ಸಂಡೂರು ತಾಲೂಕು ಕ್ರೀಡಾಂಗಣ ಕಾಮಗಾರಿಗೆ ಬೇಕಿದೆ ವೇಗ

KannadaprabhaNewsNetwork | Published : May 16, 2024 12:50 AM

ಸಾರಾಂಶ

ಕಂಪನಿಯು ತನ್ನ ೨೦೧೫-೧೬ನೇ ಸಾಲಿನ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಅಂದಾಜು ₹೨ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.

ವಿ.ಎಂ. ನಾಗಭೂಷಣ

ಸಂಡೂರು: ಪಟ್ಟಣದ ಕಪ್ಪಲಕುಂಟೆ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದ ಕಾಮಗಾರಿ ಆರಂಭವಾಗಿ ೬-೭ ವರ್ಷ ಕಳೆದರೂ ಇನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯ ಕಂಡಿಲ್ಲ. ಕಾಮಗಾರಿ ಬೇಗನೆ ಮುಕ್ತಾಯವಾಗಿ ಕ್ರೀಡಾ ಚುಟುವಟಿಕೆಗಳಿಗೆ ಅವಕಾಶ ದೊರೆಯಬೇಕೆಂದರೆ ಈ ಕಾಮಗಾರಿಗೆ ಹೆಚ್ಚಿನ ವೇಗ ನೀಡಬೇಕಿದೆ.

ಗುಡ್ಡಬೆಟ್ಟಗಳಿಂದ ಆವೃತವಾಗಿರುವ ಈ ಕ್ರೀಡಾಂಗಣವನ್ನು ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿ.) ಕಂಪನಿಯು ತನ್ನ ೨೦೧೫-೧೬ನೇ ಸಾಲಿನ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ಅಂದಾಜು ₹೨ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.

ಅಪೂರ್ಣ ಕಾಮಗಾರಿ:

ಕ್ರೀಡಾಂಗಣದ ಬದಿಯಲ್ಲಿ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಿ, ಸ್ಟೀಲ್ ಸೀಟ್‌ಗಳಿಂದ ಛಾವಣಿ ನಿರ್ಮಿಸಲಾಗಿದೆ. ಆದರೆ, ಇತ್ತೀಚೆಗೆ ಬೀಸಿದ ಗಾಳಿಗೆ ಛಾವಣಿಯ ಬಹುತೇಕ ಸೀಟುಗಳು ಹಾರಿ ಹೋಗಿದ್ದರೆ, ಛಾವಣಿಗೆ ಆಧಾರವಾಗಿದ್ದ ಕಂಬಗಳು ವಾಲಿಕೊಂಡು ಬೀಳುವ ಹಂತದಲ್ಲಿವೆ.

ಕ್ರೀಡಾಂಗಣದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಲ ಭಾಗಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಇನ್ನು ಕೆಲ ಭಾಗದ ರಸ್ತೆ ನಿರ್ಮಾಣ ಕಾರ್ಯ ಬಾಕಿ ಇದೆ. ಕ್ರೀಡಾಂಗಣದ ಸುತ್ತ ತಂತಿಬೇಲಿ ನಿರ್ಮಾಣ ಕಾರ್ಯವೂ ಅಪೂರ್ಣವಾಗಿದೆ. ಕ್ರೀಡಾಂಗಣದ ಪರಿಸರದಲ್ಲಿ ಮದ್ಯದ ಬಾಟಲ್ ಹಾಗೂ ಅವುಗಳ ಚೂರುಗಳು ಕಂಡು ಬರುತ್ತಿರುವುದನ್ನು ಗಮನಿಸಿದರೆ, ಈ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ ಎಂಬುದು ತಿಳಿದು ಬರುತ್ತದೆ.

ತಾಲೂಕು ಕ್ರೀಡಾಂಗಣ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದ ಕಾರಣ ಇಲ್ಲಿ ಶಿಕ್ಷಣ ಇಲಾಖೆ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆ ನಡೆಸುವ ಕ್ರೀಡಾ ಚುಟವಟಿಕೆಗಳಿಗೆ ಖಾಸಗಿ ಶಾಲೆಯೊಂದರ ಕ್ರೀಡಾಂಗಣವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ತಾಲೂಕು ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕ ಕ್ರೀಡಾ ಚುಟವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ.

ಅನೈತಿಕ ಚಟುವಟಿಕೆ ತಾಣ:

ತಾಲೂಕು ಕ್ರೀಡಾಂಗಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕ್ರೀಡಾಂಗಣದಲ್ಲಿ ಈಜುಕೊಳವನ್ನು ನಿರ್ಮಿಸುವ ಅಗತ್ಯವಿದೆ. ಕ್ರೀಡಾಂಗಣದಲ್ಲಿ ಅನೈತಿಕ ಚಟುವಟಿಕೆಗಳನ್ನು ತಡೆಯಲು ಸೂಕ್ರ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಮುಖಂಡ ಎಂ.ಎಲ್.ಕೆ. ನಾಯ್ಡು.

ನನೆಗುದಿಗೆ ಬಿದ್ದಿರುವ ತಾಲೂಕು ಕ್ರೀಡಾಂಗಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ಕ್ರೀಡಾಸಕ್ತರ ಆಗ್ರಹ.

ಕ್ರೀಡಾಂಗಣ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಕ್ರೀಡಾಂಗಣ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಶಾಸಕ ಈ.ತುಕಾರಾಂ.

Share this article