ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸೋಮವಾರ ನಗರದ ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸುಮಾರು 10 ವರ್ಷಗಳ ಹಿಂದೇ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮಾರುಕಟ್ಟೆ ನಿರ್ಮಿಸಿ, ವ್ಯಾಪಾರಿಗಳಿಗೆ ಈ ಹಿಂದೆಯೇ ಹಂಚಿಕೆ ಮಾಡಲಾಗಿದೆ. ಆದರೂ ವ್ಯಾಪಾರಿಗಳು ಸ್ಥಳಾಂತರವಾಗಿಲ್ಲ. ಇದರಿಂದ ನಗರಸಭೆಗೆ ಆರ್ಥಿಕ ನಷ್ಟ ಉಂಟಾಗಿದೆ. ಕೂಡಲೇ ಸಂತೆಹೊಂಡದ ಬಳಿಯ ತರಕಾರಿ, ಹಣ್ಣು ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. 10 ವರ್ಷಗಳ ಹಿಂದಿನ ಟೆಂಡರ್ ರದ್ದುಮಾಡಿ ಹೊಸದಾಗಿ ಅರ್ಜಿ ಕರೆದು, ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಬೇಕು. ಇಲ್ಲವಾದರೆ, ನಗರಸಭೆಗೆ ಉಂಟಾದ ಅರ್ಥಿಕ ನಷ್ಟವನ್ನು ಆಯುಕ್ತರೇ ಭರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವ ಡಿ.ಸುಧಾಕರ್ ಎಚ್ಚರಿಸಿದರು.
ನಗರದ ಗಾಂಧಿ ವೃತ್ತ ಹಾಗೂ ಸಂತೆಹೊಂಡದ ಬಳಿ 15ನೇ ಹಣಕಾಸು ಯೋಜನೆಯಡಿ ಸಂಕೀರ್ಣ ನಿರ್ಮಾಣ ಕಾಮಗಾರಿ ಆರಂಭಿಸಿ, ಪ್ರಸ್ತುತ ಸ್ಥಗಿತಗೊಂಡಿರುವ ವಾಣಿಜ್ಯ ಸಂಕೀರ್ಣಗಳ ಕಾಮಗಾರಿಯನ್ನು ಪುನರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.ಬಹಳ ವರ್ಷಗಳ ಹಿಂದೆ 15ನೇ ಹಣಕಾಸು ಯೋಜನೆಯಡಿ ಇಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅನುದಾನ ಕೊರತೆಯಿಂದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಡಿಎಂಎಫ್ ಹಾಗೂ ನಗರಸಭೆಯ ಅನುದಾನ ನೀಡಿ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಮುಂದುವರಿಸಲು ಆಲೋಚಿಸಲಾಗಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.