ಸಂಗೀತ ಸಾಮ್ರಾಗ್ನಿ ಪಂಡಿತ್ ರಾಜೀವ್ ತಾರಾನಾಥ್‌ ಪಂಚಭೂತಗಳಲ್ಲಿ ಲೀನ

KannadaprabhaNewsNetwork |  
Published : Jun 13, 2024, 12:47 AM IST
5 | Kannada Prabha

ಸಾರಾಂಶ

ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಖ್ಯಾತರಾಗಿದ್ದ ರಾಜೀವ್ ತಾರಾನಾಥ್ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ತಮ್ಮ ಸಂಗೀತದ ಮೂಲಕ ಕೋಟ್ಯಂತರ ಮಂದಿಯ ಮನ ಗೆದ್ದಿದ್ದ ರಾಜೀವ್ ತಾರಾನಾಥ್ ಅವರ ಪಾರ್ಥಿವ ಶರೀರವನ್ನು ಕುವೆಂಪುನಗರದ ಪಂಚಮಂತ್ರ ರಸ್ತೆಯ ಅವರ ನಿವಾಸದಲ್ಲಿ ಇರಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಖ್ಯಾತ ಸಂಗೀತ ಶಾಸ್ತ್ರಜ್ಞ, ಸರೋದ್ ವಾದಕ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರ ಅಂತ್ಯಕ್ರಿಯೆ ನಗರದ ಚಾಮುಂಡಿಬೆಟ್ಟದ ತಪ್ಪಲಿನ ಅನಿಲ ಚಿತಾಗಾರದಲ್ಲಿ ನೆರವೇರಿತು.

ಹಿಂದೂಸ್ಥಾನಿ ಸಂಗೀತದಲ್ಲಿ ಪ್ರಖ್ಯಾತರಾಗಿದ್ದ ರಾಜೀವ್ ತಾರಾನಾಥ್ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ತಮ್ಮ ಸಂಗೀತದ ಮೂಲಕ ಕೋಟ್ಯಂತರ ಮಂದಿಯ ಮನ ಗೆದ್ದಿದ್ದ ರಾಜೀವ್ ತಾರಾನಾಥ್ ಅವರ ಪಾರ್ಥಿವ ಶರೀರವನ್ನು ಕುವೆಂಪುನಗರದ ಪಂಚಮಂತ್ರ ರಸ್ತೆಯ ಅವರ ನಿವಾಸದಲ್ಲಿ ಇರಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಂತಿಮ ದರ್ಶನ ಪಡೆದರು.

ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಅವರು ಆಗಮಿಸಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಅವರ ನಿವಾಸದಿಂದ ಆಂಬ್ಯುಲೆನ್ಸ್ ವಾಹನದಲ್ಲಿ ನೇರವಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರಘಾಟ್ ಅನಿಲ ಚಿತಾಗಾರಕ್ಕೆ ತರಲಾಯಿತು. ನಂತರ, ಮೈಸೂರು ನಗರ ಪೊಲೀಸರು ಶಿಷ್ಟಾಚಾರದ ಪ್ರಕಾರ ತಾರಾನಾಥ್ ಅವರ ಪ್ರಾರ್ಥಿವ ಶರೀರಕ್ಕೆ ನಾಲ್ವರು ಪೊಲೀಸರು ಪೆರೇಡ್ ಕಮಾಂಡರ್ ಸಮ್ಮುಖದಲ್ಲಿ ರಾಷ್ಟ್ರ ಧ್ವಜವನ್ನಿರಿಸಿದರು.

ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಅವರು ಪುಷ್ಪಗುಚ್ಛವನ್ನಿಟ್ಟು ಗೌರವ ಸಲ್ಲಿಸಿದರು.

ಬಳಿಕ ಶಸ್ತ್ರ ಸಜ್ಜಿತ ಪೊಲೀಸರು ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಮೂರು ಸುತ್ತು ಗುಂಡು ಹಾರಿಸಿದರು. ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಗಣ್ಯರ ಅನುಮತಿ ಮೇರೆಗೆ ರಾಷ್ಟ್ರಧ್ವಜವನ್ನು ಪಡೆದುಕೊಂಡು ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೆ ಒಪ್ಪಿಸಲಾಯಿತು.

ಇದಾದ ಬಳಿಕ ಕುಟುಂಬದವರು ಪಾರ್ಥಿವ ಶರೀರವನ್ನು ಚಿತಾಗಾರದಲ್ಲಿ ಇರಿಸಿ ಅಗ್ನಿಸ್ಪರ್ಶಿಸಿದರು. ಈ ವೇಳೆ ಕುಟುಂಬದವರು, ಸಂಗೀತಾಸಕ್ತರು, ಗಣ್ಯರು ಹಾಜರಿದ್ದು ಕಂಬನಿ ಮಿಡಿದು ಕಣ್ಣೀರಿಟ್ಟರು.

ಮೆರವಣಿಗೆ ಇಲ್ಲ:

ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದರೂ ಯಾವುದೇ ಮೆರವಣಿಗೆ ಇರಲಿಲ್ಲ. ದೇಶದಲ್ಲೇ ಅತಿದೊಡ್ಡ ಸಂಗೀತ ಸರೋದ್ ವಾದಕರಾಗಿದ್ದರು. ಕನ್ನಡ ಮತ್ತು ಸಂಸ್ಕೃತಿಯ ಕಲಾಮಂದಿರ, ಸಂಗೀತ ವಿವಿಯ ಆವರಣದಲ್ಲಿ ಕೆಲಕಾಲ ಇರಿಸಿ ನಂತರ ಅಂತ್ಯಕ್ರಿಯೆ ಮಾಡಬೇಕಾಗಿತ್ತಾದರೂ ಅವರ ಇಚ್ಛೆಯಂತೆ ಮೆರವಣಿಗೆ ಮಾಡದೆ ನೇರವಾಗಿ ಚಿತಾಗಾರಕ್ಕೆ ತಂದು ಅಗ್ನಿ ಸ್ಪರ್ಶಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಲೇಖಕರಾದ ಡಾ. ರೆಹಮತ್ ತರೀಕೆರೆ, ದೇವನೂರು ಮಹಾದೇವ, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಕೃಪಾ ಪಡ್ಕೆ, ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ನಿವೃತ್ತ ಪೊಲೀಸ್ ಆಯುಕ್ತ ಸಿ. ಚಂದ್ರಶೇಖರ್, ಡಾ.ಸಿ.ಜಿ. ನರಸಿಂಹಯ್ಯ, ಕೃಷ್ಣ ಮನವಳ್ಳಿ, ಪ್ರೊ.ಎನ್.ಎಸ್. ರಂಗರಾಜು, ಪಂಡಿತ್ ಹಿರೇಮಠ್, ಪಾರಂಪರಿಕ ಇಲಾಖೆಯ ವಿಶ್ರಾಂತ ಆಯುಕ್ತ ರಾಮಕೃಷ್ಣ, ಹೊಟೇಲ್ಮಾಲೀಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗ್ಡೆ ಮೊದಲಾದವರು ಮೃತರ ಅಂತಿಮ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ