ಸಂಕ್ರಮಣ, ಗವಿಸಿದ್ದೇಶ್ವರ ಜಾತ್ರೆಗೆ ಭಕ್ತಸಾಗರ

KannadaprabhaNewsNetwork |  
Published : Jan 16, 2026, 01:00 AM IST
15ಕೆಪಿಎಲ್21 ಮಹಾದಾಸೋಹಕ್ಕೆ ಭಕ್ತರ ಸಾಗರವೇ ಬಂದಿರುವುದು 15ಕೆಪಿಎಲ್22 ಮಹಾದಾಸೋಹದಲ್ಲಿ ಭಕ್ತ ಸಾಗರ ಪ್ರಸಾದ ಸ್ವೀಕಾರ ಮಾಡುತ್ತಿರುವುದು.15ಕೆಪಿಎಲ್23 ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಭಕ್ತರಿಗೆ ಅನುಕೂಲವಾಗಲಿ ಎಂದು ಕೆಳಗೆ ಬಂದು ದರ್ಶನ ನೀಡುತ್ತಿರುವುದು.15ಕೆಪಿಎಲ್24 ಕೊಪ್ಪಳಶ್ರೀ ಗವಿಸಿದ್ಧೇಶ್ವರ ಮಹಾದೋಸಕ್ಕೆ ಲಕ್ಷೋಪಲಕ್ಷ ಭಕ್ತರು ಆಗಮಿಸಿದ್ದರಿಂದ ಅನ್ನ ಮಾಡುತ್ತಿರುವುದು.15ಕೆಪಿಎಲ್25 ತುಂಗಭದ್ರಾ ನದಿಯಲ್ಲಿ ಸಂಕ್ರಮಣದ ದಿನ ಮಿಂದೆದ್ದ ಭಕ್ತರು | Kannada Prabha

ಸಾರಾಂಶ

ಇದೇ ಮೊದಲ ಬಾರಿಗೆ ಎರಡು ಮೂರು ಪಟ್ಟು ಜನರು ಜಿಲ್ಲೆಯ ಪ್ರವಾಸಿ ತಾಣ, ತುಂಗಭದ್ರಾ ನದಿಗೆ ಬಂದಿದ್ದು, ಇದೆಲ್ಲವನ್ನು ಮೀರಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸಿದ್ದಾರೆ

ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಲಕ್ಷಾಂತರ ಜನರು, ಅಂಜನಾದ್ರಿಯಲ್ಲಿ ದರ್ಶನ ಪಡೆದ ಸಹಸ್ರಾರು ಭಕ್ತರು. ಶ್ರೀಗವಿಸಿದ್ಧೇಶ್ವರ ಜಾತ್ರೆಗೆ ಹರಿದ ಬಂದ ಲಕ್ಷೋಪ ಲಕ್ಷೋಪ ಭಕ್ತರು.

ಇದು, ಜಿಲ್ಲಾದ್ಯಂತ ಸಂಕ್ರಮಣದ ದಿನವಾದ ಗುರುವಾರ ಕಂಡುಬಂದ ದೃಶ್ಯಾವಳಿ ಮತ್ತು ಹರಿದುಬಂದ ಜನಸಾಗರ.

ಹೌದು, ಕೊಪ್ಪಳ ಜಿಲ್ಲಾದ್ಯಂತ ದೇವಸ್ಥಾನಗಳಿಗೆ ಮತ್ತು ತುಂಗಭದ್ರಾ ನದಿಗೆ ಸಂಕ್ರಮಣದ ದಿನ ವಿಪರೀತ ಸಂಖ್ಯೆಯಲ್ಲಿ ಬಂದು ಪುಣ್ಯಸ್ನಾನ ಮಾಡಿ, ದೇವರ ದರ್ಶನ ಮಾಡಿ ಪುನೀತರಾಗಿದ್ದಾರೆ.

ಇದೇ ಮೊದಲ ಬಾರಿಗೆ ಎರಡು ಮೂರು ಪಟ್ಟು ಜನರು ಜಿಲ್ಲೆಯ ಪ್ರವಾಸಿ ತಾಣ, ತುಂಗಭದ್ರಾ ನದಿಗೆ ಬಂದಿದ್ದು, ಇದೆಲ್ಲವನ್ನು ಮೀರಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸಿದ್ದಾರೆ.

ಸಂಕ್ರಮಣದ ದಿನ ತುಂಗಭದ್ರಾ ನದಿಯಲ್ಲಿ ಬೆಳಗ್ಗೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸ್ನಾನ ಮಾಡಿ ಪುನೀತರಾಗುತ್ತಿದ್ದರು. ಸಂಕ್ರಮಣದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲಾಗಿತ್ತು. ಇದರಿಂದ ತುಂಗಭದ್ರಾ ನದಿಯಲ್ಲಿ ಸಂಕ್ರಮಣದ ಸಂಭ್ರಮ ಮುಗಿಲು ಮುಟ್ಟುವಂತಾಗಿತ್ತು.

ತುಂಗಭದ್ರಾ ನದಿಯುದ್ದಕ್ಕೂ ಸ್ನಾನ ಮಾಡುವವರು ಹುಲಿಗೆಮ್ಮ ದೇವಸ್ಥಾನ, ಶಿವಪುರದ ಮಾರ್ಕಂಡೆಯ ದೇವಸ್ಥಾನ ಹಾಗೂ ಅಂಜನಾದ್ರಿಯ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಲಕ್ಷೋಪಲಕ್ಷ ಭಕ್ತ ಸಾಗರ: ಸಂಕ್ರಮಣಕ್ಕೆಂದು ಬಂದಿದ್ದ ಲಕ್ಷೋಪಲಕ್ಷ ಭಕ್ತರಲ್ಲಿ ಬಹುತೇಕರು ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ದರ್ಶನ ಪಡೆದು ನಂತರ ಪ್ರಸಾದ ಸ್ವೀಕಾರ ಮಾಡಿದರು.

ಕೊಪ್ಪಳ ಗವಿಸಿದ್ಧೇಶ್ವರ ಮಠಕ್ಕೆ ಲಕ್ಷೋಪ ಲಕ್ಷ ಭಕ್ತರು ಆಗಮಿಸಿದ್ದರಿಂದ ಗವಿಮಠ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ ಆಗಿದ್ದು ಸಮಸ್ಯೆಯಾಯಿತು. ದೊಡ್ಡ ಸಂಖ್ಯೆಯಲ್ಲಿ ಏಕಕಾಲದಲ್ಲಿ ಆಗಮಿಸಿದ್ದರಿಂದ ಗವಿಮಠಕ್ಕೆ ತೆರಳಲು ಗಂಟೆಗಟ್ಟಲೇ ಕಾಯಬೇಕಾಯಿತು. ಮಹಾದಾಸೋಹದಲ್ಲಿ ಏಕಕಾಲದಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಪ್ರಸಾದ ಸಿದ್ಧ ಮಾಡಿ, ಬಡಿಸಲು ಹರಸಾಹಸ ಮಾಡುವಂತೆ ಆಯಿತು.

ನೂರು ಕ್ವಿಂಟಲ್‌ಗೂ ಅಧಿಕ ಅಕ್ಕಿ:ಮಹಾದಾಸೋಹಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ಸಂಜೆಯ ವೇಳೆಗೆ ಬರೋಬ್ಬರಿ ನೂರು ಕ್ವಿಂಟಲ್ ಅಕ್ಕಿಯ ಅನ್ನ ಮಾಡಿ ಬಡಿಸಲಾಯಿತು. ಜನ ಬರುತ್ತಿದ್ದಂತೆ ಸಿದ್ಧ ಮಾಡಿ, ಬಡಿಸುತ್ತಲೇ ಇರುವುದರಿಂದ ಭಕ್ತರಿಗೆ ಪ್ರಸಾದ ಸ್ವೀಕಾರಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ.

ಮಹಾದಾಸೋಹದಲ್ಲಿ ಪ್ರಸಾದ ಬಡಿಸಲು ಸಹ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದು ಗವಿಮಠದ ವಿಶೇಷ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು.

ದರ್ಶನ ನೀಡಿದ ಗವಿಶ್ರೀಗಳು:ಗವಿಸಿದ್ಧೇಶ್ವರ ಜಾತ್ರೆಗೆ ಬಂದಿದ್ದ ಭಕ್ತರು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ದರ್ಶನ ಪಡೆಯಲು ಎರಡು ಮೂರು ಗಂಟೆ ಸರದಿಯಲ್ಲಿ ನಿಲ್ಲಬೇಕಾಯಿತು.

ಹೀಗಾಗಿ ಗವಿಯ ಬಳಿ ಆರ್ಶಿವಾದ ನೀಡುತ್ತಿದ್ದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಭಕ್ತರಿಗೆ ಅನುಕೂಲವಾಗಲಿ ಎಂದು ಕೆಳಗೆ ಬಂದು ಭಕ್ತರಿಗೆ ದರ್ಶನ ನೀಡಿದರು.

ನಾಲ್ಕಾರು ಲಕ್ಷ:ಗವಿಸಿದ್ಧೇಶ್ವರ ಜಾತ್ರೆಗೆ ಗುರುವಾರ ಬರೋಬ್ಬರಿ ನಾಲ್ಕಾರು ಲಕ್ಷ ಭಕ್ತರು ಆಗಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ತಡರಾತ್ರಿಯವರೆಗೂ ಭಕ್ತರು ಆಗಮಿಸುತ್ತಲೇ ಇದ್ದರು. ಹೀಗಾಗಿ, ಭಕ್ತರ ಸಂಖ್ಯೆ ನಾಲ್ಕಾರು ಲಕ್ಷಕ್ಕೂ ಅಧಿಕವೇ ಆಗಿರಬಹುದು ಎಂದು ಹೇಳಲಾಗುತ್ತದೆ.

ರಥೋತ್ಸವದ ಬಳಿಕ ಭಾನುವಾರ ಬಂದಿರುವಂತೆಯೇ ಸಂಕ್ರಮಣದ ದಿನವೂ ಮಿತಿಮೀರಿ ಭಕ್ತರು ಆಗಮಿಸಿದ್ದು, ಬಂದವರೆಲ್ಲರಿಗೂ ಮಹಾದಾಸೋಹದಲ್ಲಿ ಪ್ರಸಾದ ಮಾಡಿ ಬಡಿಸಲಾಗುತ್ತದೆ. ಎಷ್ಟೆಷ್ಟು ಎನ್ನುವುದನ್ನು ಈಗಲೇ ಲೆಕ್ಕ ಹಾಕುವುದು ಕಷ್ಟವಾಗುತ್ತದೆ ಎಂದು ದಾಸೋಹ ಉಸ್ತುವಾರಿ ಮಂಜುನಾಥ ಅಂಗಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ