ಕುಷ್ಟಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ಜತೆಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಕಲಿಕಾ ಗುಣಮಟ್ಟ ಸುಧಾರಣೆಗೆ ಶಿಕ್ಷಣ ಇಲಾಖೆ ರೂಪಿಸಿರುವ ಸಂಕಲ್ಪ 2.0 ಮಿಷನ್ 40+ ಮಹತ್ವದ ಸಹಕಾರಿಯಾಗಲಿದೆ ಎಂದು ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಡಯಟ್ ಹಿರಿಯ ಉಪನ್ಯಾಸಕ ಸಂಗಪ್ಪ ಕಿರಸೂರ ಹೇಳಿದರು.
ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಯಾವುದೇ ಭಯ, ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಎದುರಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ. ವಿಜ್ಞಾನ ವಿಷಯದಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಇದರ ಉದ್ದೇಶವಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ. ಮಾತನಾಡಿ, ನಿಧಾನಗತಿಯ ಕಲಿಕಾರ್ಥಿಗಳನ್ನು ಗುರುತಿಸಿ ಕನಿಷ್ಠ 40 ಅಂಕ ಗಳಿಸುವಂತೆ ಸಜ್ಜುಗೊಳಿಸಲು ಶಿಕ್ಷಣ ಇಲಾಖೆ ಸಂಕಲ್ಪ 2.0 ಯೋಜನೆ ಜಾರಿಗೊಳಿಸಿದೆ. ಇದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಫಲಿತಾಂಶ ಸುಧಾರಣೆಗೆ ನೆರವಾಗಲಿದೆ ಎಂದರು.ವಿಜ್ಞಾನ ವೇದಿಕೆಯ ಅಧ್ಯಕ್ಷ ಬಸವರಾಜ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯಮುನಪ್ಪ ಚೂರಿ ಅಧ್ಯಕ್ಷತೆ ವಹಿಸಿದ್ದರು.