ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ‍್ಯಕ್ಕಾಗಿ ಮೊದಲು ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ ಕೇವಲ ಒಬ್ಬ ಯೋಧನಲ್ಲ, ದೇಶಭಕ್ತಿಯ ಪ್ರತೀಕ. ಕೆಲವು ರಾಜರು ತಮ್ಮ ಪ್ರಾಂತ್ಯಕ್ಕಾಗಿ ಹೋರಾಡಿದರೆ, ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ‍್ಯಕ್ಕಾಗಿ ಮೊದಲು ಹೋರಾಡಿದ ವೀರ ಸಂಗೊಳ್ಳಿ ರಾಯಣ್ಣ ಕೇವಲ ಒಬ್ಬ ಯೋಧನಲ್ಲ, ದೇಶಭಕ್ತಿಯ ಪ್ರತೀಕ. ಕೆಲವು ರಾಜರು ತಮ್ಮ ಪ್ರಾಂತ್ಯಕ್ಕಾಗಿ ಹೋರಾಡಿದರೆ, ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬಣ್ಣಿಸಿದರು.
ದೋರನಹಳ್ಳಿ ಪಟ್ಟಣದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣನ ಮೂರ್ತಿ ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಿತ್ತೂರಿನ ರಾಣಿ ಚನ್ನಮ್ಮನ ಬಲಗೈ ಭಂಟನಾಗಿ ಸ್ವಾಮಿನಿಷ್ಠೆ ಮೆರೆದ ರಾಯಣ್ಣ ಬಯಸಿದ್ದರೆ ಬ್ರಿಟಿಷರೊಂದಿಗೆ ಕೈಜೋಡಿಸಿ ದೊಡ್ಡ ಸ್ಥಾನಮಾನ ಪಡೆಯಬಹುದಾಗಿತ್ತು. ಆದರೆ ದೇಶ ಮತ್ತು ತಮ್ಮ ರಾಣಿಯ ಮೇಲಿನ ನಿಷ್ಠೆ ಬಿಟ್ಟುಕೊಡಲಿಲ್ಲ. ಅದೇ ರೀತಿ ಹಾಲುಮತ ಸಮಾಜದವರು ಕೂಡ ಸ್ವಾಮಿನಿಷ್ಠೆ ಹಾಗೂ ಸಂಘಟನಾ ಮನೋಭಾವ ಹೊಂದಿರುವವರು. ಪಟ್ಟಣದಲ್ಲಿ ಸುಮಾರು 3,500ಕ್ಕೂ ಹೆಚ್ಚು ಹಾಲುಮತ ಜನರಿದ್ದು, ಹಾಲುಮತ ಸಮಾಜದ ಪ್ರಾಬಲ್ಯವಿದೆ. ಸಮಾಜದಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಸಹಜ. ಅವುಗಳನ್ನು ಬದಿಗಿಟ್ಟು ಸಂಘಟನೆಯಾಗಿ ಮುನ್ನಡೆಯಬೇಕು. ಹಾಲುಮತದವರು ಇಂದು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಜಾಗೃತಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಸ್ಫೂರ್ತಿ ಎಂದರು.
ರೇವಣಸಿದ್ದೇಶ್ವರ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಹಾಲುಮತದವರು ಎಲ್ಲ ಜಾತಿ, ಮತದವರನ್ನೂ ಒಗ್ಗೂಡಿಸಿಕೊಂಡು ಸಾಗುವ ಗುಣ ಹೊಂದಬೇಕು. ಮುಗ್ಧರಾದ ಹಾಲುಮತ ಸಮಾಜದವರು ಮೂಢನಂಬಿಕೆಗಳಿಂದ ದೂರವಿದ್ದು, ಶಿಕ್ಷಣ ಹಾಗೂ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೋಟಿಗಟ್ಟಲೆ ಹಣ ಹೊಂದಿರುವುದು ಮುಖ್ಯವಲ್ಲ. ಅದನ್ನು ಸಮಾಜಕ್ಕಾಗಿ ನೀಡುವ ಮನಸ್ಸು ಇರಬೇಕು. ಇಂದು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಕೊಡುಗೆಯಾಗಿ ನೀಡಿದ ಮಹಾರಾಜ್ ದಿಗ್ಗಿಯವರ ಕೊಡುಗೆ ಅಪಾರ. ಕುಲಬಾಂಧವರು ವಿದ್ಯಾವಂತರಾಗಿ, ಜಾಗೃತರಾಗಬೇಕು. ಸಮಾಜದವರು ದುಶ್ಚಟಗಳನ್ನು ತ್ಯಜಿಸಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದಗೌಡ ಮಾಲಿಪಾಟೀಲ್ ಮಾತನಾಡಿ, ಹಾಲುಮತ ಸಮಾಜ ದೈವಸಂಭೂತವಾದ ಸಮಾಜ. ಗ್ರಾಮಸ್ಥರೆಲ್ಲರೂ ಜಾತಿಭೇದ ಮರೆತು ಒಗ್ಗಟ್ಟಿನಿಂದ ಶರಣರು ಹಾಗೂ ಮಹಾಪುರುಷರ ಜಯಂತಿ, ಕಾರ್ಯಕ್ರಮಗಳನ್ನು ಆಚರಿಸಿದಾಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಮಾಜದ ಮುಖಂಡ ಮಹಾರಾಜ ದಿಗ್ಗಿ ಮಾತನಾಡಿ, ಜಿಲ್ಲೆಯಾದ್ಯಂತ ಕಾನೂನುಬದ್ಧವಾಗಿ ಸ್ಥಳಾವಕಾಶ ದೊರೆತಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಗಳನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ವಿಶಾಲ್‌ಕುಮಾರ್ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಲು ಹಲವು ಮುಖಂಡರು ತನು–ಮನ–ಧನದಿಂದ ಸೇವೆ ಸಲ್ಲಿಸಿದ್ದಾರೆ. ಶಾಸಕ ದರ್ಶನಾಪುರ ನೆರವು ನೀಡಿದ್ದು, ಮಹೇಶ್ ರೆಡ್ಡಿ ಮುದ್ನಾಳ್, ಹಣಮೇಗೌಡ ಬಿರನಕಲ್ ಕೂಡ ಸಹಾಯ ಹಸ್ತ ನೀಡಿದ್ದು, ಮಹಾರಾಜ್ ದಿಗ್ಗಿ ಅವರು ರಾಯಣ್ಣನ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.
ಪೂಜ್ಯ ಲಿಂಗಬೀರದೇವರು, ಚಿಕ್ಕಮಠದ ಶಿವಲಿಂಗರಾಜೇಂದ್ರ ಶಿವಾಚಾರ್ಯರು, ಅಭಿನವ ಮಹಾಂತೇಶ್ವರ ಶಿವಾಚಾರ್ಯರು ಹಾಗೂ ಹಿರಗಪ್ಪ ತಾತನವರು, ಭೀಮಾಶಂಕರಾನಂದ ಅವಧೂತರು ಸಾನಿಧ್ಯ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.