ಧಾರವಾಡ: ಸದಾಚಾರ, ಸಂಪನ್ನತೆ, ಸಂಸ್ಕಾರ, ಸಂಸ್ಕೃತಿ ನಿತ್ಯದ ಬದುಕಾಬೇಕು. ಜೀವನದಲ್ಲಿ ಚಾರಿತ್ರ್ಯದಿಂದ ಬದುಕಬೇಕು. ರಾಷ್ಟ್ರ ಪ್ರೇಮ, ಗುರು ಹಿರಿಯರಲ್ಲಿ ಗೌರವ ಹೊಂದಿರಬೇಕು. ಹೀಗಿದ್ದಾಗ ಮಾತ್ರ ನಮ್ಮ ಬದುಕಿಗೊಂದು ಬೆಲೆ ಎಂದು ಹಿರಿಯ ವಿದ್ವಾಂಸ ಪ್ರಹ್ಲಾದಾಚಾರ್ಯ ಗಲಗಲಿ ಹೇಳಿದರು.
ಸಾಹಿತಿ ಡಾ. ಹ.ವೆಂ. ಕಾಖಂಡಿಕಿ ಮಾತನಾಡಿ, ಮಾಧ್ವ ವಿದ್ಯಾಪೀಠದ ಸಂಶೋಧನಾ ಸಂಸ್ಥೆ ಈ ಶಿಬಿರದ ಮೂಲಕ ಎಳೆಯ ವಯಸ್ಸಿನ ಬಾಲಕ ಬಾಲಕಿಯರಿಗೆ ಸಂಸ್ಕೃತದಲ್ಲಿ ಮಾತನಾಡಲು, ಓದಲು ತರಬೇತಿ ನೀಡುವ ಉತ್ತಮ ವ್ಯವಸ್ಥೆ ಮಾಡಿದೆ. ಸಂಸ್ಕೃತ ಶ್ಲೋಕಗಳನ್ನು, ಸರಳ ಶಬ್ದಗಳನ್ನು, ಮಂತ್ರಗಳನ್ನು ಶ್ರೇಷ್ಠ ವಿದ್ವಾಂಸರು ಮಕ್ಕಳಿಗೆ ತಿಳಿಯುವ ಹಾಗೆ ಹೇಳಿಕೊಡುವುದರಿಂದ ಮಾತೃಭಾಷೆ ಕನ್ನಡದ ಜತೆ ಇನ್ನೊಂದು ಭಾಷೆಯ ಪರಿಚಯವಾಗುತ್ತದೆ ಎಂದರು.
ವಿದ್ವಾಂಸರಾದ ಪಂ. ಬಿ.ಆರ್. ವೆಂಕಟೇಶಾಚಾರ್ಯ ಸ್ವಾಗತಿಸಿ ಮಾತನಾಡಿ, ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಶಿಬಿರ ಈ ಸಾರಿ ಮೂವತ್ತು ಮಕ್ಕಳಿಗೆ ಹಾಡು, ಚಿತ್ರಕಲೆ, ಸಂಭಾಷಣೆ, ಸ್ತೋತ್ರಗಳು, ಕತೆಗಳು, ಸಂಸ್ಕೃತ ಮೊದಲಾದವುಗಳನ್ನು ಹೇಳಿಕೊಡಲು ಸಾಧ್ಯವಾಯಿತು ಎಂದರು.ಪಂ. ಸುರೇಶಾಚಾರ್ಯ ರಾಯಚೂರು ಮಾತನಾಡಿದರು. ವಿದ್ವಾಂಸ ಕೆರೂರ ಕೇಶವಾಚಾರ್ಯರು, ಪ್ರಾಣೇಶಾಚಾರ್ಯ ಅವಧಾನಿ, ಸತ್ಯಧೀರಾಚಾರ್ಯ, ಡಾ. ಪ್ರಮೋದಾಚಾರ್ಯ ಚಂದಿ, ಶ್ರೀನಿಧಿ ಆಚಾರ್ಯ ಮತ್ತು ಶ್ರೀಮತಿ ಕರ್ಜಗಿ ಪಾಠ ಮಾಡಿದರು. ಕೇಶವ ಅವರು ಸಹಕರಿಸಿದರು. ಮಕ್ಕಳಿಗೆ ಪ್ರಶಸ್ತಿ ಪತ್ರ, ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಪಿ.ಆರ್. ಕುಲಕರ್ಣಿ, ಡಾ. ಅಶೋಕ ಚಚಡಿ, ನಾಗರಾಜ ಕೊಪ್ಪರ, ವೆಂಕಟೇಶ ಕೊರ್ತಿ, ವಸಂತ ದೇಸಾಯಿ, ರಮೇಶ ಕಾಖಂಡಿಕಿ, ಡಾ. ರವಿ, ಸಮೀರ ಕುಲಕರ್ಣಿ ಸೇರಿದಂತೆ ಹಲವರಿದ್ದರು.