ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆ, ಪದ್ಧತಿಯಿಂದ ವಿಮುಖರಾಗುತ್ತಿದ್ದೇವೆ. ಮನಸ್ಸಿನ ಭಾವನೆಗಳು ಚಂಚಲತೆಯಲ್ಲಿ ಮುಳುಗಿವೆ. ಮನಸ್ಸಿನ ಏಕಾಗ್ರತೆ, ದೃಢವಾಡ ಗುರಿ ಹೊಂದಲು ನೆಮ್ಮದಿ, ಸಂತೋಷಕ್ಕಾಗಿ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬಾಗಲಕೋಟೆ ತಾಲೂಕು ಯುವ ಘಟಕ, ಮಹಿಳಾ ಘಟಕ ನೇತೃತ್ವದಲ್ಲಿ ಸೋಮವಾರ ಲಿಂಗ ದೀಕ್ಷೆ, ಲಿಂಗ ಪೂಜೆ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿನಯತೆ, ಸಾತ್ವಿಕ ಜೀವನ, ಸಂಸ್ಕಾರ ಬರಬೇಕು ಅಂದರೆ ಹಿರಿಯರ ಪಾತ್ರ ಬಹುಮುಖ್ಯವಾಗಿದೆ. ಬೇರೆ ಬೇರೆ ಧರ್ಮದಲ್ಲಿ ತಮ್ಮ ಮಕ್ಕಳಿಗೆ ಧಾರ್ಮಿಕ ಆಚರಣೆ, ಪೂಜೆ, ಪದ್ಧತಿ ತಿಳಿಸಿಕೊಡಲು ಬೇಸಿಗೆ ಸಂದರ್ಭದಲ್ಲಿ ಹಬ್ಬ ಹರಿದಿನಗಳಲ್ಲಿ ತರಬೇತಿ ನೀಡಲಾಗುತ್ತದೆ. ತಿಂಗಳುಗಟ್ಟಲೆ ಶಿಬಿರ ಏರ್ಪಡಿಸಲಾಗುತ್ತದೆ. ಆದರೆ ಲಿಂಗಾಯತರಲ್ಲಿ ಕ್ಷೀಣಿಸಿದೆ. ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದೆ. ಸದ್ಯ ಬಾಗಲಕೋಟೆ ನಗರದಲ್ಲಿ ಏರ್ಪಡಿಸಿರುವ ಲಿಂಗ ದೀಕ್ಷೆ, ಲಿಂಗ ಪೂಜೆ ಅಗತ್ಯವಾಗಿ ಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕು. ರಾಜ್ಯದೆಲ್ಲೆಡೆ ಪಸರಿಸುವಂತಾಗಬೇಕು ಎಂದರು.ಸಕಲ ಜೀವ ರಾಶಿಗಳಿಗೆ ಲೇಸನ್ನೆ ಬಯಸಬೇಕು. ಅಂದಾಗ ಮಾನವ ವಿಶ್ವ ಮಾನವ ನಾಗುತ್ತಾನೆ. ಅಲ್ಪಮಾನವನಿಂದ ವಿಶ್ವಮಾನವತೆ ಕಡೆಗೆ ಸಾಗಬೇಕು. ಶಿವಯೋಗ, ಬಸವಯೋಗ ಕರೆಯುತ್ತೇವೆ ಎಂದು ಹೇಳಿದರು.
ಇಳಕಲ್ಲ ವಿಜಯ ಮಹಾಂತ ಮಠದ ಪೂಜ್ಯ ಗುರು ಮಹಾಂತ ಸ್ವಾಮೀಜಿ, ಶಿರೂರ ಮಹಾಂತ ತೀರ್ಥದ ಪೂಜ್ಯ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ 300 ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರಿಗೆ ಪೂಜಾ ಕೈಂಕರ್ಯ, ಲಿಂಗ ದೀಕ್ಷೆ, ಲಿಂಗ ಪೂಜೆ ಬಗ್ಗೆ ಲಿಂಗಾಯತ ಪದ್ಧತಿ ಪ್ರಕಾರ ಮಾರ್ಗದರ್ಶನ ಮಾಡಲಾಯಿತು.ಬಾಗಲಕೋಟೆ ತಾಲೂಕು ಬಣಜಿಗ ಮಹಿಳಾ ಘಟಕದ ಅಧ್ಯಕ್ಷೆ ಮೇಘಾ ಜಿಗಜಿನ್ನಿ, ನಮ್ಮ ದೇಶದಲ್ಲಿ ಮಹಿಳಾ ಕುಲಕ್ಕೆ ವಿಶೇಷ ಗೌರವ, ಸ್ಥಾನ ಮಾನವಿದೆ. ಇಂದು ಅನೇಕ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಆದರೇ ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆಯಿಂದ ದೂರ ಸರಿಯುತ್ತಿರುವುದು ನೋವು ಉಂಟು ಮಾಡಿದೆ. ಇದಕ್ಕೆ ಅವಕಾಶ ನೀಡದೇ, ಲಿಂಗ ಪೂಜೆ ನಿತ್ಯವು ಮಾಡಬೇಕು. ಮಕ್ಕಳಿಗೆ ಅದರ ಮಹತ್ವ ಅರಿತು ಹೇಳಬೇಕು. ವಚನಗಳ ಪಠಣ ಮಾಡುವುದು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬಣಜಿಗ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪಣ್ಣ ಗುಳೇದ, ಗೌರವಾಧ್ಯಕ್ಷೆ ಶಂಕ್ರಮ್ಮ ಮುಚ್ಚಂಡಿ ಮಾತನಾಡಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿ ನೇಮಕಗೊಂಡಿರುವ ವಕೀಲ ಎಸ್.ಎಸ್. ಮಿಟ್ಟಲಕೂಡ, ಯುವ ಸಾಹಿತಿ ಜಾನ್ವಿ ವಾಲಿ ಹಾಗೂ ಅಗ್ನಿವೀರರಾಗಿ ನೌಕಾಪಡೆಗೆ ಸೇರ್ಪಡೆಗೊಂಡಿರುವ ಸಹನಾ ಅಂಗಡಿ ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ತಾಲೂಕ ಅಧ್ಯಕ್ಷ ಬಸವರಾಜ ಶೀಲವಂತರ ಯುವ ಘಟಕದ ಅಧ್ಯಕ್ಷ ವಿನಯ ನಾವಲಗಿ, ಉಪಾಧ್ಯಕ್ಷ ಸಂಗಮೇಶ ಅಂಗಡಿ ಕಾರ್ಯದರ್ಶಿ ಮಹಾಂತೇಶ ಜೋಳದ, ಮಹಿಳಾ ಘಟಕದ ಕಾರ್ಯದರ್ಶಿ ಶಿವಲೀಲಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಮಹಿಳೆಯರಿಗೆ ಜಾನಪದ ಸಂಗೀತ ನೃತ್ಯ, ವಚನ ಗಾಯನ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಮತ್ತಿತರ ಕಾರ್ಯಕ್ರಮ ಜರುಗಿದವು. ಶಾರದಾ ದೇವನಗಾವಿ ಸ್ವಾಗತಿಸಿದರು, ಚೈತ್ರಾ ರವಿ ಕುಮಟಗಿ ಪರಿಚಯಿಸಿದರು. ಶೈಲಾ ಗೊಂಗಡಶೆಟ್ಟಿ ಮಾಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಅದಕ್ಕೆ ಸಾಕ್ಷಿ ಕಳೆದ ವಾರವೇ ಅಂತರಿಕ್ಷದಲ್ಲಿ 286 ದಿನ ಕಳೆದು ಭೂಮಿಗೆ ಮರಳಿದ ಭಾರತ ಮೂಲದ ಅಮೆರಿಕನ ಗಗನಯಾತ್ರಿ ಸುನಿತಾ ವಿಲಿಯಮ್ಸ್. ಒಂದೇ ಕ್ಷೇತ್ರಕ್ಕೆ ಮಹಿಳೆಯರು ಸಿಮೀತಗೊಳ್ಳಬಾರದು. ತಂತ್ರಜ್ಞಾನ, ಅರ್ಥ ಶಾಸ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಬೇಕು. ಹಿಂಜರಿಕೆ ಪಡೆದುಕೊಳ್ಳಬಾರದು.
-ಶೈಲಜಾ ಕೌಜಗೇರಿಬ್ರಾಹ್ಮಾಂಡದಲ್ಲಿ ಅದ್ಭುತವಾದ ಒಂದು ಅಗೋಚರ ಶಕ್ತಿ ಇದೆ ಈ ವಿಚಾರವನ್ನು ವಿಜ್ಞಾನಿಗಳು, ತತ್ವಾಜ್ಞಾನಿಗಳು ಒಪ್ಪಿದ್ದಾರೆ. ಆ ಅಗೋಚರ ಶಕ್ತಿಯೇ ಲಿಂಗ. ಜೀವ ಇದ್ದಲ್ಲಿ ದೇವರು ಇದ್ದಾನೆ. ದೇವರು ನಮ್ಮೋಳಗೆ ಇರಲು ಅಲ್ಲಿ ಜೀವ ಇರಬೇಕು. ಹೀಗಾಗಿ ನಮಗೆ ಜೀವ ಕೊಟ್ಟ ತಂದೆ, ತಾಯಿಗಳೇ ನಿಜವಾದ ದೇವರುಗಳು. ಅವರನ್ನು ಗೌರವದಿಂದ ಕಾಣಬೇಕು. ನಿತ್ಯವು ಲಿಂಗಪೂಜೆ ಮಾಡಿಕೊಳ್ಳಬೇಕು.
- ಗುರು ಮಹಾಂತ ಸ್ವಾಮೀಜಿ ಇಳಕಲ್ಲ ವಿಜಯ ಮಹಾಂತ ಮಠ