ಬಾಲ ವಿಕಾಸ ಅಕಾಡೆಮಿಗೆ ಸಂಗಮೇಶ ಬಬಲೇಶ್ವರ ಅಧ್ಯಕ್ಷ

KannadaprabhaNewsNetwork | Published : Jun 16, 2024 1:47 AM

ಸಾರಾಂಶ

ಮಕ್ಕಳಿಗಾಗಿ ಇರುವ ಹಾಗೂ ರಾಜ್ಯದ ಪೈಕಿ ಧಾರವಾಡದಲ್ಲಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ನೂತನವಾಗಿ ವಿಜಯಪೂರ ಮೂಲದ ಸಂಗಮೇಶ ಬಬಲೇಶ್ವರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಧಾರವಾಡ:

ಅಧ್ಯಕ್ಷರಿಲ್ಲದೇ, ಅನುದಾನವೂ ಇಲ್ಲದೇ, ಯಾವುದೇ ಯೋಜನೆಗಳು ಸಕಾಲಕ್ಕೆ ನಡೆಯದೇ ಹೆಸರಿಗಷ್ಟೇ ಇದ್ದ ಇಲ್ಲಿಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ ಕಾಂಗ್ರೆಸ್‌ ಸರ್ಕಾರ ನೂತನ ಅಧ್ಯಕ್ಷರನ್ನು ನೇಮಿಸುವ ಮೂಲಕ ಮರು ಜೀವ ನೀಡಿದೆ.

ಮಕ್ಕಳಿಗಾಗಿ ಇರುವ ಹಾಗೂ ರಾಜ್ಯದ ಪೈಕಿ ಧಾರವಾಡದಲ್ಲಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ನೂತನವಾಗಿ ವಿಜಯಪೂರ ಮೂಲದ ಸಂಗಮೇಶ ಬಬಲೇಶ್ವರ ಶನಿವಾರ ಅಧಿಕಾರ ಸ್ವೀಕರಿಸಿದ್ದು, ಸರ್ಕಾರದ ಅನುದಾನದೊಂದಿಗೆ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅಡಿ ಅನುದಾನ ತಂದು ಅಕಾಡೆಮಿಯನ್ನು ಮುನ್ನಡೆಸುವುದಾಗಿ ಮಾಧ್ಯಮಗಳಿಗೆ ತಿಳಿಸಿದರು. ಈ ಮೊದಲಿನ ಅಧ್ಯಕ್ಷರು ಅಕಾಡೆಮಿ ಯಶಸ್ವಿಗೆ ಶ್ರಮಿಸಿದ್ದು ತಾವು ಸಹ ಅಕಾಡೆಮಿಯನ್ನು ಸಮರ್ಥವಾಗಿ ಮುನ್ನಡೆಸಲು ಉತ್ಸುಕರಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಸರ್ಕಾರ ನಮ್ಮ ಮೇಲೆ ಭರವಸೆ ಇಟ್ಟು ಮಕ್ಕಳ ಶ್ರೇಯೋಭಿವೃದ್ಧಿ ಮಾಡುವ ಅಕಾಡೆಮಿ ನೀಡಿದ್ದು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ ಎಂದರು.

ಮಕ್ಕಳ ಭವಿಷ್ಯ ರೂಪಿಸುವೆ:

ಮಕ್ಕಳ ಪ್ರತಿಭೆ ಅನಾವರಣ ಸೇರಿದಂತೆ ಅವರ ಸಮಗ್ರ ಅಭಿವೃದ್ಧಿಗೋಸ್ಕರ ಸರ್ಕಾರದ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗವುದು. ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಅವುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಆದರೆ, ಪ್ರಸ್ತುತ ಸಮಾಜದಲ್ಲಿ ಮಕ್ಕಳನ್ನು ತೀವ್ರವಾಗಿ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸಿ, ತಮ್ಮ ಪ್ರತಿಭೆಗಳನ್ನು ಮುಕ್ತವಾಗಿ ಪ್ರದರ್ಶಿಸುವ ರೀತಿಯಲ್ಲಿ ಅಕಾಡೆಮಿ ನಡೆಸಲು ತೀರ್ಮಾನಿಸಿದ್ದೇನೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಕಾಡೆಮಿ ತನ್ನದೇ ಪಾತ್ರ ವಹಿಸಲಿದ್ದು, ಬಾಲಮಂದಿರ ಸುಧಾರಣೆ, ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಸೇರಿದಂತೆ ರಚನಾತ್ಮಕ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಅಧ್ಯಕ್ಷರು ಭರವಸೆ ನೀಡಿದರು.

ಈ ವೇಳೆ ಅಕಾಡೆಮಿ ಯೋಜನಾಧಿಕಾರಿ ಭಾರತಿ ಶೆಟ್ಟರ್, ಕಾಂಗ್ರೆಸ್‌ ಮುಖಂಡರಾದ ಮಲ್ಲನಗೌಡ ಪಾಟೀಲ, ಬಿ.ವೈ. ಪಾಟೀಲ, ದಶರಥರಾವ ದೇಸಾಯಿ, ಬಸವರಾಜ ಮರಿತಮ್ಮನವರ, ಶಿವಶರಣ ಕಲಬಶೆಟ್ಟರ್ ಸೇರಿದಂತೆ ಇತರರು ಇದ್ದರು.

ಯಾರು ಸಂಗಮೇಶ:

ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ ನೂತನವಾಗಿ ಅಧ್ಯಕ್ಷರಾಗಿರುವ ಸಂಗಮೇಶ ಬಬಲೇಶ್ವರ ಮೂಲತಃ ವಿಜಯಪುರದ ಬಬಲೇಶ್ವರ ತಾಲೂಕಿನ ಮಮದಾಪೂರದವರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿದ್ದು, ಕೆಪಿಇಎಸ್‌ ಕಾಲೇಜಿನಲ್ಲಿ ಕಾನೂನು ಪದವಿ ಸಹ ಮುಗಿಸಿದ್ದಾರೆ. ಅಮ್ಮನ ಮಡಿಲು ಚಾರಿಟೇಬಲ್‌ ಟ್ರಸ್ಟ್‌ ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಇವರು ಹೊಂದಿದ್ದಾರೆ. ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಆಪ್ತ ಸಹಾಯಕರಾಗಿ ಇವರು ಕೆಲಸ ನಿರ್ವಹಿಸಿದ್ದರು.

Share this article