ್ಲಿ ಓಡಾಟ ನಡೆಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ವಿಜಯೇಂದ್ರ ಅವರ ಪ್ರಚಾರದ ಬಹುಭಾಗ ಮುಡಾ ಹಗರಣದ ಮೇಲೆ ಕೇಂದ್ರೀಕೃತವಾಗಿತ್ತು. ಸಿದ್ದರಾಮಯ್ಯ ಅಸಮರ್ಥತೆ, ಕೈ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾದ ಕರ್ನಾಟಕ, ಗ್ಯಾರಂಟಿಗಳ ಪಂಕ್ಚರ್, ತುಕಾರಾಂ ಅವರಿಂದ ಸಂಡೂರು ಹಿಂದುಳಿದಿದ್ದು ಹೀಗೆ ಹತ್ತಾರು ಆರೋಪಗಳ ಸುರಿಮಳೆಗಳ ಮೂಲಕ ಪ್ರಚಾರದಲ್ಲಿ ಗಮನ ಸೆಳೆದರು.
ಮುಡಾ-ವಾಲ್ಮೀಕಿ ನಿಗಮ ಹಗರಣ ಸದ್ದು:
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮುನ್ನೆಲೆಗೆ ಕಂಡು ಬರಲಿಲ್ಲ. ಬದಲಿಗೆ ರಾಜ್ಯ ನಾಯಕರು ಹಾಗೂ ಸ್ಥಳೀಯವಾಗಿ ಸಚಿವ ಸಂತೋಷ್ ಲಾಡ್ ಹಾಗೂ ಶಾಸಕ ಜನಾರ್ದನ ರೆಡ್ಡಿ ಹೆಚ್ಚು ಗಮನ ಸೆಳೆದರು.
ಚುನಾವಣಾ ಮುನ್ನದ ದಿನದ ಚಟುವಟಿಕೆಗೆ ಎರಡು ಪಕ್ಷಗಳು ಸಕ್ರಿಯಗೊಂಡಿವೆ. ಸದ್ದುಗದ್ದಲದಿಂದ ಕೂಡಿದ್ದ ಗಣಿನಾಡು ಸಂಡೂರಿನ ರಾಜಕೀಯ ಚಟುವಟಿಕೆಯ ಬಹಿರಂಗ ಆರ್ಭಟಕ್ಕೆ ಮೌನಾವರಿಸಿದೆ.