ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾಡಿನ ಚಿಕ್ಕ ತಿರುಪತಿ ಎಂದೇ ಕರೆಯಲ್ಪಡುವ ತಾಲೂಕಿನ ಹುಲಗಿನ ಮುರಡಿ ವೆಂಕಟರಮಣಸ್ವಾಮಿ ತೇರು ಸಂಕ್ರಾಂತಿ ಹಬ್ಬದಂದು ಸಹಸ್ರಾರು ಭಕ್ತ ಸಾಗರದ ನಡುವೆ ಮಂಗಳವಾರ ಅದ್ಧೂರಿಯಾಗಿ ನಡೆಯಿತು.ತೆರಕಣಾಂಬಿ ಬಳಿಯ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನ 12.45 ಕ್ಕೆ ತಹಸೀಲ್ದಾರ್ ಟಿ.ರಮೇಶ್ ಬಾಬು ಅವರು ಈಡಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಾಜ್ಯದ ಭಕ್ತರು ಸೇರಿದಂತೆ ತಮಿಳುನಾಡು ಹಾಗೂ ಕೇರಳದ ಸಾವಿರಾರು ಮಂದಿ ಭಕ್ತರು ರಥವನ್ನು ಗೋವಿಂದ… ಗೋವಿಂದ ಎಂಬ ನಾಮ ಸ್ಮರಣೆಯೊಂದಿಗೆ ರಥವನ್ನು ಮಕ್ಕಳು, ಮಹಿಳೆಯರೆನ್ನದೆ ಬೆಟ್ಟಕ್ಕೆ ಆಗಮಿಸಿ ದೇವಸ್ಥಾನದ ಒಂದು ಸುತ್ತು ಎಳೆದರು.
ಎಲ್ಲೆಂದರಲ್ಲಿ ಮಕ್ಕಳು, ಮಹಿಳೆಯರೆನ್ನದೆ ದೇವಸ್ಥಾನದ ಬಳಿ ನಿಂತು ರಥ ತೆರಳುವುದನ್ನು ಕಂಡು ಪುಳಕಿತರಾದರು. ಆಷಾಢ ಮಾಸ ಮುಗಿದ ಕಾರಣ ನೂರಾರು ಮಂದಿ ನವ ಜೋಡಿಗಳು ಬಂದು ತೇರಿಗೆ ಹಣ್ಣು-ಜವನ ಎಸೆದರು. ಬೆಟ್ಟದ ತಪ್ಪಲು ಸೇರಿದಂತೆ ಬೆಟ್ಟದ ಮೇಲೆ ಹರಕೆ ಹೊತ್ತ ಭಕ್ತರು ಉಪಹಾರ ಹಾಗೂ ಪಾನಕ, ಮಜ್ಜಿಗೆಯನ್ನು ಬಂದ ಭಕ್ತ ಸಮೂಹಕ್ಕೆ ವಿತರಿಸಿದರು. ಉಪಹಾರಕ್ಕಾಗಿ ಭಕ್ತರು ತಳ್ಳಾಟ ನೂಕಾಟಗಳು ನಡೆದ ದೃಶ್ಯ ಕಂಡು ಬಂತು.ನಡೆದು ಬೆಟ್ಟ ಹತ್ತಿದ ಭಕ್ತರು:
ಸಾರಿಗೆ ಬಸ್‌ಗಳಲ್ಲಿ ಭಕ್ತರು ಬೆಟ್ಟ ಏರಿದರೆ, ಹರಕೆ ಹೊತ್ತ ಸಾವಿರಾರು ಭಕ್ತರು ನೆರೆಯ ಗ್ರಾಮ ಹಾಗೂ ಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ ಕಾಲು ದಾರಿಯಲ್ಲಿ ಮಹಿಳೆಯರು ಸೇರಿ ನಡಿಗೆಯಲ್ಲಿ ಏರಿ ಬಂದರು. ತಾಲೂಕು ಆಡಳಿತ ಬೆಟ್ಟಕ್ಕೆ ಸಹಸ್ರಾರು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಅರಿತು ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತುರ್ತು ಸೇವೆಗೆ ಆ್ಯಂಬುಲೆನ್ಸ್ ತರಿಸಲಾಗಿತ್ತು. ಬೇಗೂರು ಸರ್ಕಲ್ ಇನ್ಸ್‌ಪೆಕ್ಟರ್ ಮಾರ್ಗದರ್ಶನದಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರು.ಸಂಚಾರ ಕಿರಿಕಿರಿ: ಖಾಸಗಿ ಬಸ್, ಟೆಂಪೋ, ಆಟೋಗಳ ಆರ್ಭಟ ಹೆಚ್ಚಾದ ಕಾರಣ ಬೆಟ್ಟಕ್ಕೆ ತೆರಳುವ ಮಾರ್ಗದ ರಸ್ತೆಯಲ್ಲಿ ವಾಹನ ಸಂಚಾರದಲ್ಲಿ ಕಿರಿಕಿರಿ ಉಂಟಾಗಿತ್ತು. ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
ಎಸ್ಪಿ ಭೇಟಿ: ವೆಂಕಟರಮಣಸ್ವಾಮಿ ಜಾತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಹಾಗೂ ಎಸ್ಪಿ ಪತಿ ನಾಗಶಯನ, ಡಿವೈಎಸ್ಪಿ ಲಕ್ಷ್ಮಯ್ಯ,ಗುಂಡ್ಲುಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಪರಶಿವಮೂರ್ತಿ ಇದ್ದರು.