ದಲಿತ ಪದ ಬಳಸದಂತೆ ಕೋರಿದ್ದ ಅರ್ಜಿ ವಜಾ - ಮಹೇಂದ್ರ ಕುಮಾರ್‌ ಮಿತ್ರಾ ಸಲ್ಲಿಸಿದ್ದ ಪಿಐಎಲ್‌

ಸಾರಾಂಶ

ರಾಜ್ಯ ಸರ್ಕಾರದ ಎಲ್ಲ ಇಲಾಖೆ ಮತ್ತು ಪ್ರಾಧಿಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿ ನಡೆಸುವ ತನ್ನ ಅಧಿಕೃತ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡದಂತೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

 ಬೆಂಗಳೂರು :  ರಾಜ್ಯ ಸರ್ಕಾರದ ಎಲ್ಲ ಇಲಾಖೆ ಮತ್ತು ಪ್ರಾಧಿಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿ ನಡೆಸುವ ತನ್ನ ಅಧಿಕೃತ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡದಂತೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತು ಮಹೇಂದ್ರ ಕುಮಾರ ಮಿತ್ರಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡುವ ಪ್ರಮಾಣಪತ್ರದಲ್ಲಿ ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡದಂತೆ ಸೂಚಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2020ರ ಮೇ 20ರಂದು ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಅದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ದಲಿತ ಪದವನ್ನು ಬಳಕೆ ಮಾಡುವುದು ಕೂಡ ಅಸಂವಿಧಾನಕ. ಆದ್ದರಿಂದ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಪ್ರಾಧಿಕಾರಗಳು ತನ್ನ ಅಧಿಕೃತ ವ್ಯವಹಾರಗಳಲ್ಲಿ ದಲಿತ ಎಂಬ ಪದವನ್ನು ಬಳಕೆ ಮಾಡದಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರು ತಮ್ಮ ವಾದವನ್ನು ಪುಷ್ಟೀಕರಿಸುವಂತಹ ಆಧಾರಗಳನ್ನು ನ್ಯಾಯಾಲಯದ ಮುಂದೆ ಇರಿಸಿಲ್ಲ. ಕೇವಲ ಅರ್ಜಿದಾರರ ಹೇಳಿಕೆಯಿಂದ ಸರ್ಕಾರದ ಸುತ್ತೋಲೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ತೀರ್ಮಾನಿಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.

Share this article