ಜಿಲ್ಲೆಯಲ್ಲಿ ಹಿಂಗಾರು ಅಲ್ಲೊಲ ಕಲ್ಲೋಲ!

KannadaprabhaNewsNetwork |  
Published : Nov 30, 2026, 03:45 AM IST
ತೀವ್ರ ತೇವಾಂಶದ ಕೊರತೆಯಿಂದಾಗಿ ಜೋಳದ ಬೆಳೆ ಅಲ್ಲಲ್ಲಿ ಒಣಗಿ ಹೋಗಿರುವುದು.  | Kannada Prabha

ಸಾರಾಂಶ

ಮುಂಗಾರು ಕೈಕೊಟ್ಟು ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರಿಗೆ ಹಿಂಗಾರು ಕೂಡ ಕೈಹಿಡಿಯಲಿಲ್ಲ. ಬಿತ್ತನೆಗೆ ಭೂಮಿ ಹದಗೊಳಿಸಿ, ಬೀಜ ಬಿತ್ತಿದ ರೈತರು ಮಳೆಯ ನಿರೀಕ್ಷೆಯಲ್ಲಿಯೇ ಹಿಂಗಾರು ಕೂಡಾ ಸಂಪೂರ್ಣ ಕಳೆದು ಹೋಗುವ ಹಂತಕ್ಕೆ ತಲುಪಿದೆ.

ಶೇ. 80 ಮಳೆ ಕೊರತೆ, ವಾಡಿಕೆ ಬಿತ್ತನೆಗೆ ಹೋಲಿಸಿದರೆ ಶೇ. 20ರಷ್ಟು ಕ್ಷೇತ್ರ ಕುಸಿತ, ಬಿತ್ತಿದ್ದ ಬೆಳೆಯೂ ನೆಲದಲ್ಲೇ ನಾಶವಾಗುವ ಭೀತಿಯಲ್ಲಿ ರೈತ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಮುಂಗಾರು ಕೈಕೊಟ್ಟು ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರಿಗೆ ಹಿಂಗಾರು ಕೂಡ ಕೈಹಿಡಿಯಲಿಲ್ಲ. ಬಿತ್ತನೆಗೆ ಭೂಮಿ ಹದಗೊಳಿಸಿ, ಬೀಜ ಬಿತ್ತಿದ ರೈತರು ಮಳೆಯ ನಿರೀಕ್ಷೆಯಲ್ಲಿಯೇ ಹಿಂಗಾರು ಕೂಡಾ ಸಂಪೂರ್ಣ ಕಳೆದು ಹೋಗುವ ಹಂತಕ್ಕೆ ತಲುಪಿದೆ. ಮಳೆಯ ಅಭಾವದಿಂದ ಬಿತ್ತನೆ ಕ್ಷೇತ್ರ ಕುಸಿದಿದ್ದರೆ, ಬಿತ್ತನೆಯಾದ ಜಮೀನುಗಳಲ್ಲಿಯೂ ಬೆಳೆ ಮೊಳಕೆಯೊಡೆದಿಲ್ಲ.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 80ರಷ್ಟು ಕೊರತೆ ದಾಖಲಾಗಿದ್ದು, ಹಿಂಗಾರು ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಜೂನ್‌ನಿಂದಲೇ ಪ್ರತಿ ತಿಂಗಳು ಮಳೆ ಕೊರತೆ ಎದುರಾಗುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಇಲ್ಲದಂತಾಗಿದೆ. ಪರಿಣಾಮ ಕೃಷಿ ಇಲಾಖೆ ನಿಗದಿಪಡಿಸಿದ್ದ ಬಿತ್ತನೆ ಗುರಿ ತಲುಪಲು ಸಾಧ್ಯವಾಗಿಲ್ಲ. ಕಡಲೆ, ಬಿಳಿಜೋಳ, ಗೋಧಿ, ಶೇಂಗಾ, ಸೂರ್ಯಕಾಂತಿ, ಕುಸುಬೆ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಗುರಿ ತಲುಪದ ಹಿಂಗಾರು ಬಿತ್ತನೆ:

2026-27ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 628515 ಎಕರೆ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ 499642 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಗುರಿಯ ಶೇ. 79.5ರಷ್ಟು ಬಿತ್ತನೆಯಾಗಿದ್ದು, ಸುಮಾರು 128873 ಎಕರೆ ಪ್ರದೇಶ ಬಿತ್ತನೆಯಿಂದ ಹೊರಗುಳಿದಿದೆ. ವಾಡಿಕೆ ಬಿತ್ತನೆ ಕ್ಷೇತ್ರಕ್ಕೆ ಹೋಲಿಸಿದರೆ ಸುಮಾರು ಶೇ. 20.5ರಷ್ಟು ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ.

ಬಿತ್ತಿದ ಬೀಜಕ್ಕೂ ಮೊಳಕೆಯ ಭಾಗ್ಯವಿಲ್ಲ:

ಬಿತ್ತನೆ ಮಾಡಿರುವ ರೈತರ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಬಿತ್ತನೆ ಕ್ಷೇತ್ರದ ಅಂಕಿ ಅಂಶಗಳು ಸಮಾಧಾನಕರವಾಗಿ ಕಂಡರೂ, ವಾಸ್ತವ ಹೊಲಗಳಲ್ಲಿ ಬೆಳೆ ಪರಿಸ್ಥಿತಿ ಆತಂಕಕಾರಿಯಾಗಿದೆ. ಕೆಲವು ಜಮೀನುಗಳಲ್ಲಿ ಬೀಜ ಮೊಳಕೆಯೊಡೆದು ಮೇಲಕ್ಕೆ ಬಂದ ಬಳಿಕ ತೇವಾಂಶದ ಕೊರತೆಯಿಂದ ಒಣಗಿಹೋಗಿದೆ. ಇನ್ನೂ ಹಲವು ಜಮೀನುಗಳಲ್ಲಿ ಬಿತ್ತಿದ ಬೀಜ ಭೂಮಿಯಲ್ಲಿಯೇ ಮೊಳಕೆಯೊಡೆದಿಲ್ಲ. ಬಿತ್ತನೆಗಾಗಿ ಬೀಜ, ಗೊಬ್ಬರ, ಉಳುಮೆ, ಕೂಲಿ ಸೇರಿದಂತೆ ಹಣ ವೆಚ್ಚ ಮಾಡಿರುವ ರೈತರಿಗೆ ಈಗ ಮರುಬಿತ್ತನೆ ಮಾಡುವ ಸ್ಥಿತಿಯೂ ಇಲ್ಲ. ಮಳೆಯಿಲ್ಲದೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

--------

ಕೋಟ್

ಮುಂದೆ ಮಳೆಯಾಗಬಹುದು ಎನ್ನುವ ಭರವಸೆ ಇಟ್ಟುಕೊಂಡು ಸಾಕಷ್ಟು ಸಾಲ ಮಾಡಿಕೊಂಡು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದೆವು, ಆದರೆ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆ ಬಿತ್ತನೆ ಮಾಡಿದ ಬೀಜಗಳು ಹುಟ್ಟಲೇ ಇಲ್ಲ, ಇದರಿಂದಾಗಿ ರೈತರಿಗೆ ತೀವ್ರ ತೊಂದರೆಯಾಗಿದ್ದು ಕೂಡಲೇ ಕಳೆದ ಸಾಲಿನ ಬೆಳೆವಿಮೆ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಬೇಕು. ರೈತರ ನೆರವಿಗೆ ಧಾವಿಸಬೇಕು.

ಪರಮೇಶ್ವರಪ್ಪ ಜಂತ್ಲಿ, ರೈತ ಮುಖಂಡ ಗದಗ

---------

ಕೋಟ್

ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಯಾಗಿದೆ, ಆದರೆ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆ ಯಾವುದೇ ಬೆಳೆಗಳಿಗೆ ಬೇಕಾಗುವಷ್ಟು ತೇವಾಂಶ ಭೂಮಿಯಲ್ಲಿ ಇಲ್ಲ.

ಚೇತನಾ ಪಾಟೀಲ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಗದಗ

------

ಬಾಕ್ಸ್

ಬೆಳೆವಾರು ಬಿತ್ತನೆ ವಿವರ (ಎಕರೆಗಳಲ್ಲಿ)

ಬೆಳೆ ವಾಡಿಕೆ ಬಿತ್ತನೆ ವಾಸ್ತವ ಬಿತ್ತನೆ ಗುರಿ ಸಾಧನೆ

ಕಡಲೆ 390800 353988 90.6%

ಬಿಳಿಜೋಳ 67375 50305 74.7%

ಗೋಧಿ 45887 23478 51.1%

ಶೇಂಗಾ 20063 13830 68.9%

ಸೂರ್ಯಕಾಂತಿ 34775 14483 41.6%

ಕುಸುಬೆ 20550 14728 71.7%

ಇತರೆ 49065 28833 58.7%

ಒಟ್ಟು 628515 499642 79.5%28ಜಿಡಿಜಿ10

ತೇವಾಂಶ ಕೊರತೆಯಿಂದಾಗಿ ಒಣಗುತ್ತಿರುವ ಕಡಲೆ ಬೆಳೆ

28ಜಿಡಿಜಿ10ಎ

ತೀವ್ರ ತೇವಾಂಶದ ಕೊರತೆಯಿಂದಾಗಿ ಜೋಳದ ಬೆಳೆ ಅಲ್ಲಲ್ಲಿ ಒಣಗಿ ಹೋಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ