ಜಿಲ್ಲೆಗೆ ಬೆಳಕಾದವರು ಸಂಗನಬಸವ ಶ್ರೀಗಳು

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಜಿಲ್ಲೆಯು ಅಜ್ಞಾನದ ಕತ್ತಲೆಯಲ್ಲಿ ಸಿಕ್ಕಿಕೊಂಡಾಗ ಬೆಳಕಾಗಿ ಬಂದವರು ಬಂಥನಾಳದ ಸಂಗನಬಸವ ಶಿವಯೋಗಿಗಳು. ಅವರು ಮನಸ್ಸು ಮಾಡಿದರೆ ೧೦೦ ಮಠಗಳನ್ನು ಕಟ್ಟಬಹುದಿತ್ತು. ಆದರೆ ಅವರು ಜಿಲ್ಲೆಯಲ್ಲಿ ಜ್ಞಾನದ ದೇಗುಲಗಳನ್ನು ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿ ಜಿಲ್ಲೆಗೆ ಬೆಳಕಾಗಿದ್ದಾರೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜಿಲ್ಲೆಯು ಅಜ್ಞಾನದ ಕತ್ತಲೆಯಲ್ಲಿ ಸಿಕ್ಕಿಕೊಂಡಾಗ ಬೆಳಕಾಗಿ ಬಂದವರು ಬಂಥನಾಳದ ಸಂಗನಬಸವ ಶಿವಯೋಗಿಗಳು. ಅವರು ಮನಸ್ಸು ಮಾಡಿದರೆ ೧೦೦ ಮಠಗಳನ್ನು ಕಟ್ಟಬಹುದಿತ್ತು. ಆದರೆ ಅವರು ಜಿಲ್ಲೆಯಲ್ಲಿ ಜ್ಞಾನದ ದೇಗುಲಗಳನ್ನು ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿ ಜಿಲ್ಲೆಗೆ ಬೆಳಕಾಗಿದ್ದಾರೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಸ್ಮರಿಸಿದರು.

ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಗೆ ಬಂಥನಾಳ ಸಂಗನಬಸವ ಶಿವಯೋಗಿಗಳು ಬಾರದೇ ಹೋಗಿದ್ದರೆ ಜಿಲ್ಲೆಯು ಅಂಧಕಾರದಲ್ಲಿ ಇರುತ್ತಿತ್ತೇನೋ. ಅವರು ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮೂಲಕ ಎಲ್ಲರ ಬದುಕಿಗೆ ದಾರಿ ಮಾಡಿದರು ಎಂದರು.

ಮತಕ್ಷೇತ್ರದಲ್ಲಿ ನಾನು ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಮಾಡಿರಬಹುದು. ನಾನು ಮಾಡಿರುವ ಕಾರ್ಯಗಳು ಶಾಶ್ವತವಲ್ಲ. ಬಂಥನಾಳದ ಸಂಗನಬಸವ ಶಿವಯೋಗಿಗಳು ಮಾಡಿದ ಕಾರ್ಯ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರ ಶೈಕ್ಷಣಿಕ ಕ್ರಾಂತಿ ಶಾಶ್ವತವಾಗಿ ಜಿಲ್ಲೆಯಲ್ಲಿ ಇರಲಿದೆ. ಶ್ರೀಗಳ ಕನಸು ನನಸು ಮಾಡುವ ಸಂಕಲ್ಪ ಮಾಡಬೇಕಿದೆ ಎಂದ ಅವರು ಶ್ರೀಮಠದ ಪ್ರಸ್ತುತ ಪೀಠಾಧಿಪತಿ ಗುರುಸಂಗನಬಸವ ಸ್ವಾಮೀಜಿಗಳು ಸಹ ಕತೃತ್ವ ಶಕ್ತಿ ಹೊಂದಿದ್ದಾರೆ. ಇವರು ಸರ್ಕಾರದ ಯಾವ ಸಹಾಯ ಪಡೆದುಕೊಳ್ಳದೇ ಮಠದ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಇದೀಗ ವಿಜಯಪುರದಲ್ಲಿ ಅದ್ಭುತ ಶಾಲೆ ಆರಂಭಿಸಿದ್ದು, ಶ್ರೀಗಳ ಕನಸು ನನಸಾಲೆಂದು ಹಾರೈಸಿದರು.

ಮುದ್ದೇಬಿಹಾಳದ ಐ.ಬಿ.ಹಿರೇಮಠ ಮಾತನಾಡಿ, ದೂರದೃಷ್ಟಿ ಹೊಂದಿದ್ದ ಬಂಥನಾಳದ ಸಂಗನಬಸವ ಶಿವಯೋಗಿಗಳು ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆ ಕಟ್ಟುವ ಮೂಲಕ ಅನೇಕ ಶಾಲಾ-ಕಾಲೇಜುಗಳನ್ನು ಜಿಲ್ಲೆಯಲ್ಲಿ ಆರಂಭಿಸಿದರು. ಮಂತ್ರಪುರುಷರಾಗಿದ್ದ ಸಂಗನಬಸವ ಶಿವಯೋಗಿಗಳು ಅನೇಕ ದಾನಿಗಳ ನೆರವಿನಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಇವರ ಸೇವೆ ಗುರುತಿಸಿ ರಾಜ್ಯ ಸರ್ಕಾರವು ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಪಾರಸ್ಸು ಮಾಡಬೇಕೆಂದರು.

ಸಾನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಂಸಾರದಲ್ಲಿ ಗುರುಭಕ್ತಿ ಹೊಂದಬೇಕು. ಗುರುಭಕ್ತಿ ಇದ್ದವರು ಜೀವನದಲ್ಲಿ ಸುಖವಾಗಿ ಬದುಕು ಸಾಗಿಸುತ್ತಾರೆ. ಸದಾ ಗುರುಸ್ಮರಣೆ ಇರಬೇಕು ಎಂದು ಹೇಳಿದರು.

ಸಾನಿಧ್ಯವನ್ನು ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ, ಆಳಂದದ ಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು. ವೇದಿಕೆಯಲ್ಲಿ ಡಾ.ಹಂಪನಗೌಡ ಪಾಟೀಲ ಇತರರು ಇದ್ದರು. ಶ್ವೇತಾ ದೇವನಹಳ್ಳಿ ಪ್ರಾರ್ಥಿಸಿದರು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಗಿರಿಜಾ ಪಾಟೀಲ, ಶರಣಬಸು ಹಳಮನಿ ನಿರೂಪಿಸಿದರು. ಈ ಸಂದರ್ಭದಲ್ಲಿ ಆರಕ್ಷಕರಾದ ಸಿದ್ದು ದಾನಪ್ಪಗೋಳಿ, ಪುಂಡಲೀಕ ಬಿರಾದಾರ, ಆದರ್ಶ ದಂಪತಿಗಳಾದ ನೀಲಕಂಠಪ್ಪ ಹೂಗಾರ, ಅಂಬರೀಷ ಪೂಜಾರಿ, ಸಂತೋಷಕುಮಾರ ತಳಕೇರಿ, ಸುರೇಶ ಜತ್ತಿ, ಗೌರೀಶ ಗಾಂವಕರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ನಂತರ ಸಂಜು ಬಸಯ್ಯ ಪಲ್ಲವಿ, ಸಂಜು ಜಾಲಿಕಟ್ಟಿ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.

-----

ಕೋಟ್‌

ನಾನು ಶಾಸಕ, ಸಚಿವನಾಗಿದ್ದರೂ ಕ್ಷೇತ್ರದಲ್ಲಿ ಶಿಕ್ಷಣದಿಂದ ವಂಚಿತ ಗ್ರಾಮದಲ್ಲಿ ಜೂನಿಯರ್ ಕಾಲೇಜು ಆರಂಭಿಸಲು ಸಾಧ್ಯವಾಗಿಲ್ಲ. ಜ್ಞಾನ ದೇಗುಲ ಕಟ್ಟುವುದು ಕಷ್ಟದ ಕೆಲಸ. ಇಂತಹ ಮಹತ್ತರ ಕೆಲಸವನ್ನು ದಾನಿಗಳ ನೆರವಿನಿಂದ ಜಿಲ್ಲೆಯಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು ಕಟ್ಟಿ ಬೆಳೆಸಿದರು. ಈ ಮೂಲಕ ಜನರ ಮನಸ್ಸು ಕಟ್ಟುವ ಕಾರ್ಯ ಮಾಡಿದರು. ಸರ್ಕಾರ ಮಾಡದಿರುವ ಕಾರ್ಯವನ್ನು ಹಿಂದೆಯೇ ಮಾಡಿದ್ದು ಸ್ತುತ್ಯಾರ್ಹ.

ಶಿವಾನಂದ ಪಾಟೀಲ, ಸಚಿವ

Share this article