ತಾಯಿಯಂತೆ ಪೊರೆವ ಗುಣ ಸಂಸ್ಕೃತ ಭಾಷೆಯದು: ಸುಗುಣೇಂದ್ರ ತೀರ್ಥ ಶ್ರೀಪಾದರು

KannadaprabhaNewsNetwork |  
Published : Sep 20, 2024, 01:43 AM IST
ಸಂಸ್ಕೃತ19 | Kannada Prabha

ಸಾರಾಂಶ

ಪರ್ಯಾಯ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಜ್ಯ ಸಂಸ್ಕೃತ ಭಾಷಾ ಶಿಕ್ಷಕ ಸಂಘ ನೆರವಿನೊಂದಿಗೆ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕ ಸಂಘ ಸಂಸ್ಕೃತೋತ್ಸವ ಮತ್ತು ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಜಗತ್ತಿನ ಯಾವ ಭಾಷೆಗೂ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಸಂಸ್ಕೃತ ಭಾಷೆಯನ್ನು ಹೆಚ್ಚು ಸಂಪೋಷಣೆ ಮಾಡಿದಷ್ಟು ಉಳಿದ ಭಾಷೆಗಳು ಹೆಚ್ಚು ಬೆಳೆಯುತ್ತಾ ಹೋಗುತ್ತವೆ. ತಾಯಿಯಂತೆ ಪೊರೆಯುವ ಗುಣ ಸಂಸ್ಕೃತದ್ದು. ಭಾಷಾ ಕಲಿಕೆಗೊಂದು ಮೂಲಭೂತ ಚೌಕಟ್ಟು ಸಂಸ್ಕೃತದಿಂದ ಪಡೆದರೆ ಉಳಿದ ಯಾವುದೇ ಭಾಷಾ ಕಲಿಕೆ ಕೂಡ ಸುಲಭ ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಹಿರಿಯ ಶ್ರೀಪಾದರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಪರ್ಯಾಯ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಜ್ಯ ಸಂಸ್ಕೃತ ಭಾಷಾ ಶಿಕ್ಷಕ ಸಂಘ ನೆರವಿನೊಂದಿಗೆ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕ ಸಂಘ ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ತಮಗೆ ಆಂಗ್ಲ ಭಾಷೆ ಕಲಿಯಲು ಸಾಧ್ಯವಾದದ್ದು ಸಂಸ್ಕೃತವನ್ನು ೧೨ ವರ್ಷ ಕಾಲ ಅಭ್ಯಾಸ ಮಾಡಿದ್ದು ಕಾರಣವಾಯಿತು. ವಿಶ್ವ ಸಂಸ್ಥೆಯಲ್ಲಿ, ಅಮೆರಿಕ, ರಷ್ಯಾ ಇತ್ಯಾದಿ ಹಲವು ದೇಶಗಳ ಅಧ್ಯಕ್ಷರೊಂದಿಗೆ ಎಲ್ಲ ಕಡೆ ಉತ್ತಮವಾಗಿ ಇಂಗ್ಲಿಷ್ ಮಾತಾನಾಡಲು ಸಂಸ್ಕೃತ ಭಾಷಾ ಕಲಿಕೆಯ ಚೌಕಟ್ಟು ಕಾರಣವಾಯಿತು. ವಿದೇಶಿಯರು ಸಂಸ್ಕೃತದ ಬಗ್ಗೆ ಹೆಚ್ಚು ಆಸಕ್ತಿ ಪ್ರೀತಿ ಹೊಂದಿದ್ದಾರೆ. ಲಂಡನ್‌ನಲ್ಲಿ ಹಿಬ್ರು ಭಾಷೆಯನ್ನು ರದ್ದು ಮಾಡಿ ಅದರ ಬದಲಿಗೆ ಸಂಸ್ಕೃತ ಕಲಿಸುತ್ತಾ ಇದ್ದಾರೆ ಎಂದವರು ಹೇಳಿದರು.

ಇತ್ತೀಚಿಗೆ ಸಂಸ್ಕೃತ ಕುರಿತ ತಮ್ಮ ಅಭಿಪ್ರಾಯ ವಿವಾದವಾದ ಹಿನ್ನೆಲೆಯಲ್ಲಿ, ಸಂಸ್ಕೃತ ಬಗ್ಗೆ ಏನು ಮಾತಾಡಿದ್ರು ವಿವಾದ ಯಾಕೆ ಮಾಡ್ತಾರೆ ಅಂದ್ರೆ ಅದು ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚು ಯಾಕೆ ಎಂದರೆ ಉತ್ತಮವಾದ್ದನ್ನು ಕಂಡರೆ ಅಲ್ಪರಿಗೆ ಯಾವಾಗಲೂ ಹೊಟ್ಟೆ ಕಿಚ್ಚೆ ಅಲ್ಲವೇ ಎಂದು ನಗುತ್ತಲೇ ವಿವರಿಸಿದರು.ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ. ಗಣಪತಿ, ಡಯಟ್ ಸಂಸ್ಥೆಯ ಉಪಪ್ರಾಂಶುಪಾಲ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಸಂಸ್ಕೃತಾಭಿಮಾನಿ ದಾನಿ ನಿರಂಜನ್ ಚೋಳಯ್ಯ ಮೊದಲಾದವರು ಉಪಸ್ಥಿತರಿದ್ದರು.ಹಿರಿಯ ವಿದ್ವಾಂಸ ನಿವೃತ್ತ ಪ್ರಾಂಶುಪಾಲ ಮಧುಸೂದನ ಭಟ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಹೆಗಡೆ ವಂದಿಸಿದರು. ಶಿಕ್ಷಕ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.ಕಳೆದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಮಾರು ೨೩೦ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ