ಕನ್ನಡಪ್ರಭ ವಾರ್ತೆ ಮಂಗಳೂರು
ಈ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ, ಕೇರಳ, ಗೋವಾದಲ್ಲಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿರುವ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ಬಾಲಕಿ ಸನ್ನಿಧಿ ಕಶೆಕೋಡಿ, ಇದೀಗ ತನ್ನ ನಾಲ್ವರು ಸ್ನೇಹಿತರ ಜತೆಗೂಡಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಮತದಾನ ಜಾಗೃತಿ ಮೂಡಿಸಲು ಸಿದ್ಧತೆ ನಡೆಸಿದ್ದಾಳೆ.ದೇಶದ ಶಕ್ತಿ ಕೇಂದ್ರವಾಗಿರುವ ದೆಹಲಿಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟಾನುಘಟಿ ನಾಯಕರು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂಥ ಸನ್ನಿವೇಶದಲ್ಲಿ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಜಾಗೃತಿ ಮೂಡಿಸಲಿದ್ದಾರೆ ಸನ್ನಿಧಿ ಆಂಡ್ ಟೀಂ. ಇದೇ ಮೇ 17,18ರಂದು ದೆಹಲಿ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಈ ಐದು ಮಂದಿ ಮಕ್ಕಳು ಮತದಾನ ಮಾಡಲು ಜನರ ಮನವೊಲಿಸಲಿದ್ದಾರೆ. ಅದಕ್ಕಾಗಿ ಮೇ 15ರಂದು ಜಿಲ್ಲೆಯಿಂದ ರೈಲಿನಲ್ಲಿ ತೆರಳಲಿದ್ದಾರೆ.
ಸನ್ನಿಧಿ ಜತೆಗೆ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶಾರ್ವಿಮ್, ಅಬ್ದುಲ್ ಮಾಹಿಝ್, ಸಮೃದ್ಧಿ, ವರ್ಷಿತ್ ಕೈಜೋಡಿಸಲಿದ್ದಾರೆ. ಒಂದು ದಿನ ಶಾಲೆಯ ಸಮವಸ್ತ್ರದಲ್ಲಿ, ಮತ್ತೊಂದು ದಿನ ಸ್ಕೌಟ್ಸ್ ಗೈಡ್ಸ್ ಸಮವಸ್ತ್ರದಲ್ಲಿ ಈ ಮಕ್ಕಳು ಜಾಗೃತಿ ಮೂಡಿಸಲಿದ್ದಾರೆ.ಆರು ಭಾಷೆಗಳಲ್ಲಿ ಪ್ರಚಾರ: ದೆಹಲಿಯಲ್ಲಿ ಈ ಮಕ್ಕಳು ಆರು ಭಾಷೆಗಳಾದ ಹಿಂದಿ, ಇಂಗ್ಲಿಷ್, ಕನ್ನಡ, ಮಲಯಾಳಂ, ತುಳು, ಕೊಂಕಣಿಯಲ್ಲಿ ಜಾಗೃತಿ ಮೂಡಿಸಲು ಸರ್ವ ಸಿದ್ಧತೆ ನಡೆಸಿದ್ದಾರೆ. ಮತದಾನ ಜಾಗೃತಿಯ ಹಿಂದಿ ಹಾಡುಗಳನ್ನೂ ಹಾಡಿ ಆಕರ್ಷಿಸಲಿದ್ದಾರೆ, ಕರಪತ್ರಗಳನ್ನು ಹಂಚಲಿದ್ದಾರೆ. ಮಕ್ಕಳೊಂದಿಗೆ ಸನ್ನಿಧಿಯ ತಂದೆ ಲೋಕೇಶ್ ಕಶೆಕೋಡಿ, ಹಾಗೂ ತಾಯಿ ಜತೆಗಿರುತ್ತಾರೆ.ಶಾಲೆಯ ಖರ್ಚು: ಮಕ್ಕಳ ತಂಡದ ಈ ಕಾರ್ಯಕ್ಕೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸರ್ವ ಪ್ರೋತ್ಸಾಹ ನೀಡಿದ್ದು, ಶಾಲೆಯ ಖರ್ಚಿನಿಂದಲೇ ಮಕ್ಕಳನ್ನು ದೆಹಲಿಗೆ ಕಳುಹಿಸುತ್ತಿರುವುದು ವಿಶೇಷ. ಬಾಲವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಜೆ. ಶೆಟ್ಟಿ, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ., ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಮಕ್ಕಳ ಈ ರಾಷ್ಟ್ರ ಕಟ್ಟುವ ಕಾಯಕಕ್ಕೆ ಬೆನ್ನೆಲುಬಾಗಿದ್ದಾರೆ.
ಚುನಾವಣಾ ಆಯೋಗ ಪ್ರಶಂಸೆ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಸನ್ನಿಧಿ ಕಶೆಕೋಡಿ ಮಾಡಿದ ಮತದಾನ ಜಾಗೃತಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿತ್ತು. ಈ ಬಾರಿ ಕರ್ನಾಟಕದ ದ.ಕ., ಉತ್ತರ ಕನ್ನಡ, ಮಡಿಕೇರಿ ಮಾತ್ರವಲ್ಲದೆ, ಕೇರಳ, ಗೋವಾದಲ್ಲೂ ಸನ್ನಿಧಿ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾಳೆ. ಮಲಯಾಳಂ ಭಾಷೆ ಕಲಿತು ಕೇರಳದ ಜನರ ಮನ ಗೆದ್ದಿದ್ದಾಳೆ. ಜಾಗೃತಿ ಮೂಡಿಸಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸನ್ನಿಧಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.